‘ಕಿಸಾನ್ ಸಮ್ಮಾನ್ ನಿಧಿ ಯೋಜನೆ’ | ರಾಜ್ಯದಲ್ಲಿ 18,922 ಕೋಟಿ ರೂ.ರೈತರ ಖಾತೆಗೆ ಜಮೆ: ಕೇಂದ್ರ ಸಚಿವ ವಿ.ಸೋಮಣ್ಣ

ಬೆಂಗಳೂರು ಉತ್ತರ : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 6 ಸಾವಿರ ರೂ.ಗಳು ಯಾವುದೇ ಮಧ್ಯವರ್ತಿಗಳಿಲ್ಲದೆ ರೈತರ ಖಾತೆಗಳಿಗೆ ನೇರವಾಗಿ ತಲುಪುತ್ತಿದೆ. ಈ ಯೋಜನೆಯ 20ನೇ ಕಂತು ಒಳಗೊಂಡಂತೆ ಈವರೆಗೆ ದೇಶದ ರೈತರಿಗೆ 3.89 ಲಕ್ಷ ಕೋಟಿ ರೂ. ಸಂದಾಯವಾಗಿದೆ. ಈ ಪೈಕಿ ರಾಜ್ಯದಲ್ಲಿ 18,922 ಕೋಟಿ ರೂ. ರೈತರ ಖಾತೆಗೆ ಜಮೆ ಆಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಶನಿವಾರ ಬೆಂಗಳೂರು ಉತ್ತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗೆ 20ನೆ ಕಂತಿನ ಹಣವನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವೀಕ್ಷಿಸಿದ ಬಳಿಕ ಅವರು ರೈತರನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಸುಮಾರು 43.28 ಲಕ್ಷ ರೈತ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. 2013-14ರಲ್ಲಿ ಕೇಂದ್ರದ ಕೃಷಿ ಬಜೆಟ್ 21,933 ಸಾವಿರ ಕೋಟಿ ರೂ. ಇತ್ತು. ಈಗ ನರೇಂದ್ರ ಮೋದಿ ಸರಕಾರದಲ್ಲಿ 2025-26ರಲ್ಲಿ 1,27,209 ಕೋಟಿ ರೂ.ಗಳ ಕೃಷಿ ಬಜೆಟ್‍ನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಇಂದಿನ 20ನೆ ಕಂತಿನಲ್ಲಿ ದೇಶದಾದ್ಯಂತ ಸುಮಾರು 9.7 ಕೋಟಿ ರೈತರ ಖಾತೆಗೆ ಸುಮಾರು 20,800 ಕೋಟಿ ರೂ. ಸಂದಾಯವಾಗಲಿದೆ. ಅಂದಿನ ನಮ್ಮ ಸರಕಾರದಿಂದ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ 6 ಸಾವಿರ ರೂ.ಗಳ ಜೊತೆಗೆ ರಾಜ್ಯ ಸರಕಾರ 4 ಸಾವಿರ ರೂ. ನೀಡುತ್ತಿತ್ತು. ಇದನ್ನು ಈಗಿನ ಸರಕಾರ ಪುನಃ ಜಾರಿಗೊಳಿಸಬೇಕು ಎಂದು ಸೋಮಣ್ಣ ಮನವಿ ಮಾಡಿದರು.
ರೈತರಿಗೆ ರಸಗೊಬ್ಬರದ ಸಮಸ್ಯೆಯಿಲ್ಲ: ರೈತರಿಗೆ ಯೂರಿಯಾ ಗೊಬ್ಬರ ಕೊರತೆಯನ್ನು ನಿವಾರಿಸಿದ್ದೇವೆ. 6.52 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯತೆಯಿದೆ. ರಾಜ್ಯಕ್ಕೆ 15,825 ಸಾವಿರ ಮೆಟ್ರಿಕ್ ಟನ್ ಲಭ್ಯವಿದ್ದು, ಯೂರಿಯಾ ಮಾರಾಟ ಬೇಡಿಕೆಗಿಂದ ಹೆಚ್ಚಿದೆ. ಇನ್ನೂ ಕೊರತೆ ಇದ್ದರೆ ಕೇಂದ್ರ ಸರಕಾರಕ್ಕೆ ತಿಳಿಸಬೇಕು ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ರೈತರಿಗೆ ಯಾವುದೇ ಸಂಕಷ್ಟ ಆಗದಂತೆ ಅವರಿಗೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುವುದು ಸರಕಾರಗಳ ಜವಾಬ್ದಾರಿಯಾಗಿದೆ. ರೈತರ ಸಂಕಷ್ಟದ ಕಣ್ಣಿರು ಒರೆಸಬೇಕಿದೆ. ಈ ದಿಸೆಯಲ್ಲಿ ಬಯಲು ಸೀಮೆಯ ಜಿಲ್ಲೆಗಳಿಗೆ ನೀರುಣಿಸುವ ಎತ್ತಿನ ಹೊಳೆ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಇದರೊಂದಿಗೆ ಈ ಹಿಂದೆ ಪರಮಶಿವಯ್ಯ ಅವರ ವರದಿಯನ್ನು ನಾವು ಜಾರಿಗೊಳಿಸಬೇಕಿದ್ದು, ಇದರಿಂದ ವ್ಯರ್ಥವಾಗಿ ಸಮುದ್ರ ಸೇರುವ 500 ಟಿಎಂಸಿ ನೀರು ಲಭ್ಯವಾಗಲಿದೆ. ಪ್ರಧಾನಿ ಮೋದಿ ಅವರಿಗೆ ಆಪ್ತರಾಗಿರುವ ಜಲಶಕ್ತಿ ಖಾತೆಯನ್ನು ಹೊಂದಿರುವ ಸೋಮಣ್ಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಸಬೇಕಿದೆ ಎಂದು ಅವರು ಮನವಿ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಮತ್ತು ಅರಣ್ಯ ಇಲಾಖೆಗಳಿಂದ ವಸ್ತು ಪ್ರದರ್ಶನ ಮಳಿಗೆಗಳು ಹಾಗೂ ಕೃಷಿ ಪರಿಕರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ.ಕೆ.ಸುಧಾಕರ್, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಧೀರಜ್ ಮುನಿರಾಜು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ರಾಜಣ್ಣ, ಹಾಡೋನಹಳ್ಳಿ ಗ್ರಾ.ಪಂ. ಅಧ್ಯಕ್ಷ ಮುನಿರಾಜು, ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಬಿ.ಜಿ.ಕಲಾವತಿ, ಉಪ ನಿರ್ದೇಶಕಿ ಗಾಯಿತ್ರಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ, ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.