2004ರ ಚುನಾವಣೆಯಲ್ಲಿ ನನ್ನ ಸೋಲಿಗೆ ನಕಲಿ ಮತದಾನವೇ ಕಾರಣ: ಬೀಳಗಿ ಶಾಸಕ ಜೆ.ಟಿ.ಪಾಟೀಲ್

ಬಾಗಲಕೋಟೆ: ‘2004ರ ವಿಧಾನಸಭೆ ಚುನಾವಣೆಯಲ್ಲಿ ಬೀಳಗಿ ಕ್ಷೇತ್ರದಲ್ಲಿ ನನ್ನ ಸೋಲಿಗೆ ನಕಲಿ ಮತದಾನವೇ ಕಾರಣ’ ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ್ ಆರೋಪಿಸಿದ್ದಾರೆ.
ಕಾಡರಕೊಪ್ಪ ಗ್ರಾಮದಲ್ಲಿ ರವಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಆ ಚುನಾವಣೆಯಲ್ಲಿ 35,400 ಮತಗಳ ಅಂತರದಿಂದ ನಾನು ಸೋತಿದ್ದೆ. 2004ರ ಚುನಾವಣೆ ಬಳಿಕ ಮತಪಟ್ಟಿ ಪರಿಷ್ಕರಣೆ ನಡೆಯಿತು. ಅಂದಿನ ಜಿಲ್ಲಾಧಿಕಾರಿ ಶಿವಸೇಲ್ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದಾಗ ನಕಲಿ ಮತದಾರರು ಬೀಳಗಿ ಕ್ಷೇತ್ರದಲ್ಲಿ ಇರುವುದು ಪತ್ತೆಯಾಗಿತ್ತು. ಈ ನಕಲಿ ಮತಗಳೇ ಆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣವಾಗಿದ್ದವು’ ಎಂದು ಬೇಸರ ವ್ಯಕ್ತಪಡಿಸಿದರು.
‘ಅಂದಿನ ಆ ನಕಲಿ ಮತದಾರರ ಪಟ್ಟಿ ಇಂದಿಗೂ ಜಿಲ್ಲಾಡಳಿತ ಭವನದಲ್ಲಿ ಭದ್ರವಾಗಿದೆ. ನಕಲಿ ಮತದಾರರನ್ನು ಸೃಷ್ಟಿಸುವುದು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದಂತೆ. ಈ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಹೋರಾಟ ಮಾಡುತ್ತಿದ್ದಾರೆ’ ಎಂದು ಜೆ.ಟಿ.ಪಾಟೀಲ್ ಹೇಳಿದರು.
Next Story