Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಸಾಗರದಲ್ಲೂ ಒಂಟಿಯಾಗಿರುವ ಮಹಿಳೆಯರು

ಜನಸಾಗರದಲ್ಲೂ ಒಂಟಿಯಾಗಿರುವ ಮಹಿಳೆಯರು

ಶಂಬೂಕಶಂಬೂಕ14 May 2025 9:59 AM IST
share
ಜನಸಾಗರದಲ್ಲೂ ಒಂಟಿಯಾಗಿರುವ ಮಹಿಳೆಯರು
ಸದೃಢರಾಗಿದ್ದಷ್ಟು ಕಾಲ ಕುಟುಂಬಕ್ಕಾಗಿ ಬೆವರಿಳಿಸಿ ಶ್ರಮಿಸುತ್ತಾ ಬದುಕಿ, ಕೊನೆಗೆ ವೃದ್ಧರಾದ ಕಾರಣಕ್ಕಾಗಿ ಎಲ್ಲರಿಗೆ ಬೇಡವಾಗಿ ಒಂಟಿಯಾಗಿ ಬಿಟ್ಟ ವಯೋವೃದ್ಧ ಮಹಿಳೆಯರ ಒಂದು ಗಣ್ಯ ವರ್ಗ ಭಾರತದ ಒಂಟಿ ಮಹಿಳೆಯರ ಸಮುದಾಯದಲ್ಲಿದೆ. ವೃದ್ಧರಿಗಾಗಿ ಸರಕಾರ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸುತ್ತಿರುತ್ತದೆ. ಆದರೆ ನೆಲಮಟ್ಟದಲ್ಲಿ ನೋಡಿದರೆ ಈ ಔಪಚಾರಿಕ ಯೋಜನೆಗಳಿಂದ ವೃದ್ಧ ಸಮೂಹಕ್ಕೆ ಯಾವುದೇ ಗಣನೀಯ ಲಾಭ ಸಿಕ್ಕಿರುವಂತೆ ಕಾಣಿಸುವುದಿಲ್ಲ. ವಿಶೇಷವಾಗಿ ನಮ್ಮ ಸಮಾಜದಲ್ಲಿ ವೃದ್ಧ ಮಹಿಳೆಯರ, ಅದರಲ್ಲೂ ವಿಧವೆಯರು ಮತ್ತು ಒಂಟಿ ಮಹಿಳೆಯರ ಸ್ಥಿತಿಗತಿಗಳು ನಿಜಕ್ಕೂ ಶೋಚನೀಯವಾಗಿವೆ.

ನಮ್ಮ ದೇಶದಲ್ಲಿಂದು ವಿವಿಧ ವೇದಿಕೆಗಳಲ್ಲಿ ಮಹಿಳೆಯರು ಮತ್ತವರ ಹಲವು ಸಮಸ್ಯೆಗಳ ಕುರಿತು ಚರ್ಚೆ, ಸಂವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ‘ಒಂಟಿ ಮಹಿಳೆಯರು’ ಎಂಬ, ಮಹಿಳೆಯರೊಳಗಿನ ಒಂದು ನಿರ್ದಿಷ್ಟ ವರ್ಗ ಮತ್ತು ಆವರ್ಗದೊಳಗಿನ ಹಲವು ಉಪವರ್ಗಗಳ ಕುರಿತಾದ ಚರ್ಚೆ ಇಲ್ಲಿ ತೀರಾ ವಿರಳ. ಚರ್ಚೆ ಹಾಗಿರಲಿ, ನಮ್ಮಲ್ಲಿ ಯಾರಾದರೂ ಅಂತಹ ವರ್ಗವೊಂದರ ಕುರಿತು ಪ್ರಸ್ತಾವಿಸುವುದು ಕೂಡಾ ತುಂಬಾ ಅಪರೂಪ. ಮಹಿಳೆಯರ ಹಕ್ಕುಗಳಿಗಾಗಿ ತಾನು ನಡೆಸುತ್ತಿರುವ ಹೋರಾಟಕ್ಕಾಗಿ ಗುರುತಿಸಲ್ಪಡುವ ಶೈಲಿ ಚೋಪ್ರಾ ಅವರ ಪ್ರಕಾರ ಭಾರತದಲ್ಲಿ 7.2 ಕೋಟಿ ಒಂಟಿ ಮಹಿಳೆಯರಿದ್ದಾರೆ. ಇಂಗ್ಲೆಂಡ್ ಮತ್ತು ಸ್ವಿಟ್ಸರ್‌ಲ್ಯಾಂಡ್ ಎಂಬ ಎರಡು ಪ್ರಮುಖ ದೇಶಗಳ ಒಟ್ಟು ಜನಸಂಖ್ಯೆಗಿಂತ ದೊಡ್ಡ ಗಾತ್ರದ ಸಂಖ್ಯೆ ಇದು. ವಿಧವೆಯರು, ವಿಚ್ಛೇದಿತರು, ಮದುವೆಯ ಸಾಮಾನ್ಯ ವಯಸ್ಸು ಕಳೆದರೂ ಅವಿವಾಹಿತರಾಗಿ ಉಳಿದಿರುವವರು, ವಿವಾಹವಾದ ಬಳಿಕ ಗಂಡನಿಂದ ಪರಿತ್ಯಕ್ತರಾದವರು, ತನ್ನ ಗಂಡ ಮತ್ತಾತನ ಬಂಧುಗಳ ಅಥವಾ ಸ್ವತಃ ತನ್ನ ಬಂಧುಗಳ ಕಿರುಕುಳ ತಾಳಲಾಗದೆ ಅಥವಾ ಬೇರಾವುದಾದರೂ ಕಾರಣಕ್ಕೆ, ಅವರ ಯಾವ ಹಂಗೂ ಬೇಡ, ನಮ್ಮ ಹಾಗೂ ನಮ್ಮ ಮಕ್ಕಳ ಪೋಷಣೆಯ ಹೊರೆಯನ್ನು ನಾವೇ ಹೊತ್ತುಕೊಳ್ಳುತ್ತೇವೆ ಎಂದು ನಿರ್ಧರಿಸಿರುವ ಒಂಟಿ ತಾಯಂದಿರು, ಹೀಗೆ ಹಲವು ಬಗೆಯವರು ಈ ‘ಒಂಟಿ ಮಹಿಳೆಯರು’ ಎಂಬ ಬೃಹತ್ ಸಮುದಾಯದ ಒಳಗೆ ಅಡಗಿದ್ದಾರೆ.

2011ರ ಜನಗಣತಿಯನ್ನು ಆಧರಿಸಿದ ಒಂದು ಅಂದಾಜಿನಂತೆ ದೇಶದಲ್ಲಿರುವ ಒಂಟಿ ಮಹಿಳೆಯರಲ್ಲಿ 4.33 ಕೋಟಿ ವಿಧವೆಯರು, 23.7 ಲಕ್ಷ ಮಂದಿ ವಿವಾಹದ ಬಳಿಕ ಅನಧಿಕೃತವಾಗಿ ಗಂಡನಿಂದ ತೊರೆಯಲ್ಪಟ್ಟ ಅಥವಾ ತಾವೇ ಗಂಡನನ್ನು ತೊರೆದ ಪರಿತ್ಯಕ್ತರು. 9.1 ಲಕ್ಷ ಮಂದಿ ಅಧಿಕೃತವಾಗಿ ವಿಚ್ಛೇದಿತರಾದವರು. 41.7 ಲಕ್ಷ ಮಂದಿ 35 ವರ್ಷ ವಯಸ್ಸು ಕಳೆದ ಬಳಿಕವೂ, ವರದಕ್ಷಿಣೆ, ಭಗ್ನ ಪ್ರೇಮ, ವಿವಾಹವಾಗುವುದಾಗಿ ನಂಬಿಸಿದವರಿಂದ ವಂಚನೆ ಹೀಗೆ ವಿವಿಧ ಕಾರಣಗಳಿಂದಾಗಿ ಅವಿವಾಹಿತರಾಗಿ ಉಳಿದಿರುವ ಮಹಿಳೆಯರು.

ಯುಎನ್ ಪಾಪುಲೇಷನ್ ಫಂಡ್ (UNPF) ಮತ್ತು ಇಂಟರ್ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಫಾರ್ ಪಾಪುಲೇಷನ್ ಸನ್ಸಸ್ (IIPS) ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸಿದ ‘ವಯಸ್ಸಾಗುತ್ತಿರುವ ಭಾರತ’ (ಇಂಡಿಯಾ ಏಜಿಂಗ್ ರಿಪೋರ್ಟ್ 2023) ವರದಿಯ ಪ್ರಕಾರ, ಸದ್ಯ ಭಾರತದ ಜನಸಂಖ್ಯೆಯಲ್ಲಿ 14.9 ಕೋಟಿ ಮಂದಿ (ಒಟ್ಟು ಜನಸಂಖ್ಯೆಯ ಶೇ.10.5) 60ರ ಹರೆಯ ಮೀರಿದವರು. ಇವರಲ್ಲಿ 7.1 ಕೋಟಿ, ಅಂದರೆ ಅರ್ಧಕ್ಕಿಂತಲೂ ಹೆಚ್ಚು ಮಂದಿ ಮಹಿಳೆಯರು. ಮಕ್ಕಳ ಜನಸಂಖ್ಯೆಯಲ್ಲಿ ಹುಡುಗಿಯರ ಪ್ರಮಾಣ ಹುಡುಗರಿಗಿಂತ ಕಡಿಮೆ ಇದ್ದರೂ ವೃದ್ಧರ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕವಿರುತ್ತದೆಂಬ ಅಂಶ ಗಮನಾರ್ಹ. ಕೆಲವು ತಜ್ಞರ ಲೆಕ್ಕಾಚಾರ ಪ್ರಕಾರ 2050ರ ಹೊತ್ತಿಗೆ ಭಾರತದಲ್ಲಿ 60 ವರ್ಷ ಮೀರಿದವರ ಸಂಖ್ಯೆ 34.7 ಕೋಟಿಯಾಗಲಿದ್ದು ಅವರ ಪ್ರಮಾಣ ಶೇ. 20.8ಕ್ಕೆ ಏರಲಿದೆ. ಆಗಲೂ ಆ ವಯೋಮಿತಿಯವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ತುಂಬಾ ಅಧಿಕವಿರಲಿದೆ.

ಸದೃಢರಾಗಿದ್ದಷ್ಟು ಕಾಲ ಕುಟುಂಬಕ್ಕಾಗಿ ಬೆವರಿಳಿಸಿ ಶ್ರಮಿಸುತ್ತಾ ಬದುಕಿ, ಕೊನೆಗೆ ವೃದ್ಧರಾದ ಕಾರಣಕ್ಕಾಗಿ ಎಲ್ಲರಿಗೆ ಬೇಡವಾಗಿ ಒಂಟಿಯಾಗಿ ಬಿಟ್ಟ ವಯೋವೃದ್ಧ ಮಹಿಳೆಯರ ಒಂದು ಗಣ್ಯ ವರ್ಗ ಭಾರತದ ಒಂಟಿ ಮಹಿಳೆಯರ ಸಮುದಾಯದಲ್ಲಿದೆ. ವೃದ್ಧರಿಗಾಗಿ ಸರಕಾರ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸುತ್ತಿರುತ್ತದೆ. ಆದರೆ ನೆಲಮಟ್ಟದಲ್ಲಿ ನೋಡಿದರೆ ಈ ಔಪಚಾರಿಕ ಯೋಜನೆಗಳಿಂದ ವೃದ್ಧ ಸಮೂಹಕ್ಕೆ ಯಾವುದೇ ಗಣನೀಯ ಲಾಭ ಸಿಕ್ಕಿರುವಂತೆ ಕಾಣಿಸುವುದಿಲ್ಲ. ವಿಶೇಷವಾಗಿ ನಮ್ಮ ಸಮಾಜದಲ್ಲಿ ವೃದ್ಧ ಮಹಿಳೆಯರ, ಅದರಲ್ಲೂ ವಿಧವೆಯರು ಮತ್ತು ಒಂಟಿ ಮಹಿಳೆಯರ ಸ್ಥಿತಿಗತಿಗಳು ನಿಜಕ್ಕೂ ಶೋಚನೀಯವಾಗಿವೆ.

ಕಳೆದ ಬಾರಿಯ ಜನಗಣತಿಯ ವೇಳೆ ದೇಶದಲ್ಲಿ ಸುಮಾರು 4 ಕೋಟಿ ವಿಧವೆಯರಿದ್ದರು. ಇದೀಗ ಅವರ ಸಂಖ್ಯೆ ಕನಿಷ್ಠವೆಂದರೂ 5.5 ಕೋಟಿಯಷ್ಟಿದೆ. ಅಂದರೆ ದೇಶದ ಮಹಿಳಾ ಜನಸಂಖ್ಯೆಯ ಸುಮಾರು ಶೇ. 10. ಕೋವಿಡ್ ಸಂಕಟದ ಅವಧಿಯಲ್ಲಿ ಹಠಾತ್ತಾಗಿ ವಿಧವೆಯರ ಸಂಖ್ಯೆಯಲ್ಲಿ ಗಣ್ಯ ವೃದ್ಧಿಯೂ ಆಗಿತ್ತು. ಭಾರತದ ಹೆಚ್ಚಿನ ಜಾತಿ-ಧರ್ಮಗಳಲ್ಲಿ ವಿಧವಾ ವಿವಾಹವನ್ನು ಒಂದೋ ಸಂಪೂರ್ಣ ನಿಷೇಧಿಸಲಾಗಿದೆ ಅಥವಾ ಸಾಂಪ್ರದಾಯಿಕವಾಗಿ ಅದರ ವಿರುದ್ಧ ತೀವ್ರ ಪ್ರತಿರೋಧವಿದೆ. ಆದ್ದರಿಂದ ಯವ್ವನದಲ್ಲೇ ವಿಧವೆಯಾದ ಮಹಿಳೆ ಕೂಡಾ ತನ್ನ ಮುಂದಿನ ಬದುಕನ್ನೆಲ್ಲಾ ಮರುವಿವಾಹಕ್ಕೆ ಅವಕಾಶವಿಲ್ಲದೆ ನರಳಬೇಕಾಗುತ್ತದೆ. ವಿಚ್ಛೇದಿತ ಮಹಿಳೆಯರ ಹಾಗೂ ಪರಿತ್ಯಕ್ತ ಮಹಿಳೆಯರ ಮರು ವಿವಾಹದ ವಿರುದ್ಧವೂ ಭಾರತೀಯ ಸಮಾಜದಲ್ಲಿ ಕಠಿಣ ಪ್ರತಿರೋಧ ಕಂಡು ಬರುತ್ತದೆ. ಇಲ್ಲಿ ಪ್ರಸ್ತುತ ಪ್ರತಿರೋಧಗಳು ಮತ್ತು ಅವುಗಳ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಬಹಳಷ್ಟು ಕಥೆ, ಕಾದಂಬರಿಗಳು, ನಾಟಕ, ಸಿನೆಮಾಗಳೆಲ್ಲಾ ಬಂದಿವೆ. ಆದರೆ ಈವರೆಗೂ ಈ ಅನಿಷ್ಟಗಳ ನಿವಾರಣೆಗಾಗಿ ಮತ್ತು ವಿವಾಹಾರ್ಹ ವಯೋಮಿತಿಯ ವಿಧವೆಯರು, ವಿಚ್ಛೇದಿತೆಯರು ಮತ್ತು ಪರಿತ್ಯಕ್ತ ಮಹಿಳೆಯರ ಮರುವಿವಾಹವನ್ನು ಕಳಂಕಮುಕ್ತವಾಗಿಸಿ ಪ್ರೋತ್ಸಾಹಿಸುವುದಕ್ಕಾಗಿ ದೊಡ್ಡ ಪ್ರಮಾಣದ ಯಾವುದೇ ಆಂದೋಲನ ರೂಪುಗೊಂಡಿಲ್ಲ.

ಉತ್ತರಪ್ರದೇಶದ ಮಥುರಾ ಜಿಲ್ಲೆಯ ತೀರ್ಥ ಕ್ಷೇತ್ರ ವೃಂದಾವನವನ್ನು ‘ವಿಧವೆಯರ ನಗರ’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಬೇರಾವುದೇ ಆಯ್ಕೆ ಉಳಿದಿಲ್ಲದಾಗ ಆಶ್ರಯ ಹುಡುಕಿ ಇಲ್ಲಿಗೆ ಬಂದಿರುವ ದೇಶದ ವಿವಿಧೆಡೆಯ ಅನಾಥ ವಿಧವೆಯರ ಸಂಖ್ಯೆ ಸುಮಾರು 20,000ದಷ್ಟಿದೆ. ಇಲ್ಲಿ ಕೆಲವು ವೃದ್ಧಾಶ್ರಮಗಳು ಮತ್ತು ಸೇವಾ ಸಂಸ್ಥೆಗಳು ಅವರಿಗೆ ಕೆಲವು ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತವೆ. ಇಂತಹ ಸಂಸ್ಥೆಗಳಲ್ಲಿ ಪ್ರವೇಶ ಸಿಗುವುದಕ್ಕೂ ತುಂಬಾ ಸಾಹಸ ಪಡಬೇಕಾಗುತ್ತದೆ. ತುಂಬಾ ಕಾಯಬೇಕಾಗುತ್ತದೆ. ಆಶ್ರಯ ಸಿಗುವ ತನಕ ಬೀದಿಯೇ ಆಶ್ರಯ. ಭಿಕ್ಷೆಯೇ ಆದಾಯ. ಇವರಲ್ಲಿ ಹೆಚ್ಚಿನವರಿಗೆ ಅವರವರ ಊರುಗಳಲ್ಲಿ ಬಂಧುಗಳಿದ್ದಾರೆ. ಆದರೆ ವಿಧವೆಯರು ಎಂಬ ಕಾರಣಕ್ಕಾಗಿ ಅವರ ಬಂಧುಗಳು ಅವರನ್ನು ಜೀತದಾಳುಗಳಾಗಿ ಬಳಸಿರುತ್ತಾರೆ. ಅವರನ್ನು ತೀರಾ ತಾತ್ಸಾರದಿಂದ ಕಂಡು, ಅವರಿಗೆ ಹಲವು ಬಗೆಯ ಕಿರುಕುಳ ನೀಡಿರುತ್ತಾರೆ. ಅಥವಾ ಅವರನ್ನು ತಮ್ಮ ಮನೆಗಳಿಂದ ಹೊರದಬ್ಬಿರುತ್ತಾರೆ. ಕೆಲವರಿಗೆ ಸ್ವಂತ ಮಕ್ಕಳೂ ಇದ್ದಾರೆ. ಆದರೆ ಅವರೇ ಹೆತ್ತು ಪೋಷಿಸಿದ ಅವರ ಆ ಸ್ವಂತ ಮಕ್ಕಳು ಅವರನ್ನು ಹೊರಲಾಗದ ಹೊರೆಯಾಗಿ ಕಾಣುತ್ತಾರೆ. ತಮ್ಮ ವೃದ್ಧ ಹೆತ್ತವರ ಪೋಷಣೆಯ ಹೊಣೆ ಹೊರಲು ಸಿದ್ಧರಿಲ್ಲದ, ಮಾತ್ರವಲ್ಲ, ತಮ್ಮ ಸತ್ತ ಹೆತ್ತವರ ಶವ ಸಂಸ್ಕಾರಕ್ಕೂ ಪುರುಸೊತ್ತಿಲ್ಲದ ಎಷ್ಟೋ ಮಂದಿ ನಮ್ಮ ನಾಗರಿಕ ಸಮಾಜದಲ್ಲಿದ್ದಾರೆ. ತಮ್ಮ ಹೆತ್ತವರಿಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳಿಂದ ಸಂಪೂರ್ಣ ಮುಕ್ತರಾಗುವುದಕ್ಕೆ ಅವರು ಪ್ರಯತ್ನಿಸುತ್ತಿರುತ್ತಾರೆ. ಅದಕ್ಕಾಗಿ ಕೆಲವೊಮ್ಮೆ ಘೋರ ಅಪರಾಧಗಳನ್ನೂ ಮಾಡಿಬಿಡುತ್ತಾರೆ. ಹೆತ್ತವರ ವಿರುದ್ಧ ಮಕ್ಕಳು ಎಸಗುವ ಪ್ರಸ್ತುತ ಅಪರಾಧಕೃತ್ಯಗಳ ಕುರಿತಾದ ವರದಿಗಳು ಪತ್ರಿಕೆ ಮತ್ತು ಟಿ.ವಿ.ಗಳಲ್ಲಿ ಬಹುತೇಕ ನಿತ್ಯವೂ ವರದಿಯಾಗುತ್ತಲೇ ಇರುತ್ತವೆ. ಆದರೂ ಯಾವುದೇ ಸಮಾಜಕ್ಕೆ ಸವಾಲಾಗುವ ಈ ಮಾನಸಿಕತೆಯ ಕುರಿತು ಗಂಭೀರ ಚರ್ಚೆಯಾಗುವುದು ಮಾತ್ರ ಅಪರೂಪ.

ಕೇಂದ್ರ ಸರಕಾರ ತನ್ನ ಒಂದು ಯೋಜನೆಯನ್ವಯ 40ರಿಂದ 79 ವರ್ಷ ವಯೋ ಮಿತಿಯ ವಿಧವೆಯರಿಗೆ ಸಹಾಯಧನದ ರೂಪದಲ್ಲಿ ಮಾಸಿಕ ರೂ. 300 ಪಾವತಿಸುತ್ತದೆ. ಈ ಉದಾರ ಮೊತ್ತವನ್ನು ಬಳಸಿ ಆ ವಿಧವೆಯರು 80 ವರ್ಷ ಬದುಕುಳಿದರೆ ಆ ಬಳಿಕ ಬಹುಮಾನ ರೂಪದಲ್ಲಿ ಅವರ ಮಾಸಿಕ ಸಹಾಯಧನವನ್ನು ರೂ. 500ಕ್ಕೆ ಹೆಚ್ಚಿಸಲಾಗುತ್ತದೆ. ಕೆಲವು ರಾಜ್ಯ ಸರಕಾರಗಳು ಇದಕ್ಕೆ ತಮ್ಮ ಕಡೆಯಿಂದ ನೂರಿನ್ನೂರು ರೂಪಾಯಿ ಸೇರಿಸಿ ಪಾವತಿಸುತ್ತವೆ.

ಇದು ಗಂಡ ಸತ್ತ ಹೆಂಗಸರ ವ್ಯಥೆಯಾಯಿತು. ವಿವಾಹ ಎಂಬ ಸುಯೋಜಿತ ನಾಟಕವೊಂದಕ್ಕೆ ಬಲಿಯಾಗಿ ಯವ್ವನದಲ್ಲೇ, ಗಂಡನಿನ್ನೂ ಜೀವಂತ ಇರುವಾಗಲೇ, ಆತ ಎಲ್ಲಿದ್ದಾನೆಂಬ ಅರಿವಿಲ್ಲದೆ, ಆತನೊಂದಿಗೆ ಸಂಪರ್ಕಕ್ಕೆ ಯಾವ ದಾರಿಯೂ ಇಲ್ಲದೆ, ತ್ರಿಶಂಕು ಸ್ಥಿತಿಯಲ್ಲಿರುವ ಒಂಟಿ ಮಹಿಳೆಯರ ಕಥೆ ಬೇರೆಯೇ ಇದೆ. ಯುಕೆ, ಕೆನಡಾ, ಆಸ್ಟ್ರೇಲಿಯ ಮುಂತಾದ ಚಂದ ಚಂದದ ದೂರದ ದೇಶಗಳಲ್ಲಿ ನೆಲೆಸಿರುವ ಯುವ (ವಯೋಮಿತಿ ಸುಮಾರು 25 ರಿಂದ 50) ಅನಿವಾಸಿ ಭಾರತೀಯರು (ಎನ್ನಾರೈಗಳು) ಭಾರತಕ್ಕೆ ಮರಳಿ ಬಂದು ಇಲ್ಲಿರುವ ಹೆಣ್ಣನ್ನು ವಿವಾಹವಾಗುವುದು ಕೆಲವು ರಾಜ್ಯಗಳಲ್ಲಿ ಸಾಮಾನ್ಯವಾಗಿದೆ. ತಮ್ಮ ಮಗಳನ್ನು ಒಬ್ಬ ಎನ್ನಾರೈ ಮಹಾಶಯ ಮದುವೆಯಾಗುತ್ತಾನೆ ಎಂಬುದು ಹುಡುಗಿಯ ಮನೆಯವರಿಗೂ ಬಹಳ ಅಭಿಮಾನದಿಂದ ಕೊಚ್ಚಿಕೊಳ್ಳುವ ವಿಷಯವಾಗಿರುತ್ತದೆ. ತಾನು ತನ್ನ ಅನಿವಾಸಿ ರಾಜಕುಮಾರನ ಜೊತೆ ವಿದೇಶಕ್ಕೆ ಹೋಗಿ ಸ್ವತಃ ಶ್ರೀಮಂತಳಾಗುವ ಜೊತೆ, ತನ್ನ ಅಣ್ಣತಮ್ಮಂದಿರನ್ನೆಲ್ಲ ವಿದೇಶಕ್ಕೆ ಕರೆಸಿಕೊಂಡು ಎಲ್ಲರನ್ನೂ ಶ್ರೀಮಂತರಾಗಿಸಿ ಬಿಡುತ್ತೇನೆ ಎಂಬ ಚಂದದ ಕನಸನ್ನು ಮುಗ್ಧ ವಧು ಕೂಡಾ ಪೋಷಿಸುತ್ತಿರುತ್ತಾಳೆ. ಆಕೆಯ ಮನೆಯವರು, ಎನ್ನಾರೈ ಅಳಿಯ ಮತ್ತವನ ಮನೆಯವರ ಮೆಚ್ಚುಗೆ ಪ್ರಾಪ್ತಿ ಮಾಡಲಿಕ್ಕಾಗಿ ತಮ್ಮ ನೆಲ, ಜಮೀನುಗಳನ್ನೆಲ್ಲ ಮಾರಿ, ಉಳಿದದ್ದನ್ನು ಅಡವಿಟ್ಟು, ಸಾಲ ಮಾಡಿ, ತಮ್ಮ ಸಾಮರ್ಥ್ಯಕ್ಕಿಂತ ತುಂಬಾ ಹೆಚ್ಚಿನದಾದ ಬೃಹತ್ ಮೊತ್ತವನ್ನು ಮತ್ತು ದುಬಾರಿ ಉಡುಗೊರೆಗಳನ್ನು ವರನಿಗೆ ಕೊಟ್ಟು ಬಿಡುತ್ತಾರೆ. ಮದುವೆಯಾದ ಬಳಿಕ ಹೆಚ್ಚೆಂದರೆ ಕೆಲವು ವಾರಗಳ ಕಾಲ ವರಮಹಾಶಯ, ವಧುವಿನ ಕಡೆಯವರ ಖರ್ಚಿನಲ್ಲಿ ಎಲ್ಲ ಬಗೆಯ ಆತಿಥ್ಯವನ್ನು ಸಂಭ್ರಮಿಸಿ, ಸಾಕಷ್ಟು ಮೋಜು, ಗಮ್ಮತ್ತು ಮಾಡಿ ತನ್ನ ನೆಲೆಗೆ ಮರಳಿ ಬಿಡುತ್ತಾನೆ. ಆ ಬಳಿಕ ವಧು ಮತ್ತಾಕೆಯ ಮನೆಯವರು ಎಷ್ಟು ಶ್ರಮಿಸಿದರೂ ಆತ ಸಂಪರ್ಕಕ್ಕೇ ಸಿಗುವುದಿಲ್ಲ. ಅವನು ಕೊಟ್ಟ ವಿದೇಶದ ವಿಳಾಸ ನಕಲಿಯಾಗಿರುತ್ತದೆ. ಅವನನ್ನು ಮದುವೆಯಾದ ಹೆಣ್ಣುಮಗಳಿಗೆ ಗಂಡನೂ ಇಲ್ಲ. ಅವಳು ಸಾಕಿದ ಸ್ವಪ್ನಗಳೂ ಇಲ್ಲ. ಇನ್ನೊಬ್ಬನನ್ನು ವಿವಾಹವಾಗುವ ಅವಕಾಶವೂ ಇಲ್ಲ. ಈ ರೀತಿ ಮೋಸ ಹೋದ ಹೆಣ್ಣುಮಕ್ಕಳ ಒಂದು ದೊಡ್ಡ ಸಂಖ್ಯೆ ದೇಶದಲ್ಲಿದೆ.

90ರ ದಶಕದಲ್ಲಿ ಈ ಪಿಡುಗು ತುಂಬಾ ವ್ಯಾಪಕವಾಗಿತ್ತು. ಕ್ರಮೇಣ ಜನರು ಎಚ್ಚರ ವಹಿಸತೊಡಗಿದರಾದರೂ ದೇಶಕ್ಕೆ ಈ ಪಿಡುಗಿನಿಂದ ಸಂಪೂರ್ಣ ಮುಕ್ತಿ ಸಿಗುವ ಕಾಲ ಇನ್ನೂ ತುಂಬಾ ದೂರವಿದೆ. ವಿಲಾಸಿ ಕನಸುಗಳನ್ನು ಮಾರಿ ಇಂತಹ ಎನ್ನಾರೈ ವಿವಾಹಗಳನ್ನು ಏರ್ಪಡಿಸುವ ಹಲವು ಏಜೆನ್ಸಿ ಜಾಲಗಳು ಹಿಂದೆಯೂ ದೇಶದಲ್ಲಿ ಸಕ್ರಿಯವಾಗಿದ್ದವು, ಇಂದೂ ಹಲವೆಡೆ ಸಕ್ರಿಯವಾಗಿವೆ. ಈ ಜಾಲಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡ ಕುಟುಂಬಗಳು ಪಂಜಾಬ್, ಗುಜರಾತ್, ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಮತ್ತು ದೇಶದ ಹಲವು ದೊಡ್ಡ ನಗರಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡು ಬರುತ್ತವೆ. ಇತ್ತೀಚಿನ ವರ್ಷಗಳಲ್ಲಿ ಈ ದಂಧೆ ಹೆಚ್ಚಾಗಿ

ಆನ್ ಲೈನ್ ಸಂಪರ್ಕಗಳ ಮೂಲಕ ನಡೆಯುತ್ತಿದೆ. 2019ರಲ್ಲಿ ಪ್ರಕಟವಾದ, ಯುನಿವರ್ಸಿಟಿ ಆಫ್ ನಾರ್ತ್ ಕರೋಲಿನಾದ ಸೋನಿಯಾ ಕಪೂರ್ ಅವರ ಸಂಶೋಧನಾ ಪ್ರಬಂಧದ ಪ್ರಕಾರ, ಪಂಜಾಬ್ ರಾಜ್ಯವೊಂದರಲ್ಲೇ ಈ ರೀತಿ ಮೋಸ ಹೋಗಿ ನಿರ್ಗತಿಕರಾದ ಮಹಿಳೆಯರ ಸಂಖ್ಯೆ 30 ಸಾವಿರದಷ್ಟಿದೆ. ಇದಕ್ಕಿಂತ ಮುನ್ನ ಖ್ಯಾತ ಪತ್ರಕರ್ತೆ ಅಂಜು ಅಗ್ನಿಹೋತ್ರಿ ಚಾಬಾ ‘ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಪ್ರಕಟವಾದ ತಮ್ಮ ವಿಶೇಷ ವರದಿಯೊಂದರಲ್ಲಿ, ಪಂಜಾಬ್‌ನ ದೋಆಬಾ ಎಂಬ ಒಂದೇ ಪ್ರಾಂತದಲ್ಲಿ ಎನ್ನಾರೈಗಳನ್ನು ಮದುವೆಯಾಗಿ ಅನಾಥ ಬದುಕಿಗೆ ತಳ್ಳಲ್ಪಟ್ಟ ಸುಮಾರು 15 ಸಾವಿರ ಮಹಿಳೆಯರಿದ್ದಾರೆಂದು ತಿಳಿಸಿದ್ದರು. ವಿದೇಶಾಂಗ ವ್ಯವಹಾರ ಸಚಿವಾಲಯದ ಪ್ರಕಾರ 2020 ಜನವರಿಯಿಂದ 2023 ಅಕ್ಟೋಬರ್ ತನಕ ಇಂತಹ ಎನ್ನಾರೈ ಮೋಸಗಳ ಕುರಿತು ಅಧಿಕೃತವಾಗಿ ಕೇವಲ 5,339 ದೂರುಗಳು ಮಾತ್ರ ದಾಖಲಾಗಿದ್ದವು. ಸಮಸ್ಯೆಯ ನೈಜ ಪ್ರಮಾಣಕ್ಕೆ ಹೋಲಿಸಿದರೆ ಪ್ರಸ್ತುತ ಅಧಿಕೃತ ದೂರುಗಳ ಸಂಖ್ಯೆ ತೀರಾ ನಗಣ್ಯ ಎಂಬುದು ವ್ಯಕ್ತ. ಈ ರೀತಿ ಅಧಿಕೃತ ದೂರುಗಳು ಕನಿಷ್ಠ ಪ್ರಮಾಣದಲ್ಲಿರುವುದಕ್ಕೆ ಕಾರಣವಿದೆ. ಭಾರತದಲ್ಲಿ ಸಾಮಾನ್ಯವಾಗಿ ಪತಿ-ಪತ್ನಿಯರ ನಡುವಣ ಜಗಳ, ಹಿಂಸೆ, ವಿಚ್ಛೇದನ, ಪ್ರತ್ಯೇಕತೆ ಇತ್ಯಾದಿಗಳನ್ನು, ಕಟ್ಟುನಿಟ್ಟಾಗಿ ಕುಟುಂಬದೊಳಗೆ ಮಾತ್ರ ಸೀಮಿತವಾಗಿ ಚರ್ಚಿಸಬಹುದಾದ ಮತ್ತು ಯಾವ ಕಾರಣಕ್ಕೂ ಕುಟುಂಬದ ಹೊರಗೆ ಕಿಂಚಿತ್ತೂ ಚರ್ಚೆಗೆ ಬರಲೇಬಾರದ ವಿಷಯಗಳೆಂದು ಪರಿಗಣಿಸಲಾಗುತ್ತದೆ. ಕುಟುಂಬದ ಒಳಗುಟ್ಟು ಹೊರಗೆ ಚರ್ಚೆಗೆ ಬರುವುದನ್ನು ಒಂದು ಸಾಮಾಜಿಕ ಕಳಂಕವಾಗಿ ಕಾಣಲಾಗುತ್ತದೆ. ಈ ಮಾನಸಿಕತೆಯ ಪರಿಣಾಮವಾಗಿಯೇ, ಇಂತಹ ಪ್ರಕರಣಗಳ ಕುರಿತಾದ ದೂರುಗಳು ಪೊಲೀಸ್ ಠಾಣೆ, ಕೋರ್ಟು ಕಚೇರಿ, ಮಾಧ್ಯಮ ಇತ್ಯಾದಿಗಳ ಹತ್ತಿರ ಕೂಡಾ ಸುಳಿಯುವುದಿಲ್ಲ. ಈರೀತಿ ಸಾಮಾಜಿಕ ಕಳಂಕಕ್ಕೆ ಅಂಜಿ ಅಪರಾಧಗಳನ್ನು ಗುಟ್ಟಾಗಿಡುವ ಪರಿಪಾಠದಿಂದಾಗಿ ‘ಹಾಲಿಡೇ ವೈಫ್’ಗಳ ಹೆಚ್ಚಿನ ಪ್ರಕರಣಗಳು ಗುಟ್ಟಾಗಿಯೇ ಉಳಿಯುತ್ತವೆ. ಒಂಟಿತನ ಹೇರಲ್ಪಟ್ಟ ಮಹಿಳೆಯರು ಒಂಟಿಯಾಗಿಯೇ ನರಕಯಾತನೆ ಅನುಭವಿಸುತ್ತಿರುತ್ತಾರೆ. ಕೆಲವೊಮ್ಮೆ ಅವರ ಜೊತೆ, ಆ ವಂಚಕ ಪತಿ ಬಿಟ್ಟು ಹೋದ ಅನಾಥ ಮಗುವೂ ಇರುತ್ತದೆ.

ಹೀಗೆ ಎನ್ನಾರೈ ಗಂಡಸರಿಂದ ಮೋಸಹೋದ ಹೆಣ್ಣುಮಕ್ಕಳು ಒಂದೆಡೆಯಾದರೆ, ಇನ್ನೊಂದೆಡೆ, ಶುದ್ಧ ಸ್ವದೇಶಿ ಗಂಡನ್ನು ಮದುವೆಯಾಗಿ ಮೋಸಹೋದ ಹೆಣ್ಣುಮಕ್ಕಳ ಒಂದು ದೊಡ್ಡ ವರ್ಗವೂ ನಮ್ಮಲ್ಲಿದೆ. ಅದೆಷ್ಟೋ ಪುರುಷರು ಮದುವೆಯಾಗಿ ಒಂದೆರಡು ಮಕ್ಕಳು ಕೂಡಾ ಜನಿಸಿದ ಬಳಿಕ ಮಡದಿ ಮಕ್ಕಳನ್ನು ಬಿಟ್ಟು ಕಣ್ಮರೆಯಾಗಿ ಬಿಡುವುದಿದೆ. ಕೆಲವರು ಊರಲ್ಲೇ ಇದ್ದರೂ ಮೊದಲ ಮಡದಿ ಮಕ್ಕಳಿಂದ ಸಂಪರ್ಕ ಕಡಿದುಕೊಂಡು ಇನ್ನಾರ ಜೊತೆಗೋ ಸಂಸಾರ ಆರಂಭಿಸಿರುತ್ತಾರೆ. ಇನ್ನು ಕೆಲವು ಮಂದಿ, ಮದುವೆಯಾಗಿ ಕೆಲಸಮಯದ ಬಳಿಕ ಪತ್ನಿಗೆ ಖರ್ಚು ವೆಚ್ಚ ಏನನ್ನೂ ನೀಡದೆ, ಸ್ವತಃ ನಿಷ್ಕ್ರಿಯರಾಗಿದ್ದು, ಪತ್ನಿಯ ಆದಾಯದಿಂದ ಬದುಕಲು ಬಯಸುವ ಸೋಮಾರಿಗಳಾಗಿರುತ್ತಾರೆ. ಪತ್ನಿಯ ಆದಾಯವನ್ನೇ ಅವಲಂಬಿಸಿ ಬದುಕುತ್ತಿದ್ದರೂ ಪತ್ನಿಯನ್ನು ದಾಸಿಗಿಂತ ಕೀಳಾಗಿ ಕಾಣುತ್ತಾ ಆಕೆಯನ್ನು ಹಿಂಸಿಸುತ್ತಿರುವ ಗಂಡಂದಿರೂ ನಮ್ಮಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹ ಗಂಡಂದಿರ ಕರಾಳ ಛಾಯೆಯಿಂದ ತಮ್ಮನ್ನು ಮತ್ತು ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲಿಕ್ಕಾಗಿ ಹಲವು ಮಹಿಳೆಯರು ಅವರಿಂದ ದೂರ ಒಂಟಿಯಾಗಿ ಉಳಿಯಲು ಬಯಸುತ್ತಾರೆ. ಗಂಡನ ಕುಡಿತ, ಜೂಜು ಮುಂತಾದ ದುಶ್ಚಟಗಳು, ಅನೈತಿಕ ಸಂಬಂಧಗಳು, ವರದಕ್ಷಿಣೆಗಾಗಿ ಅವನು ಮತ್ತವನ ಮನೆಯವರು ಹೆಣ್ಣು ಮತ್ತು ಆಕೆಯ ಮನೆಯವರಿಗೆ ನೀಡುವ ಕಿರುಕುಳ, ಪತ್ನಿಯ ಮೇಲೆ ಹಲ್ಲೆ ನಡೆಸುವ ಮತ್ತು ಆಕೆಗೆ ಚಿತ್ರಹಿಂಸೆ ನೀಡುವ ಪ್ರವೃತ್ತಿ, ಸದಾ ಪತ್ನಿಯ ಶೀಲದ ಬಗ್ಗೆ ಸಂಶಯಿಸುತ್ತಾ ಆಕೆಯ ಮೇಲೆ ಸುಳ್ಳಾರೋಪಗಳನ್ನು ಹೊರಿಸುವ ಅಭ್ಯಾಸ-ಇವೇ ಮುಂತಾದ ಕಾರಣಗಳಿಂದಲೂ ರೋಸಿಹೋಗಿ ಎಷ್ಟೋ ವಿವಾಹಿತ ಹೆಣ್ಣುಮಕ್ಕಳು ವಿವಾಹ ಬಂಧನವನ್ನು ಲಂಘಿಸಿ ಪ್ರತ್ಯೇಕ ಜೀವನ ಆರಂಭಿಸುತ್ತಾರೆ.

ಭಾರತದಲ್ಲಿ ಈಗಲೂ ಶೇ. 90ಕ್ಕಿಂತ ಹೆಚ್ಚಿನ ಹೆಣ್ಣುಮಕ್ಕಳ ವಿವಾಹವನ್ನು ಅವರ ಕುಟುಂಬದವರೇ ಏರ್ಪಡಿಸುತ್ತಾರೆ. ಆದರೆ ವಿವಾಹಿತ ಹೆಣ್ಣುಮಕ್ಕಳ ಸಂಕಟ, ಅಸಹಾಯಕತೆಗಳನ್ನು ನೋಡಿ ಹಲವು ಹೆಣ್ಮಕ್ಕಳು ತಮಗೆ ಕುಟುಂಬದಿಂದ ಆಯೋಜಿತ ವಿವಾಹ ಬೇಡವೆಂಬ ನಿಲುವಿನತ್ತ ವಾಲುತ್ತಿದ್ದಾರೆ. ಕಾಲಕ್ರಮೇಣ ಅಂಥವರ ಸಂಖ್ಯೆ ಹೆಚ್ಚುತ್ತಿದೆ. ಕೆಲವರು, ಪಶ್ಚಿಮದ ಟ್ರೆಂಡ್ ಗಳಿಂದ ಪ್ರಭಾವಿತರಾಗಿ ನಮ್ಮ ಜೀವನ ಸಂಗಾತಿಯನ್ನು ನಾವೇ ಆರಿಸಿಕೊಳ್ಳುತ್ತೇವೆ, ಹಠಾತ್ತಾಗಿ ವಿವಾಹವಾದ ಅಪರಿಚಿತ ಗಂಡನನ್ನೇ ಜೀವನಾದ್ಯಂತದ ಸಂಗಾತಿಯಾಗಿಸುವುದು ಅಪಾಯಕಾರಿಯಾದ್ದರಿಂದ ನಾವು ನಮಗೆ ಮೆಚ್ಚುಗೆಯಾದ ವ್ಯಕ್ತಿಯ ಜೊತೆ ಕೆಲವುಕಾಲ ಅವಿವಾಹಿತ ಸಂಗಾತಿಯಾಗಿ ಜೀವಿಸಿ ಆ ಬಳಿಕ ಇಷ್ಟವಾದರೆ ಆತನನ್ನು ವಿವಾಹವಾಗುತ್ತೇವೆ ಎಂಬ ನಿರ್ಧಾರಕ್ಕೆ ಬರುತ್ತಾರೆ. ಆದರೆ ಹೆಚ್ಚಿನ ಸನ್ನಿವೇಶಗಳಲ್ಲಿ ಅದೆಲ್ಲಾ ಅವರು ನಿರೀಕ್ಷಿಸಿದಂತೆ ನಡೆಯುವುದಿಲ್ಲ. ವಿವಾಹದಲ್ಲಿ ಸಮಸ್ಯೆಗಳಿರುವಂತೆ, ವಿವಾಹೇತರ ಸಂಬಂಧಗಳಲ್ಲೂ ಅದರದೇ ಆದ ಸಮಸ್ಯೆಗಳಿರುತ್ತವೆ. ಪ್ರೇಮಿಯಾಗಿ ಕೆಲವು ದಿನ ಒಬ್ಬಳ ಜೊತೆಗಿದ್ದ ಹುಡುಗನಿಗೆ ಬೋರ್ ಆದಾಗ ಅವನು ಇನ್ನೊಬ್ಬ ಹೆಣ್ಣಿನ ಪ್ರೇಮಿಯಾಗುತ್ತಾನೆ. ಸಂಬಂಧವು ಚಿಗುರುವ ಹಂತದಲ್ಲಿದ್ದಾಗ ತುಂಬಿತುಳುಕುವ ಪ್ರೀತಿ ಪ್ರೇಮ ಇತ್ಯಾದಿಗಳು, ಜೊತೆಯಾಗಿ ಬದುಕಲಾರಂಭಿಸಿದ ಬಳಿಕ ಕ್ರಮೇಣ ಬಾಡತೊಡಗುತ್ತವೆ. ಆದ್ದರಿಂದಲೇ, ಜೊತೆಯಾಗಿ ಬದುಕುವ ಹೆಚ್ಚಿನ ಅವಿವಾಹಿತ ಜೋಡಿಗಳ ಮೈತ್ರಿ ಕೆಲವೇ ತಿಂಗಳು ಅಥವಾ ವರ್ಷಗಳಲ್ಲಿ ಕುಸಿದು ಬೀಳುತ್ತದೆ. ಹೀಗೆ ಕೆಲವು ಪ್ರಯೋಗಗಳು ವಿಫಲವಾದ ಬಳಿಕ ಮಹಿಳೆ ಮತ್ತೆ ಒಂಟಿತನಕ್ಕೆ ಶರಣಾಗಿ ಬಿಡುತ್ತಾಳೆ. ಆವರೆಗೆ ಆಕೆಯ ಪಾಲಿಗೆ ಸಾಂಪ್ರದಾಯಿಕ ವಿವಾಹದ ಬಾಗಿಲುಗಳೂ ಮುಚ್ಚಿಹೋಗಿರುತ್ತವೆ.

2023 ರಲ್ಲಿ ಮಹಾರಾಷ್ಟ್ರದ ಅಹಿಲ್ಯಾ ನಗರ್ ಜಿಲ್ಲಾ ಪರಿಷದ್ ವತಿಯಿಂದ ಒಂದು ಸಮೀಕ್ಷೆ ನಡೆಸಲಾಯಿತು. ಆ ಜಿಲ್ಲೆಯಲ್ಲಿನ ಒಂದು ಲಕ್ಷ ಒಂಟಿ ಮಹಿಳೆಯರ ಪೈಕಿ 4,582 ಮಂದಿ ಪತಿಯಿಂದ ಮೋಸಕ್ಕೊಳಗಾಗಿ ಪರಿತ್ಯಕ್ತರಾಗಿದ್ದರೆಂದು ಪ್ರಸ್ತುತ ಸಮೀಕ್ಷೆಯಿಂದ ತಿಳಿದುಬಂತು. ಕೇವಲ ಒಂದು ಜಿಲ್ಲೆಯಲ್ಲಿ ಇಂತಹ ಮಹಿಳೆಯರು ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದರೆ, ದೇಶದ ಬೇರೆ ಪ್ರದೇಶಗಳ ಕಥೆ ಏನು? ಅಲ್ಲೆಲ್ಲಾ ಇಂತಹ ಎಷ್ಟು ಮಹಿಳೆಯರಿರಬಹುದು? ಈ ಕುರಿತು ನಿರ್ದಿಷ್ಟ ಮಾಹಿತಿಯಾಗಲಿ, ಅಂಕೆ ಸಂಖ್ಯೆಗಳಾಗಲಿ ಲಭ್ಯವಿಲ್ಲ. ನಿಜವಾಗಿ ನಮ್ಮ ಕೇಂದ್ರ ಸರಕಾರ, ವಿವಿಧ ರಾಜ್ಯ ಸರಕಾರಗಳು ಮತ್ತು ಅವುಗಳ ಸಮಾಜಕಲ್ಯಾಣ ಮತ್ತಿತರ ಇಲಾಖೆಗಳು ಈ ಕುರಿತು ಅಧ್ಯಯನ, ಸಮೀಕ್ಷೆ ಇತ್ಯಾದಿಗಳನ್ನು ನಡೆಸಿ ವಾಸ್ತವವನ್ನು ಅರಿಯಬೇಕಿತ್ತು. ಸಮಾಜಕ್ಕೆ ತಿಳಿಸಬೇಕಿತ್ತು. ಈ ಸಂತ್ರಸ್ತ ವರ್ಗಕ್ಕೆ ಪರಿಹಾರ ಮತ್ತು ಪುನರ್ವಸತಿ ಒದಗಿಸುವುದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಬೇಕಿತ್ತು. ಹಾಗೆಯೇ ಈ ಕುರಿತು ನಮ್ಮ ಅರೆ ಸರಕಾರಿ ಹಾಗೂ ಖಾಸಗಿ ಸೇವಾ ಸಂಸ್ಥೆಗಳು ಮತ್ತು ಸ್ವಯಂಸೇವಕ ಸಂಸ್ಥೆಗಳು ವಿಶೇಷ ಆಸಕ್ತಿ ವಹಿಸಬೇಕಿತ್ತು.

ಇವೆಲ್ಲಾ ಮಹಿಳೆಯರ ಹಿತ ಬಯಸುವವರೆಲ್ಲಾ ಈಗಲೇ ಗಂಭೀರವಾಗಿ ತಲೆಕೆಡಿಸಿಕೊಳ್ಳಬೇಕಾದ ಗಂಭೀರ ವಿಷಯಗಳು. ಹಾಗೆಯೇ ಇವು ಭವಿಷ್ಯದ ಸಂಭಾವ್ಯ ಸನ್ನಿವೇಶವನ್ನು ನಿಭಾಯಿಸಲಿಕ್ಕಾಗಿ ಸಮಾಜವನ್ನು ಸಜ್ಜುಗೊಳಿಸಬೇಕಾದ ಮತ್ತು ಮಹಿಳೆಯರ ಹಿತರಕ್ಷಣೆಗಾಗಿ ತಮ್ಮ ಧೋರಣೆಗಳನ್ನು ತಿದ್ದಿಕೊಂಡು, ಸುಧಾರಿಸಿಕೊಂಡು, ದೂರದೃಷ್ಟಿಯ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸುವಂತೆ ಸರಕಾರಗಳ ಮೇಲೆ ಒತ್ತಡ ಹೇರಬೇಕಾದ, ಅದಕ್ಕಾಗಿ ಜಾಗೃತಿ ಅಭಿಯಾನಗಳು ಹಾಗೂ ಸಾಮಾಜಿಕ ಚಳವಳಿಗಳಿಗೆ ಚಾಲನೆ ನೀಡಬೇಕಾದ ವಿಷಯಗಳು.

share
ಶಂಬೂಕ
ಶಂಬೂಕ
Next Story
X