32 ಮಸೂದೆಗಳಿಗೆ ರಾಜ್ಯಪಾಲರಿಂದ ಅಂಕಿತ: ಎಚ್.ಕೆ.ಪಾಟೀಲ್

ಎಚ್.ಕೆ.ಪಾಟೀಲ್
ಬೆಂಗಳೂರು, ಸೆ.15: ಇತ್ತೀಚೆಗೆ ಜರುಗಿದ ವಿಧಾನ ಮಂಡಲ ಮುಂಗಾರು ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಅನುಮೋದನೆ ನೀಡಿ ಅಂಕಿತಕ್ಕೆ ರವಾನಿಸಿದ್ದ 32 ಮಸೂದೆಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಒಟ್ಟು 39 ಮಸೂದೆಗಳು ಅಂಗೀಕರಿಸಲ್ಪಟ್ಟಿದ್ದು, ಈ ಪೈಕಿ ಎರಡು ಮಸೂದೆಗಳನ್ನು ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದಾರೆ.
ಉಳಿದ 37 ಮಸೂದೆಗಳನ್ನು 'ರಾಜ್ಯಪತ್ರ'ದಲ್ಲಿ ಪ್ರಕಟಿಸಲಾಗಿದೆ. ಮೂರು ಮಸೂದೆಗಳನ್ನು ಕೇಂದ್ರ ಸರಕಾರದ ಕಾನೂನುಗಳಿಗೆ ತಿದ್ದುಪಡಿಯಾಗಿರುವುದರಿಂದ ರಾಜ್ಯ ಸರಕಾರದ ಕೋರಿಕೆಯ ಮೇರೆಗೆ ರಾಜ್ಯಪಾಲರು ರಾಷ್ಟ್ರಪತಿಯ ಅಂಕಿತಕ್ಕಾಗಿ ಕಳುಹಿಸಿದ್ದಾರೆ.
ಒಂದು ಮಸೂದೆ ರಾಜ್ಯಪಾಲರ ಬಳಿ ಬಾಕಿ ಇದೆ ಮತ್ತು ಇನ್ನೊಂದು ಮಸೂದೆಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತಿದೆ. ಒಂದೇ ದಿನದಲ್ಲಿ 15 ಮಸೂದೆಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿರುವುದು ದಾಖಲೆಯಾಗಿದೆ ಎಂದು ಎಚ್.ಕೆ.ಪಾಟೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.