ಅಪರೂಪದ ಲೇಖಕ ಮತ್ತು ಹೋರಾಟಗಾರ ಅನಿಲ ಹೊಸಮನಿ

ಹೋರಾಟಗಾರರ ಮಕ್ಕಳು ತಮ್ಮ ತಂದೆಯ ದಾರಿಯಲ್ಲಿ ಸಾಗುವ ಹೋರಾಟಗಾರರಾಗುವುದು ತುಂಬಾ ಅಪರೂಪ. ಎಲ್ಲೋ ಲಕ್ಷಕ್ಕೊಬ್ಬರು ಅಂಥವರು ಸಿಗಬಹುದು. ಬಿಜಾಪುರದ ಅನಿಲ ಹೊಸಮನಿ ಇಂಥ ಅಪರೂಪದ ವ್ಯಕ್ತಿ. ಇವರ ತಂದೆ ಖ್ಯಾತ ಅಂಬೇಡ್ಕರ್ವಾದಿಯಾಗಿದ್ದ ಚಂದ್ರಶೇಖರ ಹೊಸಮನಿ ಅವರು. ಗಾಂಧಿವಾದಿಯಾಗಿದ್ದ ಕಾಕಾ ಕಾರ್ಖಾನಿಸರ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು. ನಾನು ಎಪ್ಪತ್ತರ ದಶಕದ ಆರಂಭದ ದಿನಗಳಲ್ಲಿ ಬಿಜಾಪುರದಲ್ಲಿದ್ದಾಗ ಅವರ ಒಡನಾಟದ ಸವಿ ಉಂಡವನು. ಚಂದ್ರಶೇಖರ ಹೊಸಮನಿ ಬರೀ ಹೋರಾಟಗಾರರಾಗಿರಲ್ಲಿಲ್ಲ. ಅವರು ಅತ್ಯಂತ ಪ್ರಭಾವಿ ಲೇಖಕ, ಪತ್ರಕರ್ತ ಹೀಗೆ ಎಲ್ಲವೂ ಆಗಿದ್ದರು. ಇವೆಲ್ಲವುಗಳಿಗಿಂತ ಕೈ, ಬಾಯಿಯನ್ನು ಕೆಡಿಸಿಕೊಳ್ಳದ ಅಪರೂಪದ ಜೀವ. ಕಟ್ಟಾ ಪ್ರಾಮಾಣಿಕ. ಹಣ ಗಳಿಸಲಿಲ್ಲ. ಜನರನ್ನು ಗಳಿಸಿದರು. 1975ರಲ್ಲಿ ನಾನು ನನ್ನ ಜಿಲ್ಲೆ ಬಿಜಾಪುರವನ್ನು ಬಿಟ್ಟು ‘ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸ ಮಾಡಲು ಹುಬ್ಬಳ್ಳಿಯನ್ನು ಸೇರಿದೆ. ನಂತರ ಬೆಂಗಳೂರಿಗೆ ಬಂದೆ. ಹೀಗೆ ಜನ್ಮಭೂಮಿಯನ್ನು ಬಿಟ್ಟು ದೂರವಾದ ನಂತರ ಬಿಜಾಪುರದ ಒಡನಾಟವೂ ವಿರಳವಾಯಿತು. ಹೀಗೆ ದೂರವಾದ ನನ್ನನ್ನು ಮತ್ತೆ ಬಿಜಾಪುರಕ್ಕೆ ಕರೆ ತಂದವರು ಚಂದ್ರಶೇಖರ ಹೊಸಮನಿಯವರ ಪುತ್ರ ಅನಿಲ ಹೊಸಮನಿಯವರು. ‘ವಾರ್ತಾಭಾರತಿ’ಯಲ್ಲಿ ಆಗಾಗ ಬರೆಯುತ್ತಿದ್ದ ಅನಿಲ ಹೊಸಮನಿಯವರ ಹೆಸರು ಕೇಳಿದ್ದೆ ಪರಿಚಯವಿರಲಿಲ್ಲ. ಒಮ್ಮೆ ಮೈಸೂರಿನಲ್ಲಿ ನಡೆದ ದಲಿತ ಸಂಘರ್ಷ ಅಧ್ಯಯನ ಶಿಬಿರದಲ್ಲಿ ಅನಿಲ ಅವರ ಪುತ್ರ ಸಂಘರ್ಷನ ಪರಿಚಯವಾಗಿ ನನಗೆ ಅನಿಲ ಹೊಸಮನಿಯವರ ಒಡನಾಟದ ಭಾಗ್ಯ ಲಭಿಸಿತು. ನನ್ನನ್ನು ಅನಿಲ ಅವರು ಅವರ ‘ಬಹುಜನ ನಾಯಕ’ ಪತ್ರಿಕೆಯ ವಾರ್ಷಿಕೋತ್ಸವಕ್ಕೆ ಆಹ್ವಾನಿಸಿದರು. ಬೆಂಗಳೂರಿನಿಂದ ಬಿಜಾಪುರಕ್ಕೆ ಹೋದೆ. ಹೀಗೆ ಬಹುತೇಕ ಕಡಿದು ಹೋಗಿದ್ದ ಬಿಜಾಪುರದ ನಂಟು ಮತ್ತೆ ಪುನಶ್ಚೇತನ ಪಡೆಯಿತು. ಅವರ ಮನೆಗೂ ಕರೆದುಕೊಂಡು ಹೋದರು. ಅವರ ಇಡೀ ಕುಟುಂಬ ಅಂಬೇಡ್ಕರ್ವಾದಿ ಕುಟುಂಬ. ಅದಕ್ಕಿಂತ ಮುಖ್ಯವಾಗಿ ಎಲ್ಲರನ್ನೂ ಒಡಹುಟ್ಟಿದವರಂತೆ ಕಾಣುವ, ಪ್ರೀತಿಸುವ, ಆತಿಥ್ಯ ನೀಡುವ ಅಂತಃಕರಣದ ಕುಟುಂಬ ಅವರದು. ಇದರ ಅನುಭವ ನನಗೆ ಆಗಿದೆ.
ನಾನು ನನ್ನ ಬದುಕಿನ ಆರಂಭದ ಇಪ್ಪತ್ತು ವರ್ಷಗಳನ್ನು ಆ ಬಿಜಾಪುರ ಜಿಲ್ಲೆಯಲ್ಲಿ ಕಳೆದೆ. ಆನಂತರದ ಉಳಿದ ಐದು ದಶಕಗಳನ್ನು ಹುಬ್ಬಳ್ಳಿ, ಬೆಂಗಳೂರುಗಳಲ್ಲಿ ಹಂಚಿಕೊಂಡಿದ್ದರೂ ನನ್ನ ನೆನಪಿನ ಅಂಗಳದಲ್ಲಿ ಬಿಜಾಪುರ ಇಂದಿಗೂ ಹಸಿರಾಗಿ ಉಳಿದುಕೊಂಡಿದೆ. ಇಡೀ ವ್ಯಕ್ತಿತ್ವದ ಅಡಿಪಾಯ ಅಲ್ಲಿಯೇ ರೂಪುಗೊಂಡಿದ್ದರಿಂದ ಯಾಕೋ ಏನೋ ಆ ನೆಲವನ್ನು, ಇಂಥ ಬಿಜಾಪುರ ಜಿಲ್ಲೆಯಲ್ಲಿ ಕಳೆದ ಬಾಲ್ಯದ, ಯೌವನದ ದಿನಗಳ ನೆನಪುಗಳನ್ನು ಮರೆಯಲು ಆಗುತ್ತಿಲ್ಲ. ಬಿಜಾಪುರದ ಜನತಾ ಬಜಾರದ ಅಟ್ಟದ ಮೆಟ್ಟಿಲುಗಳ ಮೇಲೆ ಇದ್ದ ಲಿಂಗಪ್ಪ ಲಾಯದಗುಂದಿ ಅವರ ಸಿಪಿಐ ಕಚೇರಿಯಲ್ಲಿ ಆಗ ನಾವೆಲ್ಲ ಅಂದರೆ ಎಲ್ಲ ಪ್ರಗತಿಪರ ಸಂಘಟನೆಗಳ ಮಿತ್ರರು ಸೇರುತ್ತಿದ್ದೆವು. ಆಗ ಬರೀ ಕಾರ್ಲ್ ಮಾರ್ಕ್ಸ್ ನನ್ನು ತಲೆಯಲ್ಲಿ ತುಂಬಿಕೊಂಡ ನಮಗೆ ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಪರಿಚಯಿಸಿದವರು ಸೇನೆಯಿಂದ ನಿವೃತ್ತರಾಗಿ ಬಂದು ರಿಪಬ್ಲಿಕನ್ ಪಾರ್ಟಿ ಸಂಘಟಿಸುತ್ತಿದ್ದ ಮೂಕಿಹಾಳ ಮತ್ತು ಆ ಕಾಲದಲ್ಲಿ ‘ಪರಿವರ್ತಕ’ ಎಂಬ ಪತ್ರಿಕೆ ತರುತ್ತಿದ್ದ ಅಂಬೇಡ್ಕರ್ವಾದಿ ಲೇಖಕ ಚಂದ್ರಶೇಖರ ಹೊಸಮನಿ ಮತ್ತು ಲಾಯಪ್ಪ ಚಂಚಲಕರ್ ಅವರು. ಚಂದ್ರಶೇಖರ ಹೊಸಮನಿಯವರು ಸರಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಅಂಬೇಡ್ಕರವಾದಿ ಚಳವಳಿಗೆ ಮತ್ತು ಸಿದ್ಧಾಂತಕ್ಕೆ ತಮ್ಮ ಬದುಕನ್ನು ಮೀಸಲಾಗಿ ಇಟ್ಟವರು. ಅವರು ತಮಗಾಗಿ ಒಂದು ಸೂರನ್ನೂ ಮಾಡಿಕೊಳ್ಳಲು ಆಗಲಿಲ್ಲ. ಈಗ ಅವರ ಪುತ್ರ ಅನಿಲ ಹೊಸಮನಿಯವರೂ ಅತ್ಯಂತ ಪುಟ್ಟ ಮನೆಯಲ್ಲಿ ಇದ್ದಾರೆ. ಇದನ್ನು ಕಂಡ ಲಡಾಯಿ ಪ್ರಕಾಶನದ ಬಸವರಾಜ ಸೂಳೀಬಾವಿ ಮತ್ತಿತರ ಸ್ನೇಹಿತರು ಗೆಳೆಯರಿಂದ ನಿಧಿ ಸಂಗ್ರಹಿಸಿ ಅವರಿಗಾಗಿ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ. ಹಣ ಮಾತ್ರವಲ್ಲ, ಕಲ್ಲು, ಇಟ್ಟಿಗೆ, ಸಿಮೆಂಟು, ಕಟ್ಟಿಗೆ ಧಾರಾಳವಾಗಿ ಹರಿದು ಬರುತ್ತಿದೆ. ಒಬ್ಬ ಹೋರಾಟಗಾರ ಸಾಹಿತಿಗೆ ಸಮಾನ ಮನಸ್ಕರು ಸೇರಿ ಮನೆ ಕಟ್ಟಿ ಕೊಡುವ ಅಪರೂಪದ ಉದಾಹರಣೆ ಇದು. ಅನಿಲ ಹೊಸಮನಿಯವರು ಬರೀ ಹೋರಾಟಗಾರ ಮಾತ್ರವಲ್ಲ ಅವರು ಒಬ್ಬ ಪತ್ರಕರ್ತರು. ಅಷ್ಟೇ ಅಲ್ಲ ಅದ್ಭುತ ಲೇಖಕರು. ಡಾ. ಅಂಬೇಡ್ಕರ್ ಅವರ ಪತ್ನಿ ಸವಿತಾ ಅಂಬೇಡ್ಕರ್ ಅವರ ಅಪರೂಪದ ‘ಅಂಬೇಡ್ಕರ್ ಸಹವಾಸದಲ್ಲಿ’ ಪುಸ್ತಕವನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿ ಸಿದ್ದಾರೆ. ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿಯವರು ಅದನ್ನು ಬೆಳಕಿಗೆ ತಂದಿದ್ದಾರೆ. ಅದಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಸಕ್ತ ವರ್ಷದ ಪ್ರಶಸ್ತಿಯೂ ಬಂದಿದೆ
ಇಂದು (13 ಜುಲೈ) ಬಿಜಾಪುರದ ಅಂಬೇಡ್ಕರ್ ಭವನದಲ್ಲಿ ಇಡೀ ದಿನ ಅನಿಲ ಹೊಸಮನಿಯವರ ಬದುಕು, ಬರಹ ಮತ್ತು ಹೋರಾಟಗಳ ಕುರಿತ ಕಾರ್ಯಕ್ರಮ. ಇದೇ ಸಂದರ್ಭದಲ್ಲಿ ಅನಿಲ ಹೊಸಮನಿಯವರಿಗೆ ಸಮಾನ ಮನಸ್ಕ ಗೆಳೆಯರು ಕಟ್ಟಿಕೊಡಲಿರುವ ‘ಸಂವಿಧಾನ ಮನೆ’ ಎಂಬ ಮನೆಯ ಆರಂಭವೂ ಬುದ್ಧ ವಂದನೆಯೊಂದಿಗೆ ಆರಂಭವಾಗಲಿದೆ. ಇದು ಒಂದು ಆದರ್ಶ ಸಿದ್ಧಾಂತಕ್ಕಾಗಿ ಮತ್ತು ಹೋರಾಟಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡವರನ್ನು ಸಮಾಜ ಮರೆಯುವುದಿಲ್ಲ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ.