Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಸಾಕು ಪ್ರಾಣಿಗಳಿಗಿನ್ನು ಜಾಗವಿಲ್ಲ!

ಸಾಕು ಪ್ರಾಣಿಗಳಿಗಿನ್ನು ಜಾಗವಿಲ್ಲ!

ಡಾ. ಸುಬ್ರಹ್ಮಣ್ಯ ಸಿ. ಕುಂದೂರುಡಾ. ಸುಬ್ರಹ್ಮಣ್ಯ ಸಿ. ಕುಂದೂರು27 July 2025 1:20 PM IST
share
ಸಾಕು ಪ್ರಾಣಿಗಳಿಗಿನ್ನು ಜಾಗವಿಲ್ಲ!

ಲೋಕದಲ್ಲಿ ಮನುಷ್ಯ ಸಮಾಜದಿಂದ ಸಮಾಜ ಜೀವಿಯಾಗಿ ಪಲ್ಲಟವಾದ ತರುವಾಯ ನೆಲ-ನೇಗಿಲು ಅವನ ಹೆಗಲಿಗೆ ಬಲವನ್ನು ಒದಗಿಸಿದವು. ಇದೇ ಮುಂದೆ ಮಾನವ ಸಂಸ್ಕೃತಿಯ ವಿಕಾಸವನ್ನು ಹುಟ್ಟು ಹಾಕಿತು. ಇಲ್ಲಿ ಮುಖ್ಯವಾಗಿ ಕೆಲವು ಪ್ರಾಣಿಗಳನ್ನು ಪಳಗಿಸಿ ಸಾಕುವ ಮೂಲಕ ತನ್ನ ದೈನಂದಿನ ಸಾಗುವಳಿ, ಸಾಗಣೆೆ, ಪ್ರಯಾಣ ಮತ್ತು ಆಹಾರಕ್ಕೆ ದಾರಿಯನ್ನು ಮಾಡಿಕೊಂಡ ಆನಂತರದ ದಿನಗಳಲ್ಲಿ ಮನುಷ್ಯನೊಂದಿಗೆ ಪ್ರಾಣಿ-ಪಕ್ಷಿಗಳ ಸಂಬಂಧವು ಜತನವಾಗುವುದಕ್ಕೆ ಶುರುವಾಯಿತು. ಮನುಷ್ಯನು ಪ್ರಾಣಿ ಸಮೂಹಕ್ಕೆ ಸೇರಿದ ಕಾರಣಕ್ಕೋ, ಅನ್ನ-ಆಹಾರ-ನೀರು ನೀಡಿ ಮೈ ಮೇಲೆ ಕೈಯಾಡಿಸಿ ಬೆಳಸಿದ ಋಣವನ್ನು ಮರೆಯದ ಪ್ರಾಣಿಗಳು ಮನುಷ್ಯನ ಸೇವೆಗೆ ಜೀವನವನ್ನೇ ಸವೆಸಿವೆ ಅನ್ನುವುದು ಲೋಕದ ಸತ್ಯ. ಕಾಲ-ಕಾಲಕ್ಕೆ ಮನುಷ್ಯನ ಅವಶ್ಯಕತೆಗಳು ವೃದ್ಧಿಯಾದಂತೆ ಆನೆ, ಕುದುರೆ, ದನ, ಎಮ್ಮೆ, ಎತ್ತು, ನಾಯಿ, ಬೆಕ್ಕು, ಆಡು, ಕುರಿ, ಹಂದಿ, ಕತ್ತೆ, ಮೇಕೆಯಾದಿಯಾಗಿ ಕೋಳಿ, ಪಾರಿವಾಳ, ಗಿಳಿಯಂತಹ ಅನೇಕ ಜೀವಿಗಳು ಬದುಕುವುದಕ್ಕೆ ಆರಂಭವಾದ ಮೇಲೆ ಮನುಷ್ಯನ ಜೀವನ ವಿನ್ಯಾಸವೇ ಬಹು ಬಗೆಯಲ್ಲಿ ನಿರೂಪಣೆಯಾಗಿತ್ತಲ್ಲದೆ ಬದುಕಿಗೆ ಶಕ್ತಿಯು ತುಂಬುವಂತೆ ಮಾಡಿತು.

ಸಾಕುಪ್ರಾಣಿಗಳು ಮಾನವನ ಬದುಕಿನ ಮೀಮಾಂಸೆಯಲ್ಲಿ ಜಾಗವನ್ನು ಪಡೆಯುವ ಜೊತೆಯಲ್ಲಿ ಒಂದು ಭಾವನಾತ್ಮಕವಾದ ಅಭಿವ್ಯಕ್ತಿಯನ್ನು ಪಡೆದುಕೊಂಡವು. ಜಾನುವಾರುಗಳು ದೇವರ ಅಸ್ಮಿತೆಯನ್ನು ಗಳಿಸಿಕೊಂಡರೆ ಉಳಿದ ಪ್ರಾಣಿಗಳು ಕಾಯಕದ ನೆಲೆಯಲ್ಲಿ ಹೃದಯಕ್ಕೆ ನಿಂತವು. ಇಲ್ಲಿ ಬಹುಪಾಲು ಸಾಕುಪ್ರಾಣಿಗಳು ಮನೆಯ ಸದಸ್ಯರಂತೆ ಆಗಿದ್ದವು ಅವುಗಳಿಗೂ ಹೆಸರು, ಮನೆ, ಬಟ್ಟೆ, ಗೆಜ್ಜೆ, ಗಂಟೆ, ಹಬ್ಬ, ಆರಾಧನೆಗಳು ನಡೆದುಕೊಂಡು ಬಂದಿರುವುದು ನೆಲದ ಸಾಂಸ್ಕೃತಿಕ ರೂಪವಾಗಿ ನಾವು ಅಧ್ಯಯನ ಮಾಡಿದ್ದೇವೆ. ಬಹುಪಾಲು ಸಾಕುಪ್ರಾಣಿಗಳು ಮನುಷ್ಯನ ನಾಗರಿಕತೆಯ ರಚನೆಗೆ ರಕ್ತವನ್ನು ಬಸಿದು ಶ್ರಮವಹಿಸಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಎತ್ತುಗಳು ಹೆಗಲು ಕೊಡದಿದ್ದರೆ ನೆಲದ ಉಳುಮೆ ಸತ್ವವನ್ನು ನಾವು ಪಡೆಯುವುದಕ್ಕೆ ಆಗುತ್ತಿರಲಿಲ್ಲ, ಆನೆ, ಕುದುರೆಗಳು ನಡೆದು ಓಡಿ ಗುರಿ ಮುಟ್ಟದಿದ್ದರೆ ರಾಜನ ಸಾಮ್ರಾಜ್ಯ, ಹೊಗಳಿಕೆಯ ಕಿರೀಟವು ತಲೆಮೇಲೆ ನಿಲ್ಲತ್ತಿರಲಿಲ್ಲ. ಕರಡಿ, ಮಂಗ, ಹಾವುಗಳಂತಹವು ಮಾತು ಕೇಳದೆ, ನಲಿಯದೆ, ಹಾರದೆ ಇದ್ದಿದ್ದರೆ ಅದೆಷ್ಟೋ ಬಡಪಾಯಿಗಳ ಹೊಟ್ಟೆ ತುಂಬುತ್ತಿರಲಿಲ್ಲ. ಹಸು, ಎಮ್ಮೆ ತನ್ನ ಕಂದನಿಗೆ ಅಂತ ಕೆಚ್ಚಲು ತುಂಬಿಸಿಕೊಂಡ ಹಾಲನ್ನು ನಮಗೆ ಕೊಡದಿದ್ದರೆ ಈ ದೇಹ ಸತ್ವಪೂರ್ಣವಾಗಿ ನಿಂತು ನಡೆಯುವುದಕ್ಕೆ ಆಗುತ್ತಿರಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ಬೆನ್ನು ಕೊಟ್ಟು ಬದುಕಿನ ಗಾಡಿಯನ್ನು ಎಳೆದ ಈ ಸಾಕು ಪ್ರಾಣಿಗಳ ಬಗ್ಗೆ ತನ್ನ ಮಗುವಿನಷ್ಟೇ ಮಮತೆಯು ಮನುಷ್ಯನಲ್ಲಿ ಚಲನೆಯಲ್ಲಿತ್ತು ಅವುಗಳನ್ನು ಉಳಿಸಿಕೊಳ್ಳುವುದಕ್ಕೆ ಹೋರಾಡುತ್ತಿದ್ದ. ಸಾಕುವುದಕ್ಕೆ ಹಂಬಲಿಸುತ್ತಿದ್ದ. ಅದೆಷ್ಟೋ ಜನ ವೀರರು ಇವುಗಳ ರಕ್ಷಣೆಗೆ ದೇಹವನ್ನೇ ತ್ಯಾಗ ಮಾಡಿದ್ದಾರೆ ಎನ್ನುವುದನ್ನು ಚರಿತ್ರೆ ಈಗಲೂ ಹೇಳುತ್ತದೆ. ಬಹುಪಾಲು ಸಾಕು ಪ್ರಾಣಿಗಳು ತನ್ನ ಒಡೆಯನಿಗಾಗಿಯೇ ದುಡಿದಿವೆ, ಬೆವರು ಕಳೆದಿವೆ, ಮಳೆ-ನೀರು-ಗಾಳಿಗೆ ಎದೆಕೊಟ್ಟು ನಡೆದಿವೆ. ತನ್ನನ್ನು ಸಾಕಿದಾತನಿಗೆ ನಡು ಬಗ್ಗಿಸಿ ತನ್ನೆಲ್ಲವನ್ನು ತ್ಯಾಗ ಮಾಡಿರುವುದು ಕೂಡ ನಮ್ಮ ಅನುಭವದಲ್ಲಿ ಭದ್ರವಾಗಿ ಇದೆ. ಇಷ್ಟೊಂದು ಬಿಗುವಾಗಿದ್ದ ಸಾಕುಪ್ರಾಣಿಗಳ ನಡುವಿನ ಸಂಬಂಧವು ಆಧುನಿಕತೆಯ ಗಾಳಿಗೆ ಮೆಲ್ಲಗೆ ಸರಳವಾಗುತ್ತ ನಡೆದಿದ್ದು ಮನುಷ್ಯನ ದುರಂತದ ಮೊದಲ ಸೂಚನೆಯಂತೆ ಕಾಣಿಸುತ್ತದೆ.

ಸಾಕುಪ್ರಾಣಿಗಳು ನಮ್ಮಿಂದ ದೂರವಾದರೆ ನಾವು ಅದೆಷ್ಟೋ ಹೃದಯವಂತಿಕೆಯನ್ನು ಭಾವನಾತ್ಮಕವಾದ ಸಂಬಂಧದ ಸ್ಪರ್ಶವನ್ನೇ ಕಳೆದುಕೊಂಡು ಸತ್ವಹೀನರಾಗಿ ಬದುಕುವುದಕ್ಕೆ ಶುರು ಮಾಡಿರುವ ತಾತ್ವಿಕತೆಯನ್ನು ಯೋಚಿಸಬೇಕಾದ ಅಗತ್ಯ ನಮಗೆ ಈಗ ಉಂಟು ಅನ್ನಿಸುತ್ತದೆ. ನಾವು ಪಾರಂಪರಿಕವಾದ ಶಿಕ್ಷಣವನ್ನು ಬಿಟ್ಟು ಬಂಡವಾಳಶಾಹಿಯ ಅಭಿವ್ಯಕ್ತಿಯ ಮಾದರಿಯನ್ನೇ ಪಠ್ಯವಾಗಿ ಕಲಿತು ಅಲ್ಲಿಯೇ ಉದ್ಯೋಗವನ್ನು ಹುಡುಕುವುದು ಮತ್ತು ದುಡಿಯುವ ಕಾರ್ಯವನ್ನೇ ಮಾಡುವುದಕ್ಕೆ ನಿಂತಾಗ ನೆಲದ ಅಂದರೆ ಕೃಷಿಯ ಮೀಮಾಂಸೆಯು ಯಾರಿಗೂ ಅಗತ್ಯವೆಂದು ಕಾಣಲಿಲ್ಲ. ಶಿಕ್ಷಣದ ವ್ಯವಸ್ಥೆಯು ಕೃಷಿಯ ನಿರೂಪಣೆಯ ಮಾದರಿಯನ್ನು ಕೈಬಿಟ್ಟು ನಡೆದಾಗ ಸಾಕು ಪ್ರಾಣಿಗಳೆಲ್ಲ ಮೆಲ್ಲಗೆ ಅಸ್ತಿತ್ವವನ್ನು ಕಳೆದುಕೊಳ್ಳುವಂತೆ ಆಯಿತು. ಇದಕ್ಕೆ ಪೂರಕವಾಗಿ ಕುಟುಂಬದಲ್ಲಿನ ಯುವಕರು/ಯುವತಿಯರು ಹಳ್ಳಿಯ ಜೀವನ ಬಿಟ್ಟು ನಗರದ ಕಡೆಗೆ ವಲಸೆ ಹೋಗುವ ಮತ್ತು ಅಲ್ಲಿಯ ಜೀವನ ವಿನ್ಯಾಸವನ್ನು ಮೈಗೂಡಿಸಿಕೊಳ್ಳುವ ನೆಲೆಯಿಂದ ನಾವು ನಾಗರಿಕರು ಅನ್ನುವ ಗೀಳು ತಲೆಯಲ್ಲಿ ನಿಂತ ಮೇಲೆ ಯಾವ ಹೆಣ್ಣು-ಗಂಡುಗಳು ಜಾನುವಾರುಗಳನ್ನು ಕಟ್ಟಿಕೊಂಡು ಸಗಣಿ ಎತ್ತಿ ಮೇವು ಹಾಕಿಕೊಂಡು ಇರುವುದನ್ನು ಒಪ್ಪಲಿಲ್ಲ. ಅದಕ್ಕೆ ಒಗ್ಗಿಕೊಳ್ಳುವುದಕ್ಕೂ ಹೋಗಲಿಲ್ಲ. ತಂದೆ ತಾಯಿಗಳೇ ಜೊತೆಯಲ್ಲಿ ಬದುಕುವುದು ಹೊರೆಯಾಗಿರುವಾಗ ಸಾಕುಪ್ರಾಣಿಗಳಿಗೆ ಸ್ಥಳ ಸಿಗುವುದು ಕನಸಿನ ಮಾತು ಆಗಿಬಿಟ್ಟತು.

ಆಧುನಿಕ ಬದುಕು ಪೂರ್ಣವಾಗಿ ಯಂತ್ರ-ತಂತ್ರದ ಸೋಗಿನಲ್ಲಿಯೇ ನಡೆಯುತ್ತಿರುವುದು ವಾಸ್ತವಾಗಿದೆ. ಬಂಡವಾಳ ಜಗತ್ತು ಅಂದು ಸಾಕು ಪ್ರಾಣಿಗಳು ಮಾಡುತ್ತಿದ್ದ ಎಲ್ಲ ಕೆಲಸವನ್ನು ಮಾಡುವ ಯಂತ್ರವನ್ನು ಹುಟ್ಟು ಹಾಕಿದೆ. ಈ ಯಂತ್ರಗಳು ಪ್ರಾಣಿಗಳಿಂತ ನೂರು ಪಾಲು ವೇಗವಾಗಿ ಹೆಚ್ಚಾಗಿ ಕೆಲಸ ಮಾಡುವುದರಿಂದ ನಾವು ಯಂತ್ರಗಳಿಗೆ ಜೋತುಕೊಳ್ಳುವ ಮೂಲಕ ಪೂರ್ವ ಕಾಲದಿಂದ ನಮ್ಮ ಬೆನ್ನೆಲುಬಾಗಿದ್ದ ಸಾಕುಪ್ರಾಣಿಗಳನ್ನು ದೂರೀಕರಿಸಿ ಅವುಗಳ ಅಸ್ತಿತ್ವವನ್ನೇ ಕಳೆದು ಬಿಟ್ಟಿದ್ದು ನಮ್ಮ ಸಾಧನೆಯಾಗಿದೆ.

ನಮ್ಮ ಜೀವನ ಪದ್ಧತಿಯು ತಾಂತ್ರಿಕ ಜಗತ್ತಿನ ಜೊತೆಯಲ್ಲಿ ನಡೆದಂತೆ ನಮ್ಮ ಬದುಕಿನ ಸಂಬಂಧಗಳು ಹೃದಯವಂತಿಕೆಯ ಸೇವೆಗಳು ಮರೆಯಾದಂತೆ ಪ್ರಾಣಿಗಳ ಇರುವಿಕೆಗೆ ನಮ್ಮ ಮನೆಯಲ್ಲಿ ಸ್ಥಳವೇ ಇಲ್ಲವಾಯಿತು, ಅವುಗಳ ಸಗಣಿ ಎತ್ತುವುದು ಹಾಲು ಕರೆಯುವುದು, ಮೇವು-ನೀರು ಹಾಕುವುದು, ಮೈ ತೊಳೆಯುವುದು ಒಂದು ಸಂಕಟವಾದ ಕಾರಣ ಯಾರೂ ಜಾನುವಾರುಗಳನ್ನು ಸಾಕುವುದಕ್ಕೆ ಮನಸ್ಸು ಮಾಡಲಿಲ್ಲ. ಎಲ್ಲೋ ಯಾರೋ ಒಬ್ಬರು ಕೋಳಿಯೋ, ದನವೋ ಸಾಕುತ್ತೇನೆ ಎಂದು ಯೋಚಿಸಿದರೆ ಅದನ್ನು ಸಾಕುವ ಪರಿಸರ ಈಗ ಇಲ್ಲ. ಕೋಳಿ ಕೂಗಿದೆ, ದನ ಅಂಬಾ ಅಂದರೆ, ನಾಯಿ ಬೊಗಳಿದರೆ, ಸಗಣಿ-ಗೋಮೂತ್ರ ನೆಲದಲ್ಲಿ ಬಿದ್ದರೆ ಅಕ್ಕ-ಪಕ್ಕದ ಮನೆಯವರು ಜಗಳ ಮಾಡಿ ಬೊಬ್ಬೆ ಹಾಕುತ್ತಾರೆ. ಇನ್ನು ಇವುಗಳಿಗೆ ಅಂಗಡಿಯಿಂದ ಆಹಾರವನ್ನು ತಂದು ಹಾಕುವ ಅಂದರೆ ಅದು ದುಬಾರಿ ಹೀಗಿರುವಾಗ ನಮಗೆ ಸಾಕುಪ್ರಾಣಿಗಳ ಅಗತ್ಯ ಅನ್ನಿಸುವುದೇ ಇಲ್ಲವಾಯಿತು.

ನಂಬಿಕೆಯನ್ನು ಹೊದೆದುಕೊಂಡು ಬದುಕುವ ನಾವುಗಳು ದೈವ-ದೇವರನ್ನು ಆರಾಧಿಸಿಕೊಂಡು ಕಷ್ಟ-ಸುಖಕ್ಕೆ ಎದುರಾಗಿ ನಡೆದಿದ್ದೇವೆ. ಕುರಿ-ಕೋಳಿಯಾದಿಯಾಗಿ ಸಾಕು ಪ್ರಾಣಿಗಳನ್ನು ದೈವಕ್ಕೆ ಹರಕೆಯಾಗಿ ಬಿಟ್ಟು ಭಕ್ತಿ ಮಾಡುವುದು ಸಾಮಾನ್ಯವಾಗಿತ್ತು. ಇದು ಅನೇಕ ಸಾಕು ಪ್ರಾಣಿಗಳಿಗೆ ಮನೆಯಲ್ಲಿ ನೆಲೆಯನ್ನು ಕಲ್ಪಿಸಿದ್ದವು. ಈಗ ಅಂತಹ ನಂಬಿಕೆಯ ತಳಪಾಯ ಕುಸಿಯುತ್ತಿರುವ ಕಾರಣದಿಂದ ಹರಕೆಯ ಮಹತ್ವ ನಮ್ಮೊಳಗೆ ಘನೀಕರಣವಾಗುತ್ತಿಲ್ಲ.

ವಸಾಹತುಶಾಹಿ ಆಡಳಿತ ಹಾಗೂ ಭಾರತ ಸರಕಾರವು ಪ್ರಾಣಿಗಳ ಹಿತ ರಕ್ಷಣೆಯನ್ನು ಒದಗಿಸಬೇಕು ಅನ್ನುವ ನೆಲೆಯಿಂದ ಅನೇಕ ಕಾನೂನುಗಳನ್ನು ರಚಿಸಿತು. ಇದರ ಬೆನ್ನಿಗೆ ಪ್ರಾಣಿ ದಯ ಸಂಘಗಳು ಹುಟ್ಟಿಕೊಂಡು ಕೆಲವೊಂದು ಪ್ರಾಣಿಗಳ ಜೊತೆ ಜೀವನ ಕಟ್ಟಿಕೊಂಡಿದ್ದ ಬಹು ಸಂಖ್ಯೆಯ ಜನರು ತಮ್ಮ ಸಾಂಸ್ಕೃತಿಕ ಅಭಿವ್ಯಕ್ತಿಯನ್ನೇ ದೂರೀಕರಿಸಬೇಕಾಯಿತು. ಈ ನಡುವೆ ಕೆಲವೊಂದು ಜನಪದ ಆಚರಣೆಗಳು ಸಾಕು ಪ್ರಾಣಿಗಳೊಂದಿಗಿನ ಸಂಬಂಧವನ್ನು ಹಸಿ ಹಸಿಯಾಗಿ ಇಟ್ಟಿದ್ದವು. ಆದರೆ ಈಗ ಕಾನೂನು ಇಂತಹ ಆಚರಣೆಗೂ ಅಡ್ಡ ನಿಂತಿರುವ ಕಾರಣ ಸಾಕು ಪ್ರಾಣಿಗಳು ಇವತ್ತು ಮೆಲ್ಲಗೆ ನಮ್ಮಿಂದ ದೂರಕ್ಕೆ ಸರಿಯುತ್ತಿವೆ.

ಜನ-ಜಾನುವಾರು-ಜಾಗ ಇವುಗಳು ಮನುಷ್ಯನ ಬದುಕಿಗೆ ದಿಕ್ಕು ದೆಸೆಯನ್ನು ಕಟ್ಟಿದವು ಮತ್ತು ಸತ್ವಪೂರ್ಣವಾದ ಪರಿಸರವನ್ನು ನಮ್ಮೊಳಗೆ ಹುಟ್ಟು ಹಾಕುವಂತೆ ಮಾಡಿದವು ಎನ್ನುವ ವಿಚಾರವನ್ನು ಮರೆಯುವಂತೆಯೇ ಇಲ್ಲ. ಮರೆತರೇ ನಮ್ಮ ಅಸ್ತಿತ್ವವನ್ನು ಕಳೆದುಕೊಂಡಂತೆ.

share
ಡಾ. ಸುಬ್ರಹ್ಮಣ್ಯ ಸಿ. ಕುಂದೂರು
ಡಾ. ಸುಬ್ರಹ್ಮಣ್ಯ ಸಿ. ಕುಂದೂರು
Next Story
X