ಶರಣ ನುಲಿಯ ಚಂದಯ್ಯನವರ ಜಯಂತಿ ಆಚರಿಸಲು ಕರೆ: ಎಂ.ವೆಂಕಟೇಶ್

ಬೆಂಗಳೂರು, ಜು.19: ದಾಸೋಹ ಜ್ಞಾನಿ ಶ್ರೀ ಶರಣ ನುಲಿಯ ಚಂದಯ್ಯನವರ 915ನೆ ಜಯಂತಿಯನ್ನು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ಶರಣ ನುಲಿಯ ಚಂದಯ್ಯ ಜಯಂತಿ ಆಚರಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟೇಶ್ ಕರೆ ನೀಡಿದ್ದಾರೆ.
ಶನಿವಾರ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನುಲಿಯನ್ನು ನೂಲುವ ವೃತ್ತಿಯನ್ನು ಮಾಡುತ್ತಿದ್ದ ವಚನಕಾರ ಚಂದಯ್ಯನನ್ನು ರಾಜ್ಯದಲ್ಲಿ ನೆಲೆಸಿದ ಕುಳುವ ಸಮುದಾಯ ತನ್ನ ಮೂಲಪುರುಷನೆಂದು ಗುರುತಿಸಿಕೊಂಡಿದೆ. ಚಂದಯ್ಯನು ಕಲ್ಯಾಣದಲ್ಲಿ ಮೆದೆಹುಲ್ಲಿನಿಂದ ಮಾಡಿದ ನುಲಿಯನ್ನು ಹೊಸೆದು ಹಗ್ಗ ಕಣ್ಣಿ ಮಾಡಿ ಮಾರಿ ಬದುಕುವ ಕಾಯಕ ಜೀವಿಯಾಗಿದ್ದ ಎಂದರು.
ಚಂದಯ್ಯ ಬಸವಣ್ಣರ ಸಮಕಾಲೀನರು. ಚಂದಯ್ಯ ಕಟ್ಟಿಕೊಂಡಿದ್ದ ಲಿಂಗವು ಆತ ಒಮ್ಮೆ ಹುಲ್ಲು ಕೊಯ್ಯುವಾಗ ನೀರಲ್ಲಿ ಬೀಳುತ್ತದೆ. ಆದರೂ ಅವನು ಅದನ್ನು ಎತ್ತಿಕೊಳ್ಳದೆ ಹುಲ್ಲಿನ ಹೊರೆ ಹೊತ್ತು ನಡೆದುಬಿಡುತ್ತಾನೆ. ಯುದ್ಧಕ್ಕೆ ಹೊರಟ ಸೈನಿಕ ಮನೆಯ ಹಂಗು ತೊರೆದಂತೆ, ದೇವರ ಮೇಲೆ ಭಕ್ತಿ ಇಟ್ಟವನು ವ್ಯಕ್ತಿಗತ ಸುಖ, ಸಂಪತ್ತನ್ನು ತೊರೆಯಬೇಕು. ಹೀಗೆ ತೊರೆಯದವರನ್ನು 'ಚಂದೇಶ್ವರ' ಮೆಚ್ಚಲಾರ ಎಂದು ಚಂದಯ್ಯ ವಚನ ಕಟ್ಟಿದ್ದಾನೆ ಎಂದು ಅವರು ತಿಳಿಸಿದರು.
ಕಾಯಕದಿಂದ ಬಂದುದು ಮಾತ್ರ ಲಿಂಗ ಜಂಗಮಕ್ಕೆ ಅರ್ಪಿತವಾಗಬೇಕು. ಈ ಕಾಯಕ ಗುರು, ಲಿಂಗ ಜಂಗಮರೆಲ್ಲರಿಗೂ ಕಡ್ಡಾಯವೆಂದು ಸಾರಿದ್ದಾರೆ. ಕಾಯಕ, ದಾಸೋಹ ಮತ್ತು ಸತ್ಯನಿಷ್ಠೆಯ ಮೂಲಕ ವಿಶ್ವ ಮಾನವ ಕೋಟಿಗೆ ಅರಿವಿನ ಬೆಳಕನ್ನು ನೀಡಿದ ಶರಣರ ಪೈಕಿ ನುಲಿಯ ಚಂದಯ್ಯನವರು ಪ್ರಮುಖರಾಗಿದ್ದಾರೆ. ಆದುದರಿಂದ ಸೆಪ್ಟಂಬರ್ 16 ರಂದು ರಾಜ್ಯದ ಕುಳುವ, ಕೊರಮ ಹಾಗೂ ಕೊರಚ ಸಮುದಾಯದವರು ನುಲಿಯ ಚಂದಯ್ಯನ ಜನ್ಮದಿನಾಚರಣೆಯನ್ನು ಎಲ್ಲ ಜಿಲ್ಲೆಗಳಲ್ಲಿ ಅರ್ಥಪೂರ್ಣವಾಗಿ ಆಚರಿಸಿ, ಸಮಾಜಕ್ಕೆ ಅವರ ಸಂದೇಶಗಳನ್ನು ಸಾರಬೇಕು ಎಂದು ವೆಂಕಟೇಶ್ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ಮಾಜಿ ಶಾಸಕ ಜಿ.ಚಂದ್ರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.