ಸಂವೇದನಾಶೀಲ ಸಂಘಟಕ ಕೆ. ರೇವಣ್ಣ

‘ಭಾಗವತರು’ ರೇವಣ್ಣ ಅವರ ಅರುವತ್ತರ ಅಭಿನಂದನಾ ಸಮಾರಂಭ ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.
ಕೆ. ರೇವಣ್ಣ ಎಂಬ ವ್ಯಕ್ತಿ, ಸಾಂಸ್ಕೃತಿಕ ಶಕ್ತಿಯಾಗಿ ಬೆಳೆದದ್ದು ಒಂದು ವಿಸ್ಮಯಕಾರಿ ಪಯಣ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೆರೆಒಳಗೆರಹಳ್ಳಿಯಲ್ಲಿ ಹುಟ್ಟಿದ ರೇವಣ್ಣ ಬೆಂಗಳೂರಿನ ಸಾಂಸ್ಕೃತಿಕ ವಲಯದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದು ಸಾಮಾನ್ಯ ಸಂಗತಿಯಲ್ಲ. ಇಲ್ಲಿ ನನ್ನದೇ ಅನುಭವವನ್ನು ಹಂಚಿಕೊಳ್ಳಬಯಸುತ್ತೇನೆ.
ನಾನು ಕೂಡ ತುಮಕೂರು ಜಿಲ್ಲೆಯಿಂದ ಬಂದವನು. ಬರಗೂರೆಂಬ ಹಳ್ಳಿಯಿಂದ ಎಂ.ಎ. ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದ ನನಗೆ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲು ಹತ್ತುವಾಗಲೇ ಹಿಂಜರಿಕೆ ಕಾಡುತ್ತಿತ್ತು. ಕಾಲೇಜು ಅಧ್ಯಾಪಕನಾದ ಮೇಲೂ ಈ ಕಾಡುವಿಕೆ ಕೊನೆಗೊಂಡಿರಲಿಲ್ಲ. ಇದಕ್ಕೆ ಕಾರಣವೆಂದರೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ನಾಟಕ ಪ್ರಯೋಗಗಳ ಸಂದರ್ಭದಲ್ಲಿ ಅಲ್ಲಿ ನೆರೆದಿರುತ್ತಿದ್ದ ‘ಬುದ್ಧಿವಂತ ಸಮೂಹ’ದ ನಡುವೆ ನಾನು ‘ಪರಕೀಯ’ ಅನ್ನಿಸಿಬಿಡುತ್ತಿತ್ತು. ಪರಕೀಯ ಭಾವದಿಂದ ಹೊರಬರಲು ಕೆಲಕಾಲ ಹಿಡಿಯಿತು. ಇಂತಹ ಕಡೆ ಆತ್ಮವಿಶ್ವಾಸ ಮುಖ್ಯವಾಗುತ್ತದೆ. ರೇವಣ್ಣ ಬಹುಶಃ ನಮ್ಮ ಬರಗೂರಿಗಿಂತಲೂ ಚಿಕ್ಕಹಳ್ಳಿಯಿಂದ ಬಂದವರು. ಅವರಿಗೂ ನನಗಾದ ಅನುಭವವೇ ಆಗಿರಲು ಸಾಧ್ಯ. ಯಾವುದೇ ಹಳ್ಳಿಗಾಡಿನ ವ್ಯಕ್ತಿಗೆ ನಗರದಲ್ಲಿ ಆರಂಭಿಕ ಹಿಂಜರಿಕೆ ಇರುತ್ತದೆ.
ಈ ಹಿಂಜರಿಕೆಯನ್ನು ಹಿಂದಿಕ್ಕಿ ನಡೆಯಲು ಸಿದ್ಧತೆ ಮತ್ತು ಆತ್ಮವಿಶ್ವಾಸ ಬೇಕು. ಸಿದ್ಧತೆಯೆಂದರೆ, ನಮ್ಮ ನಮ್ಮ ಕ್ಷೇತ್ರಗಳಲ್ಲಿ ಗಳಿಸಬೇಕಾದ ಪಕ್ವತೆ. ಪಕ್ವತೆ ಎನ್ನುವುದೇ ಒಂದು ಪಯಣ. ಪ್ರಧಾನವಾಗಿ ರಂಗಭೂಮಿಯ ವಲಯಕ್ಕೆ ಸೇರಿಕೊಂಡ ರೇವಣ್ಣನವರು ಆ ಕ್ಷೇತ್ರದಲ್ಲಿ ಪ್ರಾಮಾಣಿಕ ಪಯಣ ಬೆಳೆಸಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಆತ್ಮವಿಶ್ವಾಸವನ್ನು ದಕ್ಕಿಸಿಕೊಂಡು ಬೇರೆಯವರ ವಿಶ್ವಾಸ ಗಳಿಸಿಕೊಂಡು ವಿಶ್ವಾಸಾರ್ಹ ವ್ಯಕ್ತಿತ್ವವನ್ನು ರೂಢಿಸಿಕೊಂಡಿದ್ದಾರೆ. ಹಳ್ಳಿಗಾಡಿನಿಂದ ಬಂದು ರಾಜಧಾನಿಯಲ್ಲಿ ಸಾವಧಾನಿಯಾಗಿ ಒಂದೊಂದೇ ಹೆಜ್ಜೆಯಿಡುತ್ತ ಗುರುತು ಮೂಡಿಸಿದ ಅವರ ಕೆಲಸದ ಬಗ್ಗೆ ನನಗೆ ಹೆಮ್ಮೆಯಿದೆ. ಅವರ ಕೆಲಸಗಳೇ ಹೆಮ್ಮೆಯ ಹೆಗ್ಗುರುತುಗಳಾಗಿವೆ.
ನಟರಾಗಿ, ರಂಗಕರ್ಮಿಯಾಗಿ ಕೆಲಸ ಮಾಡುತ್ತ ಬಂದ ರೇವಣ್ಣನವರು ೨೦೦೧ರಲ್ಲಿ ‘ಭಾಗವತರು’ ಎಂಬ ಟ್ರಸ್ಟ್ ಸ್ಥಾಪಿಸಿದ ಮೇಲೆ ಇನ್ನೊಂದು ಆಯಾಮದ ಹಾದಿಯತ್ತ ಸಾಗಿದರು. ಅದು ವಿಶಿಷ್ಟ ಕಾರ್ಯಕ್ರಮಗಳ ಸಂಘಟನೆಯ ಹಾದಿ. ಈ ಸಂಘಟನಾ ಪ್ರವೃತ್ತಿಯಿಂದ ತನ್ನ ವೃತ್ತಿಗೆ ತೊಂದರೆಯಾಗದಂತೆ ಸಮತೋಲನವನ್ನು ಸಾಧಿಸಿಕೊಂಡು ಬಂದರು. ಇವರದು ಕರ್ನಾಟಕ ನಾಟಕ ಅಕಾಡಮಿಯಲ್ಲಿ ‘ಯೋಜನಾ ಸಹಾಯಕ’ ಎಂಬ ಹುದ್ದೆ. ಅಲ್ಲಿ ಕೆಲಸ ಮಾಡುತ್ತಲೇ ತನ್ನ ಸಾಂಸ್ಕೃತಿಕ ನೆಲೆಗಳನ್ನು ವಿಸ್ತರಿಸಿಕೊಂಡು ‘ಭಾಗವತರು’ ಸಂಸ್ಥೆಯಿಂದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿದರು. ವಿಶೇಷವೆಂದರೆ ಕಾರ್ಯಕ್ರಮಗಳ ವಸ್ತು ವಿಷಯಗಳಿಗನುಗುಣವಾಗಿ ಆಯಾ ಕ್ಷೇತ್ರದ ಪರಿಣತರನ್ನು ತೊಡಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ತಮ್ಮನ್ನು ‘ಪರಿಣತ’ ಎಂದು ಭಾವಿಸದೆ ‘ಪರಿಚಾರಕ’ ಎಂದುಕೊಂಡು ಕ್ರಿಯಾಶೀಲರಾದರು. ಪರಿಚಾರಕತ್ವಕ್ಕೂ ಒಂದು ರೀತಿಯ ಪರಿಣತಿಯು ಬೇಕಾಗುತ್ತದೆ. ಆ ಪರಿಣತಿಯನ್ನು ಪಡೆಯುತ್ತಲೇ ವಿವಿಧ ಕ್ಷೇತ್ರದ ಪರಿಣತರ ಪ್ರಶಂಸೆಗೆ ಪಾತ್ರರಾದದ್ದು ರೇವಣ್ಣನವರ ಒಂದು ವಿಶೇಷ.
‘ಭಾಗವತರು ಸಂಸ್ಥೆಯ ಮೂಲಕ ಇಲ್ಲಿಯವರೆಗೆ ಒಟ್ಟು ಇಪ್ಪತ್ತೆರಡು ನಾಟಕೋತ್ಸವಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಇವುಗಳಲ್ಲಿ ಹೊಸ ನಾಟಕಗಳ ಐದು ಉತ್ಸವಗಳೂ ಸೇರಿವೆ. ಕೆಲವು ಸಂಗೀತ ಕಾರ್ಯಕ್ರಮಗಳನ್ನು ರೇವಣ್ಣನವರು ಆಯೋಜಿಸಿದ್ದಾರೆ. ಅವರ ಮಕ್ಕಳು ಗಮನಾರ್ಹ ಸಂಗೀತಗಾರರೆಂಬುದನ್ನೂ ಇಲ್ಲಿ ನೆನೆಯಬಹುದು. ಶಾಸ್ತ್ರೀಯವಾಗಿ ಗಾಯನವನ್ನು ಕಲಿತ ಮಕ್ಕಳ ಆಸಕ್ತಿಗೆ ತಂದೆ ರೇವಣ್ಣನವರೇ ಪ್ರೇರಣೆ.
ರೇವಣ್ಣನವರು ‘ಭಾಗವತರು ಸಂಸ್ಥೆಯ ಮೂಲಕ ಏರ್ಪಡಿಸಿದ ಸಾಹಿತ್ಯ ಚಿಂತನೆಯ ಕಾರ್ಯಕ್ರಮಗಳು ತುಂಬಾ ವಿಶಿಷ್ಟತೆಯಿಂದ ಕೂಡಿವೆ. ಹಿರಿಯ ಸಾಹಿತಿಗಳ ಕೊಡುಗೆಯ ಬಗ್ಗೆ ವಿಚಾರಗೋಷ್ಠಿ, ಸಂವಾದ, ಗೌರವಾರ್ಪಣೆ-ಹೀಗೆ ವಿವಿಧ ನೆಲೆಗಳನ್ನು ಒಂದೇ ಕಾರ್ಯಕ್ರಮದಲ್ಲಿ ಅಳವಡಿಸಿ ಚೇತೋಹಾರಿಯಾಗಿ ಮಾಡುವುದು ರೇವಣ್ಣನವರ ವಿಶೇಷ. ತಮ್ಮ ಸಂಸ್ಥೆಯಿಂದಷ್ಟೇ ಅಲ್ಲದೆ ಇತರ ಸಮಾನ ಮನಸ್ಕ ಸಂಸ್ಥೆಗಳೊಂದಿಗೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೇವಣ್ಣ ಆಯೋಜಿಸಿದ್ದಾರೆ. ಸಂವೇದನಾಶೀಲ ಸಂಘಟಕರಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ.
ಸಾರ್ವಜನಿಕ ಸಂಸ್ಥೆಗಳಲ್ಲಿ ಸಕ್ರಿಯ ಸೇವೆ ಸಲ್ಲಿಸುವುದು ರೇವಣ್ಣನವರ ವ್ಯಕ್ತಿತ್ವದ ಇನ್ನೊಂದು ಆಯಾಮ. ಸುಪ್ರಭಾತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ರೇವಣ್ಣನವರು ಸಾಂಸ್ಕೃತಿಕ ಸಂಸ್ಥೆಗಳ ಸ್ನೇಹವನ್ನು ಮರೆತಿಲ್ಲ. ಪ್ರಯೋಗ ರಂಗ, ಭಾರತ ಯಾತ್ರಾ ಕೇಂದ್ರ, ಹೊಂಬಾಳೆ, ಆದರ್ಶ ಸುಗಮ ಸಂಗೀತ ಅಕಾಡಮಿ, ಉಪಾಸನಾ, ಮುಂತಾದ ವಿವಿಧ ಹಾಗೂ ವಿಭಿನ್ನ ಪ್ರವೃತ್ತಿಯ ಸಂಸ್ಥೆಗಳ ಜೊತೆಗೆ ಸೇರಿ ಕೆಲಸ ಮಾಡಿದ್ದಾರೆ. ನಾವು ಕೆಲವು ಗೆಳೆಯರು ಪ್ರತಿವರ್ಷ ಏರ್ಪಡಿಸುವ ಡಾ. ರಾಜಕುಮಾರ್ರವರ ಸೋದರರಾದ ಶ್ರೀ ವರದರಾಜು ಅವರ ಹೆಸರಿನ ಪ್ರಶಸ್ತಿ ಪ್ರದಾನ ಸಮಾರಂಭದ ಆಯೋಜನೆಯಲ್ಲಿ ಒಬ್ಬರಾಗಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ನನ್ನ ಬಗ್ಗೆ ಅಪಾರ ಗೌರವಾದರಗಳನ್ನು ತೋರಿಸುವ ರೇವಣ್ಣನವರು ಆಗಾಗ ನಾನೇನಾದರೂ ಕೆಲಸ ಹೇಳಿದರೆ ತಕ್ಷಣ ಮಾಡುವುದು ಅವರ ಮನೋಧರ್ಮದ ಒಂದು ಸಂಕೇತ ಎಂದು ನಾನು ಭಾವಿಸುತ್ತೇನೆ. ಅವರ ಕ್ರಿಯಾಶೀಲತೆಯನ್ನು ಸಮೀಪ ಮತ್ತು ದೂರ-ಎರಡೂ ನೆಲೆಗಳಿಂದ ನಾನು ಅರ್ಥ ಮಾಡಿಕೊಂಡಿದ್ದೇನೆ.
ಬೆಂಗಳೂರಿನಲ್ಲಿರುವ ರೇವಣ್ಣನವರ ಮನೆಯ ಹೆಸರು ‘ಮಾಳಿಗೆ ಮನೆ’. ಈ ಹೆಸರನ್ನು ಅವರು ಯಾಕೆ ಇಟ್ಟರೋ ನನಗೆ ತಿಳಿಯದು. ಆದರೆ ಬಯಲು ಸೀಮೆಯೆನ್ನಿಸಿಕೊಂಡ ತುಮಕೂರು ಜಿಲ್ಲೆಯವರಾದ ನಮಗೆ ‘ಮಾಳಿಗೆ ಮನೆ’ಯೆಂದರೆ ಮಣ್ಣಿನ ಹೆಂಟೆಗಳನ್ನು ಪೋಣಿಸಿ ಕಟ್ಟಿದ ಜಂತೆಯ ಮನೆ. ಜಂತೆಯೆಂದರೆ ಮನೆಯ ಮೇಲ್ಭಾಗ. ಮರದ ಉದ್ದವಾದ ತುಂಡುಗಳನ್ನು ಅಥವಾ ಗಟ್ಟಿ ರೆಂಬೆಗಳನ್ನು ಮಾಳಿಗೆಗೆ-ಅಂದರೆ ಮನೆಯ ಸೂರು ಎನ್ನಿಸಿಕೊಳ್ಳುವ ಮೇಲ್ಭಾಗಕ್ಕೆ ಜೋಡಿಸಿ ಮಣ್ಣು ಮರಳುಗಳ ಮಿಶ್ರಣದಲ್ಲಿ ಭದ್ರ ಪಡಿಸುವುದು ‘ಮಾಳಿಗೆ ಮನೆ’ಯ ಸ್ವರೂಪ. ಈಗ ರೇವಣ್ಣನವರು ಯಾವ ಸ್ವರೂಪದಲ್ಲಾದರೂ ಮನೆಯನ್ನು ಕಟ್ಟಿಸಿರಲಿ, ಯಾವ ವಸ್ತುಗಳಿಂದಲಾದರೂ ಕಟ್ಟಿಸಿರಲಿ, ‘ಮಾಳಿಗೆ ಮನೆ’ ಎಂಬ ಹೆಸರು ಅವರ ಮನೋಧರ್ಮದ ಸಂಕೇತ ಎಂದು ಭಾವಿಸುತ್ತೇನೆ. ರೇವಣ್ಣನವರ ಮಾಳಿಗೆ ಮನೆಯ ಮನಸ್ಸು ಸದಾ ಸಂವೇದನಾಶೀಲವಾಗಿರಲಿ ಎಂದು ಹಾರೈಸುತ್ತೇನೆ.