ವಿದ್ಯಾರ್ಥಿ, ಯುವ ಜನರಲ್ಲಿ ನಾಯಕತ್ವ ಗುಣ ಬೆಳೆಸಲು 'ನನ್ನ ಮತ ನನ್ನ ಹಕ್ಕು' ಕಾರ್ಯಕ್ರಮ: ಡಿಕೆಶಿ

ಬೆಂಗಳೂರು, ಸೆ.15: "ವಿದ್ಯಾರ್ಥಿ, ಯುವ ಜನರಲ್ಲಿ ನಾಯಕತ್ವ ಗುಣವನ್ನು ಬೆಳೆಸಬೇಕಿದೆ. ಮತದಾನ, ಪ್ರಜಾಪ್ರಭುತ್ವದ ಮೌಲ್ಯವನ್ನು ಅರಿತುಕೊಳ್ಳಲು 'ನನ್ನ ಮತ, ನನ್ನ ಹಕ್ಕು' ಕಾರ್ಯಕ್ರಮ ರೂಪಿಸಲಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಶಿವಕುಮಾರ್ ಮಾತನಾಡುತ್ತಿದ್ದರು.
"ಮತದಾನ ಮದ್ದುಗುಂಡಿಗಿಂತ ಬಲಾಢ್ಯ ಎನ್ನುವ ಮಾತಿದೆ. ಮಹಾರಾಜರು ಮನೆಯಲ್ಲಿ ಕುಳಿತಿದ್ದಾರೆ. ಮತದಾನದ ಹಕ್ಕಿನಿಂದ ಆಯ್ಕೆಯಾದವರು ಜನಸೇವೆ ಮಾಡುತ್ತಿದ್ದಾರೆ. ನಾನು, ಸಿದ್ದರಾಮಯ್ಯ ಅವರು ಸೇರಿದಂತೆ ಅನೇಕ ನಾಯಕರ ಉದಯವಾಗಿದ್ದೇ ಮತದಾನದ ಹಕ್ಕಿನಿಂದ. ಜನರ ಮತಗಳಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿದ್ದೇವೆ" ಎಂದರು.
"ಅರ್ಜುನ ಕೃಷ್ಣನನ್ನು ಒಮ್ಮೆ ಕೇಳುತ್ತಾನೆ. ಎಲ್ಲರು ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ, ನಿಂದಿಸುತ್ತಿದ್ದಾರೆ, ಬಾಣಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಏನೂ ತೋಚದಾಗಿದೆ ಎಂದು. ಆಗ ಕೃಷ್ಣ ಹೇಳುತ್ತಾನೆ, ನಿನ್ನ ಮೇಲೆ ಎಷ್ಟೇ ದಾಳಿಯಾಗಬಹುದು, ಆದರೆ ಕಾಪಾಡುವುದಕ್ಕೆ ಯಾರಾದರೂ ಒಬ್ಬರು ಇದ್ದೇ ಇರುತ್ತಾರೆ ಎಂದು. ಅದೇ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಹಾಗೂ ಮತದಾನದ ಹಕ್ಕೇ ನಮ್ಮನ್ನು ಕಾಪಾಡುವುದು. ವಿಚಾರ ಏನೇ ಇರಬಹುದು, ಆದರೆ ಜನರು ತೆಗೆದುಕೊಳ್ಳುವ ತೀರ್ಮಾನ ನಾಯಕರನ್ನು ತಯಾರು ಮಾಡುತ್ತದೆ" ಎಂದು ಹೇಳಿದರು.
"ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಇಡೀ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು. ಈ ಕಲ್ಪನೆ ಇದೇ ನೆಲದಲ್ಲಿ ಹುಟ್ಟಿತು. ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ತತ್ವವನ್ನು ಸಾರಿ, ಜಾತಿ, ಧರ್ಮ, ಪಂಥಗಳ ಬೇಧವಿಲ್ಲದ ಸಮ ಸಮಾಜದ ಕನಸು 900 ವರ್ಷಗಳ ಹಿಂದೆ ಹುಟ್ಟಿತು" ಎಂದರು.
"ಸ್ಪರ್ಧಾತ್ಮಕ ಯುಗದಲ್ಲಿ ನಾಯಕತ್ವ ಗುಣವಿಲ್ಲದಿದ್ದರೆ ಬೆಳವಣಿಗೆ ಸಾಧ್ಯವಿಲ್ಲ. ಸಚಿವರಾದ ಎಚ್.ಸಿ.ಮಹದೇವಪ್ಪ ವಿಶ್ವವಿದ್ಯಾನಿಲಯಗಳಿಗೆ ತೆರಳಿ ಪಾಠ ಮಾಡಬಹುದು, ಅಷ್ಟು ಜ್ಞಾನವನ್ನು ಹೊಂದಿದ್ದಾರೆ. ಹೊಸ ಪೀಳಿಗೆಗೆ ಪ್ರಜಾಪ್ರಭುತ್ವ, ಮತದಾನದ ಬಗ್ಗೆ ತಿಳಿಸಬೇಕಿದೆ. ವಿದ್ಯಾರ್ಥಿಗಳಿಗೆ 18 ವರ್ಷವಾದ ನಂತರ ಮತದಾನದ ಮಹತ್ವ ತಿಳಿಯುತ್ತದೆ. ರಾಜಕೀಯದ ವ್ಯಾಖ್ಯಾನದ ಪ್ರಕಾರ ನಲವತ್ತೊಂಭತ್ತು ಸೊನ್ನೆಯಾಗುತ್ತದೆ, ಐವತ್ತೊಂದು ನೂರಾಗುತ್ತದೆ. ನಾನು ಏಳನೇ ತರಗತಿಯಲ್ಲಿ ಇರುವಾಗಲೇ ಶಾಲಾ ಚುನಾವಣೆಯಲ್ಲಿ ಭಾಗವಹಿಸಿದ್ದೆ. ಅಂದು ನನ್ನ ಗುರುತು ನಕ್ಷತ್ರವಾಗಿತ್ತು. ಅಂದು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟವನು ಇಂದು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡುತ್ತಿದ್ದೇನೆ" ಎಂದು ಹೇಳಿದರು.
"ಚಾಮರಾಜನಗರದ ಸಂಸದರಾಗಿದ್ದ ದಿವಂಗತ ಧ್ರುವನಾರಾಯಣ ಒಂದು ಮತದ ಅಂತರದಿಂದ ಜಯಗಳಿಸಿದರು. ಅವರ ವಿರುದ್ದ ನಿಂತಿದ್ದ ಪ್ರಸ್ತುತ ಕೊಳ್ಳೇಗಾಲದ ಶಾಸಕರಾಗಿರುವ ಕೃಷ್ಣಮೂರ್ತಿ ಅವರ ಚಾಲಕ ಸಮಯ ಮೀರಿ ಹೋಯಿತು ಎಂದು ಮತ ಹಾಕಲಿಲ್ಲ. ಇದರಿಂದ ಅವರು ಸೋಲಬೇಕಾಯಿತು. ರಾಜಸ್ಥಾನದ ಸಿ.ಪಿ.ಜೋಶಿಯವರು ಎರಡು ಅಥವಾ ಮೂರು ಮತಗಳಿಂದ ಸೋತರು. ಇಲ್ಲದಿದ್ದರೆ ಅಂದು ಮುಖ್ಯಮಂತ್ರಿಯಾಗಬೇಕಾತ್ತು. ಆದ ಕಾರಣಕ್ಕೆ ಒಂದೊಂದು ಮತವೂ ಅಮೂಲ್ಯ" ಎಂದರು.
"ದೇಶದಲ್ಲಿ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ ಸಂದರ್ಭ. ನಾನು ಇದೇ ಸಂದರ್ಭದಲ್ಲಿ ಪಾಸ್ ಪಡೆದು ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ವೀಕ್ಷಣೆ ಮಾಡಲು ತೆರಳಿದ್ದೆ. ಅಂದು ವಿರೋಧ ಪಕ್ಷದವರು ರಾಜೀವ್ ಗಾಂಧಿಯವರ ವಿರುದ್ದ ಮುಗಿಬಿದ್ದಿದ್ದರು. ಆಡುವ ಮಕ್ಕಳಿಗೆ ಮತದಾನದ ಹಕ್ಕು ನೀಡಲಾಗಿದೆ ಎಂದು ಟೀಕೆ ಮಾಡುತ್ತಿದ್ದರು. ಆಗ ರಾಜೀವ್ ಗಾಂಧಿ 'ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗೆ ಗಡಿ ಕಾಯಲು ಬಂದೂಕು ನೀಡುತ್ತೇವೆ. ಮತದಾನದ ಹಕ್ಕು ನೀಡುವುದು ತಪ್ಪೇ?' ಎಂದಿದ್ದರು. ನಾನು ಈ ದೇಶದ ಯುವ ಶಕ್ತಿಯ ಮೇಲೆ ನಂಬಿಕೆ ಇಟ್ಟಿದ್ದೇನೆ ಎಂದರು" ಎಂದು ನೆನಪನ್ನು ಮೆಲುಕು ಹಾಕಿದರು.
"18 ನೇ ವಯಸ್ಸಿಗೆ ಮಾನಸಿಕ ದೃಢತೆ ಬರುತ್ತದೆ, ಸ್ವಂತವಾಗಿ ಆಲೋಚನೆ ಮಾಡುವ ಶಕ್ತಿ ಬರುತ್ತದೆ. ಮತಗಳಿಗೆ ಯಾರನ್ನು ಬೇಕಾದರೂ ಹೇಗೆ ನಿರೂಪಿಸುವ ಶಕ್ತಿಯಿದೆ" ಎಂದರು.
"ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ, ಪತ್ರಿಕಾಂಗ ಇವು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು. ನಾವು ತಪ್ಪು ಮಾಡಿದರೆ ಕಾಯಲು ನ್ಯಾಯಾಂಗವಿದೆ. ಪತ್ರಿಕಾಂಗ ಎಲ್ಲರ ತಪ್ಪನ್ನು ಸಮಾಜಕ್ಕೆ ತೋರಿಸುತ್ತದೆ. ಆದರೆ ಇಂದು ಮತಗಳ್ಳತನಕ್ಕೆ ಕೆಲವರು ಕೈ ಹಾಕಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಸಾಕಷ್ಟು ಹೆಚ್ಚು-ಕಡಿಮೆಯಾಗಿದೆ. ಇದರ ವಿರುದ್ದ ರಾಹುಲ್ ಗಾಂಧಿಯವರು ಹೋರಾಟ ರೂಪಿಸಿದ್ದಾರೆ" ಎಂದರು.
"ಇಡೀ ದೇಶಕ್ಕೆ ಮಾದರಿಯಾಗುವಂತಹ ಸರ್ಕಾರವನ್ನು ಕರ್ನಾಟಕದ ಜನರು ಅಧಿಕಾರಕ್ಕೆ ತಂದಿದ್ದಾರೆ. ಬಲಿಷ್ಠವಾದ ಸಮಾಜದ ಬಗ್ಗೆ ಕಳಕಳಿ ಇರುವ ಸರ್ಕಾರವನ್ನು ಜನರು ಆರಿಸಲು ಮತದಾನದ ಹಕ್ಕೇ ಕಾರಣ. ಇದಕ್ಕಾಗಿ ಪ್ರಜಾಪ್ರಭುತ್ವ ಉಳಿಯಬೇಕು. ಮತದಾನದ ಹಕ್ಕು ಉಳಿಯಬೇಕು. ಯುವ ಪೀಳಿಗೆ ಈ ದೇಶದ ಆಸ್ತಿಯಾಗಬೇಕು" ಎಂದರು.