ದೊಡ್ಡಬಳ್ಳಾಪುರದ ಗೂಳ್ಯ ಗ್ರಾಮದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಣೆ : ಆರೋಪ
ನ್ಯಾಯ ಕೊಡಿಸುವಂತೆ ಡಿಸಿಗೆ ದಲಿತ ಮಹಿಳೆ ಮನವಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೂಳ್ಯ ಗ್ರಾಮದಲ್ಲಿ ಒಟ್ಟು 250 ಮನೆಗಳಿವೆ. ಆ ಪೈಕಿ 150ಕ್ಕೂ ಹೆಚ್ಚು ಮನೆಗಳು ದಲಿತ ಸಮುದಾಯಕ್ಕೆ ಸೇರಿದ್ದು, ಗ್ರಾಮದೇವತೆ ಏಳಿಗಮ್ಮ ದೇವಾಲಯಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸುವ ಮೂಲಕ ಅಸ್ಪೃಶ್ಯತೆ ಪಾಲಿಸುತ್ತಿರುವ ಕಾನೂನುಬಾಹಿರ ಸನ್ನಿವೇಶ ಬೆಳಕಿಗೆ ಬಂದಿದೆ.
‘ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ’ ಎಂದು ಹೇಳಿ ವಿಜ್ಞಾನಿಗಳು ಚಂದ್ರಲೋಕಕ್ಕೆ ಹೋಗಿ ಸಾಧನೆ ಮಾಡುತ್ತಿದ್ದರೆ, ಗ್ರಾಮಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು, ಜಾತಿ ನಿಂದನೆಗಳು ಎಗ್ಗಿಲ್ಲದಂತೆ ನಡೆಯುತ್ತಲೇ ಇದೆ. ಗೂಳ್ಯ ಗ್ರಾಮದಲ್ಲಿ ಹಬ್ಬ-ಹರಿದಿನಗಳಲ್ಲಿ ದಲಿತರನ್ನು ಅತ್ಯಂತ ಶೋಚನೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ದೇವಸ್ಥಾನದ ಹೊರಗಿನಿಂದಲೇ, ದೇವರನ್ನು ನೋಡಬೇಕಾದ ದುಸ್ಥಿತಿ ಇನ್ನೂ ಜೀವಂತವಾಗಿದೆ ಎಂದು ಗ್ರಾಮದ ದಲಿತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಏಳಿಗಮ್ಮ ದೇವಾಲಯದಲ್ಲಿ ಸವರ್ಣೀಯರು 100 ವರ್ಷಗಳಿಂದಲೂ ಪೂಜೆ ಸಲ್ಲಿಸುತ್ತಿದ್ದಾರೆ. ಆದರೆ ಇದುವರೆಗೂ ದಲಿತರಿಗೆ ಪ್ರವೇಶ ನೀಡಿಲ್ಲ. ದೇವಾಲಯದಲ್ಲಿ ಪೂಜೆ ಮಾಡುತ್ತಿರುವ ಪೂಜಾರಿ ಬಚ್ಚೇಗೌಡ ಸೇರಿದಂತೆ ಸವರ್ಣೀಯ ವ್ಯಕ್ತಿಗಳು ದಲಿತರನ್ನು ‘ನೀವು ಹೊಲೆಯರು, ಮಾದಿಗರು ದೇವಾಲಯದ ಒಳಗೆ ಬಂದರೆ, ದೇವಸ್ಥಾನ ಮೈಲಿಗೆ ಆಗುತ್ತದೆ’ ಎಂದು ಜಾತಿ ನಿಂದನೆ ಮಾಡಿದ್ದಾರೆ ಎಂದು ಗ್ರಾಮದ ದಲಿತ ಮಹಿಳೆ ಶಕುಂತಲಮ್ಮ ಆರೋಪಿಸಿದ್ದಾರೆ.
ಪೂಜಾರಿ ಬಚ್ಚೇಗೌಡ ದಲಿತರನ್ನು ದೇವಸ್ಥಾನದ ಬಾಗಿಲಿನಲ್ಲಿಯೇ ನಿಲ್ಲಿಸುವುದರಿಂದ ನಮಗೆ ತುಂಬಾ ನೋವಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಬದುಕಲು ಸಮಾನ ಹಕ್ಕುಗಳನ್ನು ನೀಡಿದ್ದಾರೆ. ಆದರೆ ನಮ್ಮ ಹಳ್ಳಿಯಲ್ಲಿ ಮೇಲ್ಜಾತಿಗರ ದೌರ್ಜನ್ಯಗಳಿಂದ ನಮಗೆ ಸ್ವಾತಂತ್ರ್ಯ, ದೇವಸ್ಥಾನ ಪ್ರವೇಶ ಸೇರಿದಂತೆ ಇನ್ನಿತರ ಹಕ್ಕುಗಳು ಸಿಕ್ಕಿಲ್ಲ ಮತ್ತು ನಮ್ಮ ಮೇಲಿನ ಶೋಷಣೆಗಳು ನಿಂತಿಲ್ಲ ಎಂದು ಬೇಸರಗೊಳ್ಳುತ್ತಾರೆ ಶಕುಂತಲಮ್ಮ.
ಲಕ್ವಾ ಹೊಡೆಯುತ್ತದೆ ಎಂದು ಬೆದರಿಸುತ್ತಾರೆ: ‘ದೇವಸ್ಥಾನದೊಳಗೆ ಪ್ರವೇಶ ನೀಡಿ’ ಎಂದು ಮನವಿ ಮಾಡಿದರೆ, ನೀವು ದಲಿತರಿದ್ದೀರಿ, ದೇವಸ್ಥಾನದ ಒಳಗೆ ಬಂದರೆ ನಿಮಗೆ ಲಕ್ವಾ ಹೊಡೆಯುತ್ತದೆ. ನಿಮ್ಮ ಕುಟುಂಬಗಳು ಕಷ್ಟಕ್ಕೆ ಸಿಲುಕುತ್ತವೆ ಎಂದು ಹೆದರಿಸುತ್ತಾರೆ. ಸದ್ಯದಲ್ಲೇ ಊರ ಜಾತ್ರೆ ನಡೆಯಲಿದೆ. ಅದಕ್ಕೆ ಪ್ರತಿಮನೆಯಿಂದ ಕನಿಷ್ಠ 5 ಸಾವಿರ ರೂ.ಸಂಗ್ರಹ ಮಾಡುತ್ತಿದ್ದಾರೆ. ಜಾತ್ರೆ ಮಾಡಲು ದಲಿತ ಹಣ ಬೇಕು, ಆದರೆ ದಲಿತರನ್ನು ಮಾತ್ರ ದೇವಸ್ಥಾನದ ಒಳಗೆ ಬಿಡುವುದಿಲ್ಲ, ದೇವರನ್ನು ಮುಟ್ಟುವುದಕ್ಕೂ ಬಿಡುವುದಿಲ್ಲ. ಕನಿಷ್ಠ ದೇವರ ಪ್ರಸಾದವನ್ನು ದಲಿತ ಸಮುದಾಯಕ್ಕೆ ಸರಿಯಾಗಿ ನೀಡುವುದಿಲ್ಲ ಎಂದು ದಲಿತರು ಅಳಲು ತೋಡಿಕೊಂಡಿದ್ದಾರೆ.
ಡಿಸಿಗೆ ಪತ್ರ ಬರೆದ ದಲಿತ ಮಹಿಳೆ :
‘ಗೂಳ್ಯ ಗ್ರಾಮದ ಅಸ್ಪೃಶ್ಯತೆ ಆಚರಣೆಯ ಕುರಿತು ಯಾವುದೇ ಅಧಿಕಾರಿಗಳು ಗಮನಹರಿಸದೇ ಇರುವುದು ದುರಂತ. ಕೂಡಲೇ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಅಸ್ಪೃಶ್ಯತೆ ಆಚರಣೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ದಲಿತರಿಗೆ ದೇವಸ್ಥಾನದ ಪ್ರವೇಶ ನೀಡಿ ನಮಗೆ ನ್ಯಾಯ ಕೊಡಿಸಬೇಕು ಎಂದು ಶಕುಂತಲಮ್ಮ ಡಿಸಿಗೆ ಪತ್ರ ಬರೆದು ಕೋರಿದ್ದಾರೆ.
ದಲಿತರನ್ನು ದೇವಸ್ಥಾನದ ಒಳಗೆ ಸೇರಿಸದೇ ಇರುವುದು ಸಂವಿಧಾನ ವಿರೋಧಿ ಮತ್ತು ಜಾತಿ ದೌರ್ಜನ್ಯವಾಗಿದೆ. ದೇವಸ್ಥಾನದ ಒಳಗೆ ದಲಿತರನ್ನು ಯಾರು ಬಿಡುತ್ತಿಲ್ಲವೋ ಅವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಬೇಕು. ಸರಕಾರ ಮತ್ತು ಅಲ್ಲಿನ ಜಿಲ್ಲಾಧಿಕಾರಿ ಕೂಡಲೇ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು. ದಲಿತರಿಗೆ ಹಲವಾರು ರೀತಿಯಲ್ಲಿ ತೊಂದರೆ ಕೊಡುವ ಪ್ರಯತ್ನಗಳು ನಡೆಯುತ್ತಿರುವುದರಿಂದ ಈಗಿನಿಂದಲೇ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು.
ಮೈತ್ರೇಯಿ, ಹೈಕೋರ್ಟ್ ವಕೀಲೆ