Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಪ್ರತಿಕೂಲ ಪರಿಸ್ಥಿತಿಯಲ್ಲಿ ಆರೋಗ್ಯಪೂರ್ಣ...

ಪ್ರತಿಕೂಲ ಪರಿಸ್ಥಿತಿಯಲ್ಲಿ ಆರೋಗ್ಯಪೂರ್ಣ ಬದುಕಿನ ಕನಸು

ಹರೀಶ್ ಕುಮಾರ್ ಕುಡ್ತಡ್ಕಹರೀಶ್ ಕುಮಾರ್ ಕುಡ್ತಡ್ಕ27 July 2025 1:40 PM IST
share
ಪ್ರತಿಕೂಲ ಪರಿಸ್ಥಿತಿಯಲ್ಲಿ ಆರೋಗ್ಯಪೂರ್ಣ ಬದುಕಿನ ಕನಸು

ಇಂದು ಭಾರತೀಯರ ಸರಾಸರಿ ಜೀವಿತಾವಧಿ 70 ವರ್ಷಗಳು. ದೇಶಕ್ಕೆ ಸ್ವಾತಂತ್ರ್ಯ ಬಂದ 1947ರಲ್ಲಿ 32ರಲ್ಲಿದ್ದ ಜೀವಿತಾವಧಿ ಈ ಮಟ್ಟಕ್ಕೆ ಏರಿಕೆಯಾಗಿರುವುದು ಸಂತೋಷ ಪಡುವಂತಹ ವಿಷಯವೇ. ಇದನ್ನು ಗಮನಿಸಿದರೆ ಆರೋಗ್ಯ ಕ್ಷೇತ್ರದಲ್ಲಿ ದೇಶ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ ಎನ್ನಬಹುದು. ಪರಿಣಾಮವಾಗಿ ಅಕಾಲಿಕ ಸಾವಿನ ಪ್ರಮಾಣ ಗಮನಾರ್ಹವಾಗಿ ತಗ್ಗಿದೆ ಹಾಗೂ ಜನರು ಹೆಚ್ಚು ವರ್ಷಗಳ ವರೆಗೆ ಜೀವಿಸಲು ಸಾಧ್ಯವಾಗಿದೆ. ಇಷ್ಟರಿಂದಲೇ ನಾವು ತೃಪ್ತರಾಗಲು ಸಾಧ್ಯವಿಲ್ಲ. ಯಾಕೆಂದರೆ ಈ ಸಂಖ್ಯೆ ದೇಶವಾಸಿಗಳ ಆರೋಗ್ಯಕರ ಜೀವಿತಾವಧಿಯನ್ನು ಸೂಚಿಸುವುದಿಲ್ಲ.

ದೇಶದಲ್ಲಿ ಇಂದಿಗೂ ಬಹು ದೊಡ್ಡ ಸಂಖ್ಯೆಯ ಜನರು ಪರಿಸರ ಸಂಬಂಧಿ ಮತ್ತು ಅನಾರೋಗ್ಯಕಾರಿ ಆಹಾರಗಳ ಅಡ್ಡ ಪರಿಣಾಮಗಳಿಂದ ಬಳಲುತ್ತಿದ್ದಾರೆ. ಇದರೊಂದಿಗೆ ಅಪೌಷ್ಟಿಕತೆಯ ಕೊರತೆಯಿಂದ ಬಳಲುತ್ತಿರುವ ಬಡ ವರ್ಗ ಸಮಸ್ಯೆಯ ಒಂದು ದಡದಲ್ಲಿದ್ದರೆ ಅತಿ ಪೌಷ್ಟಿಕತೆಯ ಅಡ್ಡ ಪರಿಣಾಮದಿಂದ ಏಗುತ್ತಿರುವ ಶ್ರೀಮಂತ ವರ್ಗ ಇನ್ನೊಂದು ದಡದಲ್ಲಿದೆ. ಇವರೆಲ್ಲ ವೈದ್ಯಕೀಯ ಸಲಹೆ, ಔಷಧ-ಸೌಲಭ್ಯಗಳ ಅವಲಂಬನೆಯಿಂದ ಜೀವಿಸುತ್ತಿದ್ದಾರೆ ಅಷ್ಟೇ. ಅವರ ಪಾಲಿಗೆ ಆರೋಗ್ಯಕರ ಬದುಕು ಈಡೇರದ ಕನಸು. ನಾವು ಈ ಕಹಿ ಸತ್ಯಕ್ಕೆ ಕುರುಡಾಗುವಂತಿಲ್ಲ. ಆದ್ದರಿಂದ ಆರೋಗ್ಯಪೂರ್ಣವಾದ ಜೀವನದ ಕನಸು ಲಭ್ಯವಾಗುವವರೆಗೆ ಜೀವಿತಾವಧಿಯ ಹೆಚ್ಚಳಕ್ಕೆ ನಿಜಾರ್ಥದ ಮಹತ್ವ ಪ್ರಾಪ್ತವಾಗಲಾರದು.

ಜನರಲ್ಲಿ ಇಂದು ಆರೋಗ್ಯ ಪ್ರಜ್ಞೆ ಹೆಚ್ಚಾಗುತ್ತಿದೆ. ಈಗ ನಾಲ್ಕೈದು ಮಂದಿ ಒಟ್ಟು ಸೇರಿದಾಗ ಚರ್ಚಿಸುವ ವಿಷಯಗಳಲ್ಲಿ ಆರೋಗ್ಯ ಸಂಬಂಧಿತ ವಿಚಾರಗಳೂ ಒಳಗೊಳ್ಳುವುದನ್ನು ನಾವು ಕಾಣುತ್ತೇವೆ. ಮಾಧ್ಯಮಗಳು ಆರೋಗ್ಯಕ್ಕೆ ಸಂಬಂಧ ಪಟ್ಟಂತಹ ಮಾಹಿತಿಗೆ ಪ್ರಾಮುಖ್ಯತೆ ನೀಡುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ತಜ್ಞ ವ್ಯೆದ್ಯರ ಸಂದರ್ಶನಗಳು ಮತ್ತು ಆರೋಗ್ಯ ಮಾಹಿತಿ, ಸಲಹೆಗಳನ್ನೊಳಗೊಂಡ ವೀಡಿಯೊ ಸರಣಿಗಳು ಜನಪ್ರಿಯವಾಗುತ್ತಿವೆ. ಇವುಗಳನ್ನು ಜನರು ಆಸಕ್ತಿಯಿಂದ ನೋಡುತ್ತಿದ್ದಾರೆ ಇನ್ನು ಗೂಗಲ್ ಅಂತೂ ಆರೋಗ್ಯ ಟಿಪ್ಸ್ ಮತ್ತು ಕಾಯಿಲೆ ವಿವರಗಳ ಮಹಾಪೂರವನ್ನೇ ಬೆರಳ ತುದಿಯಲ್ಲಿ ಕಣ್ಣ ಮುಂದೆ ತಂದು ನಿಲ್ಲಿಸುತ್ತದೆ. ಇದು ಆಶಾದಾಯಕ ಬೆಳವಣಿಗೆ.

ದೇಶದಲ್ಲಿ ಆರೋಗ್ಯ ಸೇವೆಗಳು, ಸೌಲಭ್ಯಗಳು ಸಮಗ್ರವಾಗಿ ಸುಧಾರಣೆ ಕಂಡಿವೆ. ವ್ಯೆದ್ಯರ ಸಂಖ್ಯೆ ಮೊದಲಿಗಿಂತ ಗಣನೀಯವಾಗಿ ಏರಿಕೆ ಕಂಡಿದೆ. ಪಟ್ಟಣ, ನಗರ ಪ್ರದೇಶಗಳಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿರುವುದು ಎದ್ದು ಕಾಣುವಂತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಸರಕಾರವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆರೋಗ್ಯ ಸೇವೆಯನ್ನು ಜನರ ಮನೆ ಬಾಗಿಲಿಗೆ ತರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವುದನ್ನು ಗಮನಿಸ ಬಹುದಾಗಿದೆ. ಸರಕಾರಿ ಆಸ್ಪತ್ರೆಗಳೂ ಮೊದಲಿಗಿಂತ ಸಾಕಷ್ಟು ಸುಧಾರಣೆ ಕಂಡಿವೆ. ವ್ಯೆದ್ಯರ ಸೇವೆ, ಉಚಿತ ಔಷಧ, ಜೆನರಿಕ್ ಔಷಧಗಳು ಬಡ ವರ್ಗದವರಿಗೆ ವರದಾನವಾಗುತ್ತಿವೆ. ಹೀಗಾಗಿ ಬಹುತೇಕ ಕಾಯಿಲೆಗಳನ್ನು ಸಂಪೂರ್ಣವಾಗಿ ನಿವಾರಿಸುವಂತಹ ವ್ಯವಸ್ಥೆ ಕೈಗೂಡಿದೆ. ಇನ್ನು ವಾಸಿಯಾಗದ ಕಾಯಿಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಬದುಕುವಂತಹ ವಾತಾವರಣವೂ ನಿರ್ಮಾಣವಾಗಿದೆ.

ಹೀಗಿದ್ದೂ ನಾವೇ ಸೃಷ್ಟಿಸಿ ಕೊಂಡಿರುವ ಸಮಸ್ಯೆಗಳು ಇಂದು ನಮ್ಮದೇ ಕುತ್ತಿಗೆಗೆ ಬಂದಂತಿವೆ. ಇದನ್ನು ನಮ್ಮ ದುರಂತವೆಂದೇ ಹೇಳಬೇಕು. ಎಲ್ಲರಿಗೂ ಗೊತ್ತಿರುವಂತೆ ಸದೃಢ ಆರೋಗ್ಯಕ್ಕಾಗಿ ಸ್ವಚ್ಛ ಪರಿಸರವೆಂಬುದು ಮೂಲಭೂತ ಅವಶ್ಯಕತೆ. ಆದರೆ ನಾವು ಆರೋಗ್ಯಕ್ಕೆ ಪೂರಕವಲ್ಲದ ಪರಿಸರದಲ್ಲಿ ಉತ್ತಮ ಆರೋಗ್ಯಕ್ಕಾಗಿ ಹೆಣಗಾಡ ಬೇಕಾಗಿ ಬಂದಿದೆ. ದೇಶದಲ್ಲಿ ಮಲೆನಾಡು, ಕಾಡುಗಳ ಸೆರಗನ್ನು ಹೊರತು ಪಡಿಸಿ ಉಳಿದೆಡೆ ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದೆ. ಇದರ ಪರಿಣಾಮವಾಗಿ ಗಂಭೀರ ಕಾಯಿಲೆಗಳಿಗೆ ಜನರು ನಿರಂತರವಾಗಿ ತುತ್ತಾಗುತ್ತಲೇ ಇದ್ದಾರೆ. ವಾಯು ಮಾಲಿನ್ಯದಿಂದ ನಗರ ವಾಸಿಗಳು ಉಸಿರಾಟದ ಸಮಸ್ಯೆ, ಅಸ್ತಮಾದಂತಹ ಕಾಯಿಲೆಗಳಿಂದ ನಿರಂತರ ಬಳಲುವಂತಾಗಿದೆ. ದಿಲ್ಲಿ ಜನತೆ ಅನುಭವಿಸುತ್ತಿರುವ ಈ ಆರೋಗ್ಯ ಸಮಸ್ಯೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಶುದ್ಧ ಕುಡಿಯವ ನೀರು ಲಭ್ಯವಾಗದೆ ಜನರು ಅನೇಕ ಕಾಯಿಲೆಗಳಿಂದ ಬಳಲುತ್ತಿರುವ ವಿಷಯ ಬೆಳಕಿಗೆ ಬರುವುದು ಕಡಿಮೆ. ಕಲುಷಿತ ನೀರು ಸೇವನೆಯಿಂದ ಅತಿಸಾರ-ಭೇದಿ, ಹೊಟ್ಟೆ ನೋವುಗಳಂತಹ ಕಾಯಿಲೆಗಳು ವ್ಯಾಪಕವಾಗಿ ಹರಡಿದಾಗ ಕೆಲವೊಮ್ಮೆ ಸುದ್ದಿಯಾಗುವುದಿದೆ. ಮುಖ್ಯವಾಗಿ ವಾಯು ಮತ್ತು ಜಲಮಾಲಿನ್ಯಗಳು ಯಾವೆಲ್ಲ ದೀರ್ಘಕಾಲೀನ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ. ಸರಕಾರ ಕೈಗಾರಿಕೆ, ವಾಣಿಜ್ಯ ವ್ಯವಹಾರ ಅಭಿವೃದ್ಧಿಗಳ ಗುಂಗಿನಲ್ಲಿ ಮೈಮರೆತಂತಿದೆ. ನಾಗರಿಕರು ಈ ವಿಚಾರದಲ್ಲಿ ಏನನ್ನೂ ಮಾಡಲಾಗದೆ ಅಸಹಾಯಕರಾಗಿ ನಿಲ್ಲಬೇಕಾಗಿದೆ.

ನಾವು ಸೇವಿಸುವ ಆಹಾರದ ವಿಚಾರಕ್ಕೆ ಬಂದರೆ ಅಲ್ಲೂ ನಿರಾಶಾದಾಯಕ ಪರಿಸ್ಥಿತಿ ಇದೆ. ಇಂದಿನ ದಿನಗಳಲ್ಲಿ ಉತ್ತಮ ಆರೋಗ್ಯಕ್ಕಾಗಿ ಸಾವಯವ ಕೃಷಿ ಆಧಾರಿತ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳ ಬಳಕೆಯನ್ನು ಬಲವಾಗಿ ಪ್ರತಿಪಾದಿಸಲಾಗುತ್ತಿದೆ. ಹೌದು, ಇದು ಎಲ್ಲರೂ ಒಪ್ಪಲೇ ಬೇಕಾದ ಅಭಿಪ್ರಾಯವೇ. ವಾಸ್ತವದಲ್ಲಿ ಸೀಮಿತ ಪ್ರಮಾಣದ ಸಾವಯವ ಆಹಾರಗಳು ಅಪರೂಪದ ಅತಿಥಿಗಳಾಗಿ ಅಡುಗೆ ಮನೆ ಪ್ರವೇಶ ಪಡೆಯಬಹುದೇ ಹೊರತು ಖಾಯಂ ಆಗಿ ಮನೆ ಬಳಗದ ಆಹಾರವಾಗಿ ನೆಲೆಯೂರಲು ಸಾಧ್ಯವಾಗದು. ಯಾಕೆಂದರೆ ದೇಶದ 140 ಕೋಟಿಗೂ ಮಿಕ್ಕಿದ ಜನರ ಅಗತ್ಯವನ್ನು ಪೂರೈಸುವ ಸಾವಯವ ಕೃಷಿ ಪದ್ಧತಿಯನ್ನು ಹೇಗೆ ಸಾಕಾರ ಗೊಳಿಸುವುದೆಂದು ತಜ್ಞರೇ ತಿಳಿಸಬೇಕು. ಸದ್ಯಕ್ಕೆ ಈ ಸಾಧ್ಯತೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಈ ವಿಚಾರದಲ್ಲಿ ನಾವು ಹಿಂದಿರುಗಿ ಹೋಗಲಾರದಷ್ಟು ಮುಂದೆ ಸಾಗಿ ಬಂದಿದ್ದೇವೆ. ಹಸಿರು ಕ್ರಾಂತಿಯ ಬಳಿಕ ಕೃಷಿಯಲ್ಲಿ ರಸ ಗೊಬ್ಬರದ ಬಳಕೆ ಮತ್ತು ಹುಳ, ಕೀಟಗಳ ಬಾಧೆಗೆ ರಾಸಾಯನಿಕ ಸಿಂಪರಣೆ ಅನಿವಾರ್ಯವೆಂಬತಾಗಿದೆ. ಈ ಕುರಿತು ಹೆಸರಾಂತ ಸಂಶೋಧಕಿ ಮತ್ತು ಮಾನವತಾವಾದಿ ಜೇನ್ಗುಡ್ ಆಲ್ರವರ ಮಾತು ಕಣ್ಣು ತೆರೆಸುವಂತಿದೆ. ಅವರು, ‘‘ನಮ್ಮ ಆಹಾರವನ್ನು ವಿಷ ಬಳಸಿ ಬೆಳೆಯಬಹುದೆಂದು ನಾವು ಯೋಚನೆ ಮಾಡಿದ್ದಾದರೂ ಹೇಗೆ?’’ ಎಂಬ ಕಾಳಜಿಯ ಪ್ರಶ್ನೆ ಎತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಆಹಾರ ತಜ್ಞರು, ವೈದ್ಯರ ಸಲಹೆಯಂತೆ ಆರೋಗ್ಯಕ್ಕಾಗಿ ಊಟದಲ್ಲಿ ಹೆಚ್ಚು ತರಕಾರಿ, ಸೊಪ್ಪು ಇತ್ಯಾದಿಗಳನ್ನು ಬಳಸಿ ಪ್ರಯೋಜನ ಪಡೆಯಲು ಸಾಧ್ಯವೇ? ಇಂದು ಮೀನು, ಮೊಟ್ಟೆ, ಮಾಂಸಗಳ ಬಳಕೆಯಲ್ಲಿಯೂ ಅಡ್ಡ ಪರಿಣಾಮದ ಭಯ ಜನರನ್ನು ಕಾಡುವಂತಾಗಿದೆ. ತೈಲ ಕಂಪೆನಿ, ರಾಸಾಯನಿಕ ಕಂಪೆನಿ, ಉಷ್ಣ ಸ್ಥಾವರ, ಕೈಗಾರಿಕೆಗಳು ವಿಷಕಾರಿ ತ್ಯಾಜ್ಯಗಳನ್ನು ನದಿ, ಸಮುದ್ರಗಳಿಗೆ ಬಿಡುತ್ತಿರುವುದರಿಂದ ಮೀನುಗಳ ಪ್ರಮಾಣ ಮತ್ತು ಮೊದಲಿನ ರುಚಿ ಕಣ್ಮರೆಯಾಗಿದೆಯೆಂಬ ಅಭಿಪ್ರಾಯ ವ್ಯಾಪಕವಾಗಿದೆ. ಹೀಗಾಗಿ ಮೀನುಗಳನ್ನು ಆರೋಗ್ಯಕ್ಕೆ ಪೂರಕವೆಂಬ ದೃಢ ವಿಶ್ವಾಸದಿಂದ ಬಳಸುವ ದಿನಗಳು ಈಗಿಲ್ಲ ಎನ್ನಬೇಕಾಗಿದೆ. ಇನ್ನು ಫಾರಂ ಕೋಳಿಗಳನ್ನು ಚುಚ್ಚು ಮದ್ದುಗಳ ಸಹಾಯದಿಂದ ಕೃತಕ ವಿಧಾನದಲ್ಲಿ ಬೆಳೆಸುವುದರಿಂದ ಅವುಗಳ ಉಪಯುಕ್ತತೆ ಬಗ್ಗೆ ಸಂದೇಹವಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಈ ಮೀನು, ಮಾಂಸಗಳ ಸೇವನೆಯಿಂದ ಹೆಚ್ಚಿನ ಪ್ರಯೋಜನವಾಗದಿದ್ದರೂ ಅಡ್ಡ ಪರಿಣಾಮಗಳಾಗದಿದ್ದರೆ ಸಾಕೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸರಕಾರ ಮಾತ್ರ ಈ ಕುರಿತು ಅಧ್ಯಯನ, ಪರಿಶೀಲನೆ ಮುಂತಾದುವುಗಳನ್ನು ನಡೆಸುವ ಗೋಜಿಗೆ ಹೋಗದೆ ಅಭಿವೃದ್ಧಿ ಮಂತ್ರವನ್ನು ಪಠಿಸುತ್ತಲೇ ಇದೆ!

ನೈಸರ್ಗಿಕ ಆಹಾರಗಳ ಪರಿಸ್ಥಿತಿ ಈ ರೀತಿಯಾಗಿದ್ದರೆ ನಾವೇ ವ್ಯಾವಹಾರಿಕ ದೃಷ್ಟಿಯಿಂದ ಸೃಷ್ಟಿಸಿರುವ ಕೃತಕ, ಸಿದ್ಧ ಆಹಾರಗಳ ಲೋಕ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಸಿದ್ಧ ಆಹಾರಗಳು ಯುವಜನಾಂಗದ ಪಾಲಿಗೆ ಅತ್ಯಂತ ಅಚ್ಚುಮೆಚ್ಚಿನದ್ದಾಗಿವೆ. ಬೇಕರಿ, ಪಿಝ್ಝಾ ಕಾರ್ನರ್, ಐಸ್ಕ್ರೀಮ್ ಪಾರ್ಲರ್ ಮುಂತಾದುವುಗಳು ಯುವಜನರನ್ನು ಇನ್ನಿಲ್ಲದಂತೆ ಮರುಳುಗೊಳಿಸಿವೆ. ಇಂತಹ ಜಂಕ್ಫುಡ್ ಅತ್ಯಂತ ಅಪಾಯಕಾರಿ ಎಂದು ಎಷ್ಟೇ ಎಚ್ಚರಿಸಿದರೂ ಹೆಚ್ಚಿನ ಯುವಜನರಿಗೆ ಇವೇ ಫೇವರಿಟ್ ಉಪ ಆಹಾರ! ಇಂತಹ ತಿಂಡಿ ತಿನಿಸುಗಳಿಗೆ ಸಾಕಷ್ಟು ಮಂದಿ ಹಿರಿಯರು ಸಹ ಬಲಿ ಬೀಳತೊಡಗಿದ್ದಾರೆ. ಇದು ಅವರ ಆರೋಗ್ಯದಲ್ಲಿ ಏರುಪೇರು ಉಂಟು ಮಾಡಿದರೂ ಅದರ ಆಕರ್ಷಣೆ ಕಡಿಮೆಯಾಗದಿರುವುದು ಖೇದಕರ ವಿಚಾರ. ಇಲ್ಲಿ ಒಂದು ಉದಾಹರಣೆಯನ್ನು ಉಲ್ಲೇಖಿಸಬಹುದು. ದಶಕಗಳ ಹಿಂದೆ ಒಂದು ಊರಿನಲ್ಲಿ ಒಂದೋ ಎರಡೋ ಬೇಕರಿ ಮತ್ತು ಮೆಡಿಕಲ್ ಶಾಪ್ಗಳು ಇರುತ್ತಿದ್ದವು. ಕಾಲಾಂತರದಲ್ಲಿ ಇವೆರಡೂ ಪರಸ್ಪರ ಸ್ಪರ್ಧಾತ್ಮಕವೋ ಎಂಬಂತೆ ಹೆಚ್ಚಾಗುತ್ತಲೇ ಹೋದವು. ಇದು ಅಂತರ್ಸಂಬಂಧಿಯ ಬೆಳವಣಿಗೆಗೆ ದೃಷ್ಟಾಂತವೇ? ಆರೋಗ್ಯ ಮತ್ತು ಅನಾರೋಗ್ಯಕಾರಿ ಆಹಾರ ಸೇವನೆ ಪರಿಣಾಮದ ಫಲಿತಾಂಶವೇ?

ಒಟ್ಟಿನಲ್ಲಿ ಸದ್ಯ ನಮ್ಮದೇನಿದ್ದರೂ ಕಲುಷಿತ ಪರಿಸರ ಮತ್ತು ಆರೋಗ್ಯಕ್ಕೆ ಪೂರಕವಲ್ಲದ ಆಹಾರಗಳೊಂದಿಗಿನ ಹೊಂದಾಣಿಕೆಯ ಬದುಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯಯುತ ಜೀವನದ ಕನಸು ನನಸಾಗುವುದೆಂತು?

share
ಹರೀಶ್ ಕುಮಾರ್ ಕುಡ್ತಡ್ಕ
ಹರೀಶ್ ಕುಮಾರ್ ಕುಡ್ತಡ್ಕ
Next Story
X