ಬಾಗಲಕೋಟೆ : ವಧುವಿಗೆ ತಾಳಿ ಕಟ್ಟಿದ ಕೆಲವೇ ಹೊತ್ತಿನಲ್ಲಿ ವರ ಹೃದಯಾಘಾತದಿಂದ ಮೃತ್ಯು

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಕಲ್ಯಾಣಮಂಟಪವೊಂದರಲ್ಲಿ ಮದುವೆ ಸಮಾರಂಭವೊಂದು ನಡೆಯುತ್ತಿದ್ದು, ವಧುವಿಗೆ ತಾಳಿ ಕಟ್ಟಿದ ಕೆಲವೇ ಹೊತ್ತಿನಲ್ಲಿ ವರ ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ.
ಮೃತ ವರನನ್ನು ಕುಂಬಾರಹಳ್ಳ ಗ್ರಾಮದ ನಿವಾಸಿ ಪ್ರವೀಣ್ ಕುರಣಿ ಎಂದು ಗೊತ್ತಾಗಿದೆ. ಮದುವೆಗೆ ಮುನ್ನಾದಿನ ರಾತ್ರಿ ಮದುವೆ ವಿವಿಧ ಧಾರ್ಮಿಕ ಕಾರ್ಯಗಳು ನಡೆದಿದ್ದವು. ಮರುದಿನ ಬೆಳಿಗ್ಗೆ ಕಲ್ಯಾಣ ಮಂಟಪದಲ್ಲಿ ಪ್ರವೀಣ್ ಕುರಣಿ ಹಾಗೂ ಯುವತಿಯ ಮದುವೆ ಸಮಾರಂಭ ನಡೆಯುತ್ತಿತ್ತು. ಆದರೆ, ತಾಳಿ ಕಟ್ಟಿದ ನಂತರ, ಅಕ್ಷತಾ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆ ಕಾರ್ಯಕ್ರಮ ನಡೆದಿದೆ. ಮದ್ಯಾಹ್ನ ಸಮಯದಲ್ಲಿ ವೇದಿಕೆ ಮೇಲೆ ವಧು-ವರ ಪರಸ್ಪರ ಹಾರ ಬದಲಾಯಿಸಿದ್ದಾರೆ. ಬಂಧು-ಬಳಗದವರು ಆಗಮಿಸಿ, ಶುಭ ಹಾರೈಸುವುದಕ್ಕೆ ಪ್ರಾರಂಭ ಆಗುತ್ತಿದ್ದಂತೆ ಹೃದಯಾಘಾತವಾಗಿ ವರ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಿದರೂ, ಬದುಕಲಿಲ್ಲ. ಘಟನೆಯಿಂದ ಮದುವೆ ಸಂಭ್ರಮದ ಸಂತೋಷದಿಂದ ಇದ್ದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು.