Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಕೈಗಾರಿಕಾ ಸ್ಥಾವರಗಳ ದುರಂತಗಳಿಗೆ ಎಂದು...

ಕೈಗಾರಿಕಾ ಸ್ಥಾವರಗಳ ದುರಂತಗಳಿಗೆ ಎಂದು ಕೊನೆ?

ಟಿ.ಆರ್. ಭಟ್ಟಿ.ಆರ್. ಭಟ್27 July 2025 12:39 PM IST
share
ಕೈಗಾರಿಕಾ ಸ್ಥಾವರಗಳ ದುರಂತಗಳಿಗೆ ಎಂದು ಕೊನೆ?
ಉದ್ಯಮದ ಪ್ರವರ್ತಕರಲ್ಲಿ, ಅಲ್ಲಿ ದುಡಿಯುವ ಉದ್ಯೋಗಿಗಳಲ್ಲಿ, ಸರಕಾರದ ಅಂಗಸಂಸ್ಥೆಗಳಲ್ಲಿ ಮತ್ತು ರಾಜಕೀಯ ನಾಯಕರಲ್ಲಿ ಕೈಗಾರಿಕಾ ಸ್ಥಾವರ ಮತ್ತು ಅಲ್ಲಿನ ಕಾರ್ಮಿಕರ ಸುರಕ್ಷತೆಯ ಕುರಿತಾದ ಬದ್ಧತೆ ಇದ್ದರೆ ಮಾತ್ರ ಅಪಘಾತಗಳಿಂದ ಪಾಠಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಅದಿಲ್ಲವಾದಾಗ, ದುರಂತದ ಸುದ್ದಿ ಕಾಲದ ಗರ್ಭಕ್ಕೆ ಸೇರಿ ನೆನಪಿನಿಂದ ಮಾಯವಾಗುತ್ತದೆ; ಅಪಘಾತಕ್ಕೆ ಈಡಾದವರ ರೋದನವೂ ಅರಣ್ಯರೋದನವೇ ಆಗಿ ಉಳಿಯುತ್ತದೆ; ಇನ್ನೊಂದು ದುರಂತವಾದಾಗ ಮತ್ತೆ ಸದ್ದು ಕೇಳುತ್ತದೆ.

ಇದೇ ಜುಲೈ 12ನೇ ತಾರೀಕಿನಂದು ಮಂಗಳೂರಿನ ಹೊರವಲಯದಲ್ಲಿರುವ ಎಂಆರ್ಪಿಎಲ್ ಸ್ಥಾವರದಲ್ಲಿ ಇಬ್ಬರು ಉದ್ಯೋಗಿಗಳು ಅಪಮೃತ್ಯುವಿಗೆ ಬಲಿಯಾದರು. ಕಂಪೆನಿಯ ಪ್ರಕಾರ ಹೈಡ್ರೊಜನ್ ಸಲ್ಫೈಡ್ ಅನಿಲ ಸೋರಿಕೆಯ ಸುಳಿವು ಇದ್ದುದನ್ನು ಪರೀಕ್ಷಿಸಲು ಅವರು ಒಂದು ತೈಲದ ಟ್ಯಾಂಕಿನ ಮೇಲೆ ಹತ್ತಿದ್ದರು. ಆಗ ವಿಷಾನಿಲವನ್ನು ಸೇವಿಸಿ ದುರಂತಕ್ಕೆ ಬಲಿಯಾದರು.

ಜೂನ್ 30ಕ್ಕೆ ಹೈದರಾಬಾದ್ನಿಂದ 50 ಕಿಲೋಮೀಟರ್ ದೂರದ ಸಂಗಾರೆಡ್ಡಿ ಜಿಲ್ಲೆಯ, ಔಷಧಿಗಳನ್ನು ಉತ್ಪಾದಿಸುವ ಸಿಗಾಚಿ ಇಂಡಸ್ಟ್ರೀಸ್ ಕಂಪೆನಿಯ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 44 ಮಂದಿ ಹತರಾದರು. ಸ್ಫೋಟದ ಆಘಾತಕ್ಕೆ ಮೂರು ಮಹಡಿಯ ಕಟ್ಟಡವು ಕುಸಿದು ಬಿತ್ತು; ಕೆಲವು ಕಾರ್ಮಿಕರು ಕಟ್ಟಡದಿಂದ ಸುಮಾರು ಮೀಟರ್ ದೂರಕ್ಕೆ ಎಸೆಯಲ್ಪಟ್ಟರು. ಇತ್ತೀಚೆಗಿನ ವರ್ಷಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ಸ್ಫೋಟ ಇದು ಎಂದು ಅಭಿಪ್ರಾಯ.

ಕಳೆದ 30 ತಿಂಗಳುಗಳಲ್ಲಿ ಇದೇ ಕೈಗಾರಿಕಾ ವಲಯದಲ್ಲಿ ಸುಮಾರು 10 ಸ್ಫೋಟಗಳು ನಡೆದಿವೆ. ನಿರ್ವಹಣೆ(Maintenance)ಯ ಕೊರತೆ ಹಾಗೂ ಕಾರ್ಮಿಕರ ಅಪಕ್ವ ತರಬೇತಿಯಿಂದಾಗಿ ಈ ತರಹದ ಅಪಘಾತಗಳು ಆಗಿವೆ ಎಂದು ತಜ್ಞರ ಹೇಳಿಕೆ.

2024 ಆಗಸ್ಟ್ ತಿಂಗಳಿನಲ್ಲಿ ಆಂಧ್ರಪ್ರದೇಶದ ವಿಶೇಷ ಆರ್ಥಿಕ ವಲಯದ ‘ಎಶೆನ್ಶಿಯ ಅಡ್ವಾನ್ಸ್ಡ್ ಸಯನ್ಸಸ್’ಗೆ ಸೇರಿದ ಔಷಧ ಉತ್ಪಾದಿಸುವ ಸ್ಥಾವರದಲ್ಲಿ ನಡೆದ ದುರ್ಘಟನೆಯಲ್ಲಿ 18 ಕಾರ್ಮಿಕರು ಸಾವಿಗೆ ಈಡಾಗಿದ್ದರು. ಮೇ ತಿಂಗಳಲ್ಲಿ ಮುಂಬೈಯಲ್ಲಿ ‘ಅಮುದನ್ ಕೆಮಿಕಲ್ಸ್’ ಕಂಪೆನಿಯ ಉತ್ಪಾದನಾ ಘಟಕದಲ್ಲಿ ನಡೆದ ದುರ್ಘಟನೆಯಲ್ಲಿ 13 ಮಂದಿ ಉದ್ಯೋಗಿಗಳು ಜೀವ ಕಳಕೊಂಡರು.

ಮೇ 2022ರಲ್ಲಿ ದಿಲ್ಲಿಯ ಮುಂಡ್ಕಾದ ಕಾರ್ಖಾನೆಯೊಂದರಲ್ಲಿ ಬೆಂಕಿ ಅಪಘಾತದಲ್ಲಿ 27 ಮಂದಿ ಕಾರ್ಮಿಕರು (ಅವರಲ್ಲಿ 21 ಮಂದಿ ಮಹಿಳೆಯರು) ಸುಟ್ಟು ಕರಕಲಾದರು. ಇಲೆಕ್ಟ್ರಾನಿಕ್ ಮತ್ತು ಕಣ್ಗಾವಲು ಉಪಕರಣಗಳನ್ನು ತಯಾರಿಸುವ ಈ ಘಟಕದ ನಾಲ್ಕು ಮಹಡಿ ಕಟ್ಟಡಕ್ಕೆ ಬೆಂಕಿ ಬಿತ್ತು. 100ಕ್ಕೂ ಮಿಕ್ಕಿ ಮಹಿಳೆಯರೂ ಸೇರಿದಂತೆ ಉದ್ಯೋಗಿಗಳು ಹಾಗೂ ಕಂಪೆನಿಯ ಅಧಿಕಾರಿಗಳು ವೃತ್ತಿಸಂಸ್ಕೃತಿಯ ಸುಧಾರಣೆಗೆ ಪ್ರೇರಣೆಗಳ ಕುರಿತಂತೆ ಆಗುತ್ತಿದ್ದ ಭಾಷಣ ಕೇಳಲು ಬಂದಿದ್ದರು.

ಇಂತಹ ಅವಘಡಗಳು ದೇಶದಲ್ಲಿ ಇತ್ತೀಚೆಗೆ ವಿವಿಧೆಡೆ ಸಂಭವಿಸಿವೆ; ಅಪಾರವಾದ ಜೀವಹಾನಿಗಳಾಗಿವೆ. ಸರಕಾರದ ಅಂಕಿ ಅಂಶಗಳ ಪ್ರಕಾರ 2017-2020ರ ಅವಧಿಯಲ್ಲಿ ನೋಂದಾಯಿತ ಕಾರ್ಖಾನೆಗಳಲ್ಲಿ ವರ್ಷಕ್ಕೆ ಸರಾಸರಿ 1,109 ಮಂದಿ ಉದ್ಯೋಗಿಗಳು ಬಲಿಯಾಗಿದ್ದರು. ಗಾಯಾಳುಗಳ ಸಂಖ್ಯೆ4,000 ಕ್ಕಿಂತಲೂ ಹೆಚ್ಚಿದೆ.

ವಿಶ್ವ ಕೈಗಾರಿಕಾ ಕಾರ್ಮಿಕರ ಸಂಘದ (Industriall Global Union) ಪ್ರಕಾರ 2024ರ ಜನವರಿ-ಡಿಸೆಂಬರ್ 10, ಅವಧಿಯಲ್ಲಿ ಉತ್ಪಾದನೆ (manufacturing), ಗಣಿಗಾರಿಕೆ (mining) ಮತ್ತು ಶಕ್ತಿ (energy) ಉತ್ಪಾದನೆಯ ಘಟಕಗಳಲ್ಲಿ ಕನಿಷ್ಠ 240 ಅವಘಡಗಳು ಸಂಭವಿಸಿದ್ದವು; ಅವುಗಳಲ್ಲಿ 400ಕ್ಕೂ ಮಿಕ್ಕಿ ಉದ್ಯೋಗಿಗಳು ಹತರಾಗಿದ್ದರು. ದುಡಿಯುವ ಸ್ಥಳದಲ್ಲಿ ಆಗುವ ಅಪಘಾತಗಳನ್ನು ನಿಖರವಾಗಿ ವರದಿಮಾಡುವ ಕ್ರಮವಿಲ್ಲದ ಕಾರಣ ವಸ್ತು ಸ್ಥಿತಿ ಇದಕ್ಕಿಂತಲೂ ಗಂಭೀರವಾಗಿರಬಹುದು ಎಂದು ಸಂಘವು ಹೇಳಿದೆ.

ಕಾರಣಗಳು

ಉದಾರೀಕರಣದ ಯುಗದಲ್ಲಿ ಉದ್ದಿಮೆಗಳ ಒಂದು ಪ್ರಮುಖ ಬೇಡಿಕೆ ಎಂದರೆ ಉದ್ಯಮ ಸ್ನೇಹಿ ವಾತಾವರಣವನ್ನು ಒದಗಿಸಿಕೊಡುವುದು (ಅಂದರೆ Ease of doing business). ಸರಕಾರವು ಉದ್ಯಮ ಸ್ನೇಹಿಯಾಗುವುದೆಂದರೆ ಪ್ರಸಕ್ತ ನೀತಿ, ಕಾನೂನು ಮತ್ತು ನಿಯಮಗಳನ್ನು ಸಡಿಲಗೊಳಿಸಿ ಉದ್ದಿಮೆಯನ್ನು ಆರಂಭಿಸಲು ಮತ್ತು ನಿರ್ವಹಿಸಲು ಸುಲಭವಾಗುವಂತೆ ಮಾಡುವುದು.

ಈ ವಾತಾವರಣವನ್ನು ಒದಗಿಸಿಕೊಟ್ಟಾಗ ಉದ್ದಿಮೆಯ ಪ್ರವರ್ತಕರ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ಒಂದು ಕಾರ್ಖಾನೆಯನ್ನು ಆರಂಭಿಸುವಾಗ ಆ ವಠಾರದಲ್ಲಿ ನೀರು, ಗಾಳಿ ಮತ್ತು ಪರಿಸರವು ಕಲುಷಿತವಾಗದಂತೆ, ಉತ್ಪಾದನಾ ಘಟಕವು ಇರುವ ಕಟ್ಟಡವು ಸ್ಥಳೀಯ ಕಟ್ಟಡ ನಿರ್ಮಾಣದ ನೀತಿಗಳಿಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳುವ, ಅಲ್ಲಿ ದುಡಿಯುವ ಉದ್ಯೋಗಿಗಳ ಹಾಗೂ ಆ ವಲಯದಲ್ಲಿ ವಾಸವಾಗಿರುವ ಸಾಮಾನ್ಯ ನಾಗರಿಕರ ಸುರಕ್ಷೆಗೆ ಅಗತ್ಯವಾದ ಮುಂಜಾಗರೂಕತೆಗಳನ್ನು ಕೈಗೊಳ್ಳುವ ಉತ್ತರದಾಯಿತ್ವ ಪ್ರವರ್ತಕರು ಮತ್ತು ಆ ಕಂಪೆನಿಯ ಹಿರಿಯ ಉದ್ಯೋಗಿಗಳ ಮೇಲೆ ಇದೆ.

ಘಟಕವು ಸೂಕ್ತ ನಿರ್ವಹಣಾ ಕ್ರಮಗಳನ್ನು ನಿರಂತರವಾಗಿ ಅನುಸರಿಸಬೇಕು. ಈ ವ್ಯವಸ್ಥೆಗಳು ಸಮರ್ಪಕವಾಗಿದೆ ಎಂದು ಸಂಸ್ಥೆಯ ಸಕ್ಷಮ ಅಧಿಕಾರಿಯು ಕಾಲಕಾಲಕ್ಕೆ ಪ್ರಮಾಣೀಕರಿಸಬೇಕು. ಸ್ವತಂತ್ರ ನಿರೀಕ್ಷಕರ ಮೂಲಕ ಸ್ಥಾವರದಲ್ಲಿ ಏಳುವ ತಾಂತ್ರಿಕ ಲೋಪದೋಷಗಳನ್ನು ಗುರುತು ಹಿಡಿದು ಸಕಾಲಕ್ಕೆ ಪರಿಹಾರ ಕ್ರಮಗಳನ್ನು ಮಾಡಬೇಕು. ತಂತ್ರಜ್ಞಾನದ ಬಳಕೆಯ ಕುರಿತಂತೆ ಉದ್ಯೋಗಿಗಳಿಗೆ ಕಾಲಕಾಲಕ್ಕೆ ತರಬೇತಿ ನೀಡಬೇಕು; ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕು.

ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ತೀವ್ರವಾದ ಕೈಗಾರಿಕಾ ದುರಂತಗಳನ್ನು ಪರಿಶೀಲಿಸಿದರೆ ಕೆಲವು ಸಾಮಾನ್ಯವಾದ ಎಳೆಗಳನ್ನು ಹೀಗೆ ಗುರುತಿಸಬಹುದು:

1. ನಿರ್ವಹಣೆಯಲ್ಲಿ ಲೋಪಗಳು ಮತ್ತು ನಿರ್ಲಕ್ಷ್ಯ.

2. ಉದ್ಯೋಗಿಗಳ ರಕ್ಷಣೆಗೆ ಅಗತ್ಯವಾದ ಸಾಮಗ್ರಿಗಳನ್ನು ಒದಗಿಸದಿರುವುದು.

3. ಉದ್ಯೋಗಿಗಳಿಗೆ ಸೂಕ್ತ ತರಬೇತಿ ನೀಡದಿರುವುದು.

4. ಸ್ವತಂತ್ರವಾದ ತಜ್ಞರ ಮೂಲಕ ಕಾಲಕಾಲಕ್ಕೆ ಸ್ಥಾವರದ ವ್ಯವಸ್ಥೆಗಳ ಪರಿಶೀಲನೆ ನಡೆಸದಿರುವುದು.

5. ಪರಿಸರದ ರಕ್ಷಣೆಗೆ ಒತ್ತು ನೀಡದಿರುವುದು.

2020ಮೇ ತಿಂಗಳಿನಲ್ಲಿ, ವಿಶಾಖಪಟ್ಟಣದ ಎಲ್ಜಿ ಪಾಲಿಮರ್ ಕಾರ್ಖಾನೆಯಲ್ಲಿ ವಿಷಪೂರಿತ ಅನಿಲ ಸೋರಿಕೆಯಾಗಿ 6 ಮಂದಿ ಮೃತಪಟ್ಟಿದ್ದರು. ಆಗ ವಿಶ್ವ ಕೈಗಾರಿಕಾ ಕಾರ್ಮಿಕರ ಸಂಘವು ಭಾರತದ ಪ್ರಧಾನ ಮಂತ್ರಿಗಳಿಗೆ ಬರೆದ ಕಾಗದದಲ್ಲಿ ದೋಷಪೂರಿತ ನಿರ್ವಹಣೆ, ಕಾರ್ಮಿಕರನ್ನು ಗುತ್ತಿಗೆಯ ಆಧಾರದಲ್ಲಿ ನೇಮಿಸುವುದು, ಸುರಕ್ಷತೆಯ ಕ್ರಮಗಳ ನಿರ್ಲಕ್ಷ್ಯ, ನಿರ್ಲಕ್ಷ್ಯಕ್ಕೆ ಹೊಣೆಗಾರಿಕೆ ಇಲ್ಲದಿರುವುದು ಮತ್ತು ಮುಂಜಾಗರೂಕತೆಯ ವೈಫಲ್ಯದಿಂದ ಆಗುವ ಜೀವಹಾನಿ ಮತ್ತು ಸಂಪತ್ತು ನಷ್ಟಕ್ಕೆ ದಂಡನೆಯನ್ನು ವಿಧಿಸುವಲ್ಲಿ ವಿಳಂಬ-ಈ ಕೆಲವು ವಿಷಯಗಳ ಬಗ್ಗೆ ವಿಸ್ತೃತವಾಗಿ ಉಲ್ಲೇಖಿಸಿದೆ.

ಕೆಲವು ಉದಾಹರಣೆಗಳು

ಮುಂಡ್ಕಾದ ಸ್ಥಾವರವು ಅಗ್ನಿಶಾಮಕ ವಿಭಾಗದ ಒಪ್ಪಿಗೆಯಿಲ್ಲದೆ ಉತ್ಪಾದನೆಯನ್ನು ಆರಂಭಿಸಿತ್ತು. ಮಾತ್ರವಲ್ಲ, ಕಾರ್ಖಾನೆಗಳನ್ನು ಸ್ಥಾಪಿಸಲು ನಿಷೇಧವಿರುವ ಪ್ರದೇಶದಲ್ಲಿದ್ದ ಕಟ್ಟಡವನ್ನು ಕಾರ್ಖಾನೆಯ ಉದ್ದೇಶಕ್ಕೆ ಬಳಸಲಾಗಿತ್ತು.

ಎಂಆರ್ಪಿಎಲ್ನ ಕಾರ್ಮಿಕರು ಸುರಕ್ಷಾ ಕವಚ ಧರಿಸದೆ ಸೋರಿಕೆಯನ್ನು ಪರಿಶೀಲಿಸಲು ಮುಂದಾದರು; ಅಗತ್ಯದ ಕವಚವನ್ನು ಕಂಪೆನಿಯು ಅವರಿಗೆ ಒದಗಿಸಿರಲಿಲ್ಲ ಎಂದು ವರದಿಗಳು ಹೇಳಿವೆ.

ತೆಲಂಗಾಣದ ಸಿಗಾಚಿ ಸ್ಥಾವರದಲ್ಲಿ ದ್ರವರೂಪದ ಉತ್ಪನ್ನವನ್ನು ಸ್ಪ್ರೇ ಡ್ರೈಯರ್ ಮೂಲಕ ಬಿಸಿ ಅನಿಲಕ್ಕೆ ಒಡ್ಡಿ ಒಣಗಿಸಲಾಗುತ್ತದೆ. ಬಿಸಿ ಗಾಳಿಯನ್ನು ಬಿಡುವ ಉಪಕರಣವನ್ನು ಸರಿಯಾಗಿ ಶುದ್ಧೀಕರಿಸಿರಲಿಲ್ಲ ಮತ್ತು ಅದರ ನಿರ್ವಹಣೆ ದೋಷಪೂರ್ಣವಾಗಿದ್ದ ಕಾರಣದಿಂದ ಉಪಕರಣದ ತಾಪಮಾನವು ಸುರಕ್ಷತೆಯ ಮಟ್ಟಕ್ಕಿಂತ ಎಷ್ಟೋ ಹೆಚ್ಚಿ ಸ್ಫೋಟ ಸಂಭವಿಸಿರಬಹುದೆಂದು ತಜ್ಞರ ಅಭಿಮತ. ವಿಪರ್ಯಾಸವೆಂದರೆ, ಹೋದ ಡಿಸೆಂಬರ್ ತಿಂಗಳಿನಲ್ಲಿ ಸ್ಥಾವರದ ಸುರಕ್ಷತೆಯ ಬಗ್ಗೆ ಕಾರ್ಖಾನೆಯ ಸಕ್ಷಮ ವಿಭಾಗವು ಪ್ರಮಾಣೀಕರಿಸಿತ್ತು.

ಮುಂಬೈಯ ಅಮುದನ್ ಕೆಮಿಕಲ್ಸ್ ಸ್ಥಾವರದಲ್ಲಿ ರಾಸಾಯನಿಕಗಳ ಮಿಶ್ರಣ ಮತ್ತು ಸಂಗ್ರಹಣದಲ್ಲಿ ಬೇಕಾದ ಮುನ್ನೆಚ್ಚರಿಕೆಗಳನ್ನು ಅನುಸರಿಸಿರಲಿಲ್ಲ ಎಂದು ವರದಿಗಳಿವೆ.

ಹರ್ಯಾಣದ ಗುರುಗ್ರಾಮದಲ್ಲಿ 2022ರಲ್ಲಿ ಬೃಹತ್ ಗಾತ್ರದ ವಸತಿ ಸಮುಚ್ಚಯದ ನಿರ್ಮಾಣದ ಸಂದರ್ಭದಲ್ಲಿ 17ನೆಯ ಮಹಡಿಯಲ್ಲಿ ದೊಡ್ಡ ಕ್ರೇನ್ ಅನ್ನು ಜೋಡಿಸುವಾಗ ನಾಲ್ಕು ಮಂದಿ ಕಾರ್ಮಿಕರು ಕೆಳಗೆ ಬಿದ್ದು ಮೃತರಾಗಿದ್ದರು. ಅವರು ಸುರಕ್ಷತಾ ಸಜ್ಜು ಪಟ್ಟಿ (harness belt)ಗಳನ್ನು ಕಟ್ಟಿಕೊಂಡಿರಲಿಲ್ಲ; ಮಾತ್ರವಲ್ಲ ಕೆಳಗೆ ಬೀಳುವಾಗ ತಡೆಯಬಲ್ಲ ಸುರಕ್ಷತಾ ನೆಟ್ ಗಟ್ಟಿ ಇರದೆ ಅವರು ಬೀಳುವಾಗ ನೆಟ್ ಹರಿದು ದುರಂತ ಸಂಭವಿಸಿತು ಎಂದು ವರದಿಯಾಗಿದೆ. ಅಗತ್ಯದ ಸುರಕ್ಷಾ ನಿಯಮಗಳನ್ನು ಪಾಲಿಸಿದ್ದರೆ ಅವಘಡವು ಮಾರಣಾಂತಿಕವಾಗುತ್ತಿರಲಿಲ್ಲ.

ತ್ರಿಶಂಕು ಪರಿಸ್ಥಿತಿಯಲ್ಲಿ ಗುತ್ತಿಗೆ ಕಾರ್ಮಿಕರು

ಬಹುತೇಕ ಉತ್ಪಾದನಾ ಕಂಪೆನಿಗಳು ಕಾರ್ಮಿಕರನ್ನು ಗುತ್ತಿಗೆಯ ಆಧಾರದಲ್ಲಿ ನೇಮಿಸಿಕೊಳ್ಳುತ್ತವೆ. ಅವರ ಬಗ್ಗೆ ಎಲ್ಲ ಮಾಹಿತಿಗಳಿರುವುದು ಕಾರ್ಮಿಕರನ್ನು ಒದಗಿಸಿಕೊಟ್ಟ ಗುತ್ತಿಗೆ ಸಂಸ್ಥೆಗಳ ಬಳಿ. ಕಾರ್ಮಿಕರಿಗೂ ಕಂಪೆನಿಗೂ ನೇಮಕಾತಿ ಬಗ್ಗೆ ನೇರ ಒಪ್ಪಂದಗಳಿಲ್ಲದ ಕಾರಣ ಅವರ ಹಕ್ಕುಗಳು ಮೊಟಕಾಗುತ್ತವೆ. ದುಡಿಯುತ್ತಿದ್ದ ವೇಳೆ ಅವಘಡದಲ್ಲಿ ಮೃತರಾದರೆ ಅಥವಾ ಅಂಗಹೀನರಾದರೆ ಅವರ ಸಮೀಪದ ಬಂಧುಗಳಿಗೆ ಅಥವಾ ಅವರಿಗೆ ಸೂಕ್ತವಾದ ಪರಿಹಾರವನ್ನು ಯಾರು ಕೊಡಬೇಕು? ಹಲವಾರು ವರದಿಗಳ ಪ್ರಕಾರ ಗುತ್ತಿಗೆ ಸಂಸ್ಥೆ ಮತ್ತು ಕಾರ್ಖಾನೆಯ ಅಧಿಕಾರಿಗಳು ತಮ್ಮ ಉತ್ತರದಾಯಿತ್ವದಿಂದ ಜಾರಿಕೊಳ್ಳುತ್ತವೆ. ಮೃತರ ಬಂಧುಗಳ ಪರವಾಗಿ ಕಳುಹಿಸಿದ ನೊಟೀಸ್ಗಳಿಗೆ ಕಂಪೆನಿಗಳಾಗಲೀ ಗುತ್ತಿಗೆ ಸಂಸ್ಥೆಗಳಾಗಲೀ ಸುಲಭದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂಬ ವರದಿಗಳೂ ಇವೆ. ಅಪಘಾತದ ಹೊಣೆ ಯಾರ ಮೇಲೆ?

ಲಾಭದಾಯಕತೆಗೆ ಪ್ರಾಶಸ್ತ್ಯ?

ಸ್ಪರ್ಧೆ ಮತ್ತು ಬೇಡಿಕೆ-ಪೂರೈಕೆಗಳ ನೀತಿಯ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ಬಹುತೇಕ ಕಂಪೆನಿಗಳಿಗೆ ಲಾಭದಾಯಕತೆಯೇ ಪ್ರಾಮುಖ್ಯವಾಗುವ ಇಂದಿನ ಯುಗದಲ್ಲಿ, ವೆಚ್ಚದ ಕಡಿತಕ್ಕೆ ಒತ್ತು ನೀಡುವುದು ಸರ್ವೇ ಸಾಮಾನ್ಯ. ಈ ಧೋರಣೆಗೆ ಗುರಿಯಾಗುವ ಚಟುವಟಿಕೆಗಳು ಮುಖ್ಯವಾಗಿ ಕಾಲಕಾಲಕ್ಕೆ ಬೇಕಾದ ನಿರ್ವಹಣೆ, ಕಾರ್ಮಿಕರ ರಕ್ಷಣೆಗೆ ಅಗತ್ಯವಾದ ಸಾಧನಗಳು ಮತ್ತು ವಿಧಾನಗಳ ಅಳವಡಿಕೆ ಹಾಗೂ ಸುರಕ್ಷತೆಯ ಕುರಿತು ಗುಣಮಟ್ಟದ ತರಬೇತಿ. ಈ ಪ್ರಕ್ರಿಯೆಗಳ ಅಸಮರ್ಪಕತೆಯೇ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅನೇಕ ದುರಂತಗಳಿಗೆ ಕಾರಣವಾಗಿವೆ. 1984ರ ಭೋಪಾಲ್ನ ದುರಂತವೂ ಸುರಕ್ಷಾ ನಿರ್ವಹಣೆಯ ವೈಫಲ್ಯದಿಂದ ಸಂಭವಿಸಿತ್ತು.

ಕಲಿಯಬೇಕಾದ ಪಾಠಗಳು

ಭೋಪಾಲ್ ದುರಂತದ ಬಳಿಕ ಕಾರ್ಖಾನೆಯ ಪರಿಸರ, ಸ್ಥಾವರ ಮತ್ತು ದುಡಿಯುತ್ತಿರುವ ಕಾರ್ಮಿಕರ ಸುರಕ್ಷತೆಯ ಬಗ್ಗೆ ಅನೇಕ ನಿಯಮಗಳನ್ನು ಕೇಂದ್ರ ಸರಕಾರವು ರೂಪಿಸಿದೆ. 2009ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ನೀತಿಯು (National Policy on Disaster Management 2009) ಈ ಬೆಳವಣಿಗೆಯ ಒಂದು ಪ್ರಮುಖ ಮೈಲುಗಲ್ಲು. ಈ ನೀತಿಯಲ್ಲಿಯೇ ಮುಂಜಾಗರೂಕತೆಯ ಕ್ರಮಗಳ ಕುರಿತು ಒತ್ತು ನೀಡಲಾಗಿದೆ. ಆದರೆ ಇವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾವುದೇ ಸರಕಾರಕ್ಕೂ ಬದ್ಧತೆ ಇದ್ದಂತೆ ಕಾಣುವುದಿಲ್ಲ.

ಎರಡು ಉದಾಹರಣೆಗಳು ಇಲ್ಲಿ ಅಗತ್ಯವಾಗುತ್ತವೆ. ಒಂದು, ಪ್ರತಿಯೊಂದು ಜನವಸತಿ ಇರುವ ಪ್ರದೇಶದಲ್ಲಿ ಸ್ಥಾಪಿಸಿದ ರಾಸಾಯನಿಕ ಉತ್ಪನ್ನಗಳ ಕಾರ್ಖಾನೆಯಲ್ಲಿ ಮುಂಜಾಗರೂಕತೆಯ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಘಟಕವು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು. ಎರಡು, ಪರಿಸರ ಸಂರಕ್ಷಣೆಯ ಜವಾಬ್ದಾರಿಯುಳ್ಳ ಮಾಲಿನ್ಯ ಮಂಡಳಿಗಳು ಸ್ಥಾವರದ ಪರಿಸರದ ನೀರು ಮತ್ತು ಗಾಳಿಗಳು ಸುರಕ್ಷಿತವಾಗಿವೆಯೇ ಎಂದು ಪರಿಶೀಲಿಸಬೇಕು. ಈ ಪ್ರಕ್ರಿಯೆಗಳು ನಿರಂತರವಾಗಿ ಆಗುತ್ತಿವೆಯೇ?

ಉದ್ಯಮದ ಪ್ರವರ್ತಕರಲ್ಲಿ, ಅಲ್ಲಿ ದುಡಿಯುವ ಉದ್ಯೋಗಿಗಳಲ್ಲಿ, ಸರಕಾರದ ಅಂಗಸಂಸ್ಥೆಗಳಲ್ಲಿ ಮತ್ತು ರಾಜಕೀಯ ನಾಯಕರಲ್ಲಿ ಕೈಗಾರಿಕಾ ಸ್ಥಾವರ ಮತ್ತು ಅಲ್ಲಿನ ಕಾರ್ಮಿಕರ ಸುರಕ್ಷತೆಯ ಕುರಿತಾದ ಬದ್ಧತೆ ಇದ್ದರೆ ಮಾತ್ರ ಅಪಘಾತಗಳಿಂದ ಪಾಠಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಅದಿಲ್ಲವಾದಾಗ, ದುರಂತದ ಸುದ್ದಿ ಕಾಲದ ಗರ್ಭಕ್ಕೆ ಸೇರಿ ನೆನಪಿನಿಂದ ಮಾಯವಾಗುತ್ತದೆ; ಅಪಘಾತಕ್ಕೆ ಈಡಾದವರ ರೋದನವೂ ಅರಣ್ಯರೋದನವೇ ಆಗಿ ಉಳಿಯುತ್ತದೆ; ಇನ್ನೊಂದು ದುರಂತವಾದಾಗ ಮತ್ತೆ ಸದ್ದು ಕೇಳುತ್ತದೆ.

share
ಟಿ.ಆರ್. ಭಟ್
ಟಿ.ಆರ್. ಭಟ್
Next Story
X