ತಬ್ಲೀಗಿ ಜಮಾಅತ್ ಪ್ರಕರಣದಲ್ಲಿ ಈಗ ದಿಲ್ಲಿ ಹೈಕೋರ್ಟ್ ವಿಚಾರಣೆಯನ್ನೇ ರದ್ದುಗೊಳಿಸಿದೆ
ಆಗ ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದವರು ಈಗ ಯಾಕೆ ಮೌನವಾಗಿದ್ದಾರೆ?

ಕೋವಿಡ್ ಹರಡಿದ್ದ ಆರೋಪದಲ್ಲಿ ತಬ್ಲೀಗಿ ಜಮಾಅತ್ ಜೊತೆ ಗುರುತಿಸಿಕೊಂಡಿದ್ದವರ ವಿರುದ್ದ ಸಲ್ಲಿಸಲಾಗಿದ್ದ ಚಾರ್ಜ್ ಶೀಟ್‌ಗಳು ಮತ್ತು ವಿಚಾರಣೆಯನ್ನು ದಿಲ್ಲಿ ಕೋರ್ಟ್ ರದ್ದು ಮಾಡಿದೆ.ಆದರೆ ಅವತ್ತು ಕೋವಿಡ್ ಹರಡಿದರೆಂದು ತಬ್ಲೀಗಿ ಜಮಾಅತ್ ಅನ್ನು ದೂಷಿಸಿದ್ದ ರಾಜಕೀಯ ನಾಯಕರು, ಪತ್ರಕರ್ತರು ಮತ್ತು ಚಾನೆಲ್ ಮಾಲಕರು ಈಗ ತಣ್ಣಗೆ ಎಲ್ಲಿ ಕೂತಿದ್ದಾರೆ?
2020ರ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ತಬ್ಲೀಗಿ ವಿರುದ್ಧ ದೊಡ್ಡ ದೊಡ್ಡ ಹೆಡ್‌ಲೈನ್‌ಗಳನ್ನು ಮುದ್ರಿಸಿದವರು, ಈಗ ವಿಚಾರಣೆಯೇ ರದ್ದಾದುದನ್ನು ಸಣ್ಣಗೆ ಹೇಳಿ ಮುಗಿಸಿಬಿಡುತ್ತಿದ್ದಾರೆ. ಮಡಿಲ ಮೀಡಿಯಾ ಚಾರಿತ್ರ್ಯವಧೆ ಮೂಲಕ ಯಾರದೇ ಜೀವನವನ್ನು, ಯಾರದೇ ಘನತೆಯನ್ನು ಹೇಗೆ ಹಾಳುಮಾಡಬಲ್ಲದು ಎನ್ನುವುದಕ್ಕೆ ಈ ಪ್ರಕರಣ ಒಂದು ದೊಡ್ಡ ಉದಾಹರಣೆ.
ದಿಲ್ಲಿಯ ನಿಝಾಮುದ್ದೀನ್‌ನಲ್ಲಿರುವ ತಬ್ಲೀಗಿ ಜಮಾಅತ್ ಪ್ರಧಾನ ಕಚೇರಿಯಲ್ಲಿ 2020ರ ಮಾರ್ಚ್ ತಿಂಗಳಲ್ಲಿ ಪ್ರಪಂಚದಾದ್ಯಂತದ 9,000ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದರು. ಅವರಲ್ಲಿ ಹೆಚ್ಚಿನವರು ಭಾರತದವರಾಗಿದ್ದರು. ಆದರೆ ವಿದೇಶಗಳಿಂದ ಬಂದವರೂ ಇದ್ದರು. ಅವರು ತಮ್ಮ ತಮ್ಮ ದೇಶಗಳಿಗೆ ಹಿಂದಿರುಗಬೇಕಿತ್ತು. ಆದರೆ ನಂತರ ಮಾರ್ಚ್ 25, 2020ರಂದು ಕೊರೋನ ಲಾಕ್‌ಡೌನ್ ವಿಧಿಸಲಾಯಿತು. ವಿಮಾನಗಳು ನಿಂತುಹೋದವು. ಮಡಿಲ ಮೀಡಿಯಾ ಇದೇ ಸಮಯ ನೋಡಿಕೊಂಡು ಜನರೊಳಗೆ ದ್ವೇಷದ ಬೆಂಕಿ ಭುಗಿಲೇಳುವಂತೆ ಮಾಡಿತ್ತು ಮತ್ತು ಈ ಆಟದಲ್ಲಿ ಸರಕಾರ, ಪೊಲೀಸರೂ ಭಾಗಿಯಾಗಿದ್ದರು. ಅಲ್ಲದೆ ಸಮಾಜದ ಒಂದು ದೊಡ್ಡ ಭಾಗವೂ ಭಾಗಿಯಾಯಿತು.
ಕೊರೋನದ ಆರಂಭಿಕ ಹಂತದಲ್ಲಿ ತಬ್ಲೀಗಿಯ ಹೆಸರಿನಲ್ಲಿ ದಿಲ್ಲಿಯಲ್ಲಿ ದ್ವೇಷದ ಬಿರುಗಾಳಿ ಎದ್ದಿತ್ತು. ಇವತ್ತು ಅದೇ ದಿಲ್ಲಿಯಲ್ಲಿ, ಅವತ್ತಿನ ಇವರೆಲ್ಲರ ದ್ವೇಷದ ಪ್ರತಿಬಿಂಬದಂತಿದ್ದ 3,000 ಪುಟಗಳ ಚಾರ್ಜ್‌ಶೀಟ್ ಅನ್ನು ಕೋರ್ಟ್ ತಿರಸ್ಕರಿಸಿದೆ.
ದಿಲ್ಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ ಅವರು ತಬ್ಲೀಗಿ ಜಮಾಅತ್‌ನ 70 ಸದಸ್ಯರ ವಿರುದ್ಧದ ಎಫ್‌ಐಆರ್ ಮತ್ತು 3,000 ಪುಟಗಳ ಚಾರ್ಜ್‌ಶೀಟ್ ಅನ್ನು ವಜಾಗೊಳಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು 25ರಿಂದ 30 ಬಾರಿ ನಡೆಸಿರಬಹುದು.
2020ರ ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ದಿಲ್ಲಿ ಪೊಲೀಸರು ತಬ್ಲೀಗಿ ಜಮಾಅತ್‌ಗೆ ಸಂಬಂಧಿಸಿದ 900ಕ್ಕೂ ಹೆಚ್ಚು ಜನರನ್ನು ಬಂಧಿಸಿ ಕ್ವಾರಂಟೈನ್‌ನಲ್ಲಿ ಇರಿಸಿದ್ದರು. 14 ದಿನಗಳ ನಂತರ, ಜಮಾಅತ್‌ನ ಭಾರತೀಯ ಸದಸ್ಯರನ್ನು ಹೋಗಲು ಬಿಡಲಾಯಿತು. ಆದರೆ ವಿದೇಶಿ ಪ್ರಜೆಗಳನ್ನು ಅಲ್ಲೇ ಉಳಿಸಲಾಯಿತು.
ಯಾರನ್ನಾದರೂ 14 ದಿನಗಳಿಗಿಂತ ಹೆಚ್ಚು ಕಾಲ ಕ್ವಾರಂಟೈನ್‌ನಲ್ಲಿ ಹೇಗೆ ಇರಿಸಬಹುದೇ ಎಂಬ ಪ್ರಶ್ನೆಯನ್ನು ಎತ್ತಿದಾಗ ಮತ್ತೊಂದು ಆಟ ಆಡಲಾಯಿತು. ರಾತ್ರೋರಾತ್ರಿ ದಿಲ್ಲಿ ಪೊಲೀಸರು 955 ವಿದೇಶಿ ಪ್ರಜೆಗಳ ವಿರುದ್ಧ 48 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದರು.
ಎರಡು ಆಯ್ಕೆಗಳನ್ನು ನೀಡಲಾಯಿತು. ನೀವು ವಿಚಾರಣೆ ಎದುರಿಸಬಹುದು ಅಥವಾ ನೀವು ದಂಡ ಪಾವತಿಸಿ ತಪ್ಪೊಪ್ಪಿಕೊಂಡು ನಿಮ್ಮ ದೇಶಕ್ಕೆ ಹಿಂದಿರುಗಬಹುದು ಎಂದು ಹೇಳಲಾಯಿತು. ಆ ಸಮಯದಲ್ಲಿ ಇಲ್ಲಿಯೇ ಉಳಿಯುವ ಮೂಲಕ ವಿಚಾರಣೆ ಎದುರಿಸಲು ತಯಾರಾದ 44 ಜನರು ಅಲ್ಲೇ ಇದ್ದರು.
ಉಳಿದ 98 ಜನರು ದಂಡ ಪಾವತಿಸಿದರು. ಆ ದಂಡ ಪ್ರತೀ ವ್ಯಕ್ತಿಗೆ 5,000ರೂ.ಗಳಿಂದ 10,000 ರೂ.ಗಳವರೆಗೆ ಇತ್ತು. ಒಟ್ಟು ಲಕ್ಷಾಂತರ ರೂಪಾಯಿಗಳನ್ನು ದಿಲ್ಲಿ ಸರಕಾರಕ್ಕೆ ದಂಡವಾಗಿ ನೀಡಲಾಯಿತು. ಅವರಿಗೆಲ್ಲ ತಮ್ಮ ಮನೆಗಳಿಗೆ ತಲುಪುವ ಅನಿವಾರ್ಯತೆಯಿತ್ತು.
ಕೊರೋನ ಲಾಕ್‌ಡೌನ್ ಪ್ರಪಂಚದಾದ್ಯಂತ ಎಲ್ಲರ ಮೇಲೆ ಪರಿಣಾಮ ಬೀರಿದ್ದರಿಂದ ಈ ವಿದೇಶಿ ಪ್ರಜೆಗಳಿಗೂ ಅವರ ಮನೆಗಳಲ್ಲಿ ಸಮಸ್ಯೆಗಳಿದ್ದವು. ಇಲ್ಲಿಯೇ ಇದ್ದು ವಿಚಾರಣೆ ಎದುರಿಸಲು ಸಾಧ್ಯವಾಗದ ಪರಿಸ್ಥಿತಿಯಿತ್ತು. ವಿಚಾರಣೆ ಎಷ್ಟು ಸಮಯ ಎಳೆಯಬಹುದು ಎಂಬುದರ ಬಗ್ಗೆ ಅನಿಶ್ಚಿತತೆಯಿತ್ತು.ಅಷ್ಟರ ನಡುವೆಯೂ ಇಲ್ಲಿಯೇ ಇದ್ದು ವಿಚಾರಣೆಗೆ ಒಳಗಾದ 44 ಜನರಿಗೆ ಪೂರ್ಣ ಖುಲಾಸೆ ಸಿಕ್ಕಿದೆ.
ಅವರ ವಿರುದ್ಧದ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವೆಂದು ಗೊತ್ತಿತ್ತು. ದಿಲ್ಲಿ ಸರಕಾರ ಇಲ್ಲಿಯವರೆಗೆ ಅವರನ್ನು ಎಂದಿಗೂ ಪ್ರಶ್ನಿಸಲಿಲ್ಲ. ಆದರೆ ತಬ್ಲೀಗಿ ಸದಸ್ಯರು ತಮ್ಮ ದೇಶಕ್ಕೆ ಹೋಗಲು ವಿಮಾನ ನಿಲ್ದಾಣ ತಲುಪಿದಾಗ, ಕೋವಿಡ್‌ಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಅವರ ಹೆಸರಿನಲ್ಲಿ ಲುಕ್‌ಔಟ್ ನೋಟಿಸ್ ನೀಡಲಾಗಿದೆ ಎಂದು ಅವರಿಗೆ ತಿಳಿಯಿತು.
ಅವರನ್ನು ಬಿಡುಗಡೆ ಮಾಡಿದ ಅದೇ ಆರೋಪಗಳ ಮೇಲೆ ಅವರ ವಿರುದ್ದ ಹೊಸ ಎಫ್‌ಐಆರ್ ಸಲ್ಲಿಸಲಾಯಿತು. 198 ಜನರನ್ನು ಆರೋಪಿಗಳನ್ನಾಗಿ ಮಾಡಿದ 28 ಎಫ್‌ಐಆರ್‌ಗಳನ್ನು ಹಾಕಲಾಯಿತು.
ತಬ್ಲೀಗಿ ಸದಸ್ಯರಿಗೆ ಅವರ ಮನೆಯಲ್ಲಿ ಆಶ್ರಯ ನೀಡಿದವರ ವಿರುದ್ಧ ಮೊಕದ್ದಮೆ ಹೂಡಲಾಯಿತು. ನಂತರ ದಿಲ್ಲಿ ಹೈಕೋರ್ಟ್ ಎಲ್ಲಾ ಅರ್ಜಿಗಳನ್ನು ಒಂದೇ ಕಡೆಗೆ ತಂದು, ಸಾಕೇತ್ ಕೋರ್ಟ್ ಅನ್ನು ವಿಚಾರಣೆ ನಡೆಸುವಂತೆ ಕೇಳಿತು.
ಆ ಸಮಯದಲ್ಲಿ ಸಾಕೇತ್ ಕೋರ್ಟ್ ವಿದೇಶಿ ಪ್ರಜೆಗಳ ವಿರುದ್ಧದ ವಿಚಾರಣೆ ಕೈಬಿಟ್ಟಿತು. ಆದರೆ ವಿದೇಶಿ ಪ್ರಜೆಗಳಿಗೆ ಆಶ್ರಯ ನೀಡಿದ ಭಾರತೀಯ ಪ್ರಜೆಗಳ ವಿರುದ್ಧ, ಅವರು ದಿಲ್ಲಿ ಸರಕಾರದ ಆದೇಶ ಉಲ್ಲಂಘಿಸಿದ್ದಾರೆ ಎಂದು ಪ್ರಕರಣ ದಾಖಲಿಸಲಾಯಿತು.
ಆ ಆದೇಶದಲ್ಲಿ, ಯಾವುದೇ ರೀತಿಯ ಸಭೆ ನಡೆಸುವಂತಿಲ್ಲ ಎಂದಿತ್ತು. ಯಾವುದೇ ಧಾರ್ಮಿಕ ಹಬ್ಬ ಮಾಡಲು, ಜನರನ್ನು ಒಟ್ಟುಗೂಡಿಸಲು ಅವಕಾಶವಿರಲಿಲ್ಲ. ಆದರೆ ಒಂದೇ ಸ್ಥಳದಲ್ಲಿ ಇರಕೂಡದು ಎಂದೇನೂ ಹೇಳಿರಲಿಲ್ಲ.
ವಾಸ್ತವವಾಗಿ, ದಿಲ್ಲಿ ಹೈಕೋರ್ಟ್ ಇತ್ಯರ್ಥಪಡಿಸಿದ 16 ಎಫ್‌ಐಆರ್‌ಗಳಲ್ಲಿ 3 ಎಫ್‌ಐಆರ್‌ಗಳು ಜನರನ್ನು ತಮ್ಮ ಮನೆಗಳಲ್ಲಿ ಇರಿಸಿಕೊಂಡಿದ್ದಕ್ಕಾಗಿ ಭಾರತೀಯ ಪ್ರಜೆಗಳ ವಿರುದ್ಧ ಹಾಕಲಾದ ಎಫ್‌ಐಆರ್‌ಗಳಾಗಿವೆ. ಏಕೆಂದರೆ ತಬ್ಲೀಗಿ ಜಮಾಅತ್‌ನ ನಿಯಮಗಳ ಪ್ರಕಾರ, ಮಹಿಳೆಯರು ಮಸೀದಿಯಲ್ಲಿ ಉಳಿಯಲು ಸಾಧ್ಯವಿಲ್ಲ. ಅನೇಕ ಜನರು ಆ ಮಹಿಳೆಯರಿಗೆ ತಮ್ಮ ಮನೆಗಳಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದರು. ದಿಲ್ಲಿ ಪೊಲೀಸರು ಆ ಮನೆ ಮಾಲಕರ ವಿರುದ್ಧವೂ ಎಫ್‌ಐಆರ್‌ಗಳನ್ನು ದಾಖಲಿಸಿದ್ದರು.
ಎಫ್‌ಐಆರ್ ಮತ್ತು ಚಾರ್ಜ್‌ಶೀಟ್‌ನಲ್ಲಿ ಕೇವಲ ಎರಡು ಆರೋಪಗಳಿದ್ದವು. ಒಂದು, ಅವರಿಗೆ ಉಳಿಯಲು ಸ್ಥಳವನ್ನು ನೀಡಿದ್ದರ ಬಗ್ಗೆ. ಎರಡನೆಯದು, ಅವರಿಗೆ ಉಳಿಯಲು ಸ್ಥಳ ನೀಡಿದ್ದರಿಂದ ಇದು ಕೋವಿಡ್ ಹರಡಲು ಕಾರಣವಾಗಿದೆ ಎಂಬುದು. ಆದರೆ, ಈ ವ್ಯಕ್ತಿಗಳಲ್ಲಿ ಯಾರಿಗಾದರೂ ಯಾವುದೇ ಸಮಯದಲ್ಲಿ ಕೋವಿಡ್ ಇತ್ತೆಂದು ಚಾರ್ಜ್‌ಶೀಟ್‌ನಲ್ಲಿ ಒಂದೇ ಒಂದು ವೈದ್ಯಕೀಯ ವರದಿ ಇರಲಿಲ್ಲ. ಹಾಗಿರುವಾಗ, ಅವರಿಂದ ಕೋವಿಡ್ ಹರಡಬಹುದು ಎಂದು ಹೇಗೆ ಹೇಳಲಾಯಿತು?
ಅವರೆಲ್ಲರೂ ಇಡೀ ಕುಟುಂಬದೊಂದಿಗೆ ಲಾಕ್‌ಡೌನ್‌ನಲ್ಲಿ ವಾಸಿಸುತ್ತಿದ್ದರು. ಎಲ್ಲರೂ ಮನೆಯೊಳಗೆ ಇದ್ದಾಗ, ಯಾರಾದರೂ ಆದೇಶ ಉಲ್ಲಂಘಿಸಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.
ದಿಲ್ಲಿ ಹೈಕೋರ್ಟ್‌ನಲ್ಲಿ ಈ ವಿಷಯವನ್ನು ಎತ್ತಲಾಯಿತು. ಈಗ, ದಿಲ್ಲಿ ಹೈಕೋರ್ಟ್‌ನಲ್ಲಿ ಪರಿಹಾರ ಸಿಕ್ಕಿದೆ. ದಿಲ್ಲಿ ಪೊಲೀಸರ ಎಲ್ಲಾ ಚಾರ್ಜ್‌ಶೀಟ್‌ಗಳನ್ನು ರದ್ದುಗೊಳಿಸಲಾಗಿದೆ.
ಇಷ್ಟು ದೊಡ್ಡ ನಿರ್ಧಾರ ಮತ್ತು ಸುದ್ದಿಯನ್ನು ಪತ್ರಿಕೆಗಳಲ್ಲಿ ಸಾಮಾನ್ಯ ರೀತಿಯಲ್ಲಿ ಮುದ್ರಿಸಲಾಗುತ್ತಿದೆ. ಯಾರೂ ಗಮನಿಸದಂತೆ ಅದನ್ನು ಸದ್ದಿಲ್ಲದೆ ಮುದ್ರಿಸಲಾಗುತ್ತದೆ.
ಆಗ, ತಬ್ಲೀಗಿ ಹೆಸರಿನಲ್ಲಿ ಬಡ ಮುಸ್ಲಿಮರನ್ನು ಹಿಡಿದು ಕೊಲ್ಲಲಾಯಿತು. ಮುಸ್ಲಿಮರು ತರಕಾರಿ ಮಾರಾಟ ಮಾಡುವುದಕ್ಕೂ ಕಲ್ಲು ಹಾಕಲಾಯಿತು. ಅವರ ಗುರುತನ್ನು ಬಹಿರಂಗಪಡಿಸಲು ಒತ್ತಾಯಿಸಲಾಯಿತು. ಆಧಾರ್ ಸಂಖ್ಯೆಗಳನ್ನು ಕೇಳಲಾಯಿತು, ತಳ್ಳುಗಾಡಿಗಳನ್ನು ಕೆಡವಲಾಯಿತು. ಯಾರಿಂದ ಹಣ್ಣುಗಳನ್ನು ಖರೀದಿಸಬೇಕು, ಯಾರಿಂದ ಕ್ಷೌರ ಮಾಡಿಸಿಕೊಳ್ಳಬೇಕು ಮತ್ತು ಯಾರಿಂದ ಮಾಡಬಾರದು ಎಂಬ ಬಗ್ಗೆ ವಾಟ್ಸ್‌ಆ್ಯಪ್ ಸಂದೇಶಗಳು ವೈರಲ್ ಆಗಲು ಪ್ರಾರಂಭಿಸಿದವು. ಸೋಂಕಿನ ನಕಲಿ ವೀಡಿಯೊಗಳನ್ನು ವೈರಲ್ ಮಾಡಲಾಯಿತು.
ಎಟಿ ನ್ಯೂಸ್ ಅಂತಹ 100 ನಕಲಿ ವೀಡಿಯೊಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿತು. ಮೀಡಿಯಾ ಸ್ಕ್ಯಾನರ್ ಎಂಬ ಮತ್ತೊಂದು ಸಂಸ್ಥೆ ಕೂಡ ಫ್ಯಾಕ್ಟ್ ಚೆಕ್ ಮಾಡಿತು.
ಒಂದು ತಿಂಗಳಲ್ಲಿ 69 ವೀಡಿಯೊಗಳನ್ನು ಬಹಿರಂಗಪಡಿಸ ಲಾಗಿದ್ದು, ಅವುಗಳ ಮೂಲಕ ಸುಳ್ಳುಗಳನ್ನು ಹರಡಲಾಗುತ್ತಿತ್ತು. ಈ ವೀಡಿಯೊಗಳಿಂದ ಸೃಷ್ಟಿಯಾದ ವಾತಾವರಣ ಮುಸ್ಲಿಮರ ವಿರುದ್ಧ 28 ದಾಳಿ ಘಟನೆಗಳಿಗೆ ಕಾರಣವಾಯಿತು ಎಂದು ‘ಮೀಡಿಯಾ ಸ್ಕ್ಯಾನರ್’ ಆಗ ವರದಿ ಮಾಡಿತ್ತು.
ಮಿಚಿಗನ್ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಜೋಜಿತ್ ಪಾಲ್ ಮತ್ತು ಅವರ ತಂಡ ಕೋವಿಡ್ ಸಮಯದಲ್ಲಿ ಮಾಧ್ಯಮ ವರದಿಯ ಕುರಿತು ಹಲವಾರು ಅಧ್ಯಯನಗಳನ್ನು ನಡೆಸಿತು.
ಕೋವಿಡ್ ಚರ್ಚೆಯಲ್ಲಿ ಆಸ್ಪತ್ರೆಗಳು ಮತ್ತು ಪರೀಕ್ಷೆಯ ಪ್ರಶ್ನೆಯನ್ನು ಪಕ್ಕಕ್ಕೆ ತಳ್ಳುವ ಮೂಲಕ ಮಾಧ್ಯಮಗಳು ದಾರಿತಪ್ಪಿಸುವ ಸುದ್ದಿಗಳನ್ನು ಹೇಗೆ ಹರಡಿದವು ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸುವ ಮೂಲಕ ನಿಜವಾದ ಪ್ರಶ್ನೆಗಳನ್ನು ಹೇಗೆ ಹಿಂದಕ್ಕೆ ತಳ್ಳಿದವು ಎಂಬುದನ್ನು ಅವರು ತೋರಿಸಿದ್ದರು.
ಮಾರ್ಚ್-ಎಪ್ರಿಲ್ 2020ರಲ್ಲಿ, ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕಾಲ್ನಡಿಗೆಯಲ್ಲಿ ಸಾವಿರಾರು ಕಿಲೋಮೀಟರ್ ನಡೆದು ಹೋಗುತ್ತಿದ್ದರು. ಯಾವುದೇ ಸಹಾಯ ಸಿಗುತ್ತಿರಲಿಲ್ಲ. ಮಕ್ಕಳು ಬಾಯಾರಿಕೆಯಿಂದ ಬಳಲುತ್ತಿದ್ದರು. ಅದು ಈ ಸಾಂಕ್ರಾಮಿಕ ರೋಗದ ಮೊದಲ ಮಾನವ ದುರಂತ. ಇದನ್ನು ತಬ್ಲೀಗಿ ಜಮಾಅತ್ ಹೆಸರಿನಲ್ಲಿ ಮರೆಮಾಡಲಾಯಿತು.
ಮಡಿಲ ಮೀಡಿಯಾ ತಬ್ಲೀಗಿ ಹೆಸರಿನಲ್ಲಿ ದ್ವೇಷ ಹರಡುತ್ತಿತ್ತು. ಆಗಿನ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಪತ್ರಿಕಾಗೋಷ್ಠಿಯಲ್ಲಿ ತಬ್ಲೀಗಿಗೆ ಸಂಬಂಧಿಸಿದ ಸಂಖ್ಯೆಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸಲು ಪ್ರಾರಂಭಿಸಿದರು. ಭಾರತ ಸರಕಾರದ ಆರೋಗ್ಯ ಸಚಿವಾಲಯದ ಆಗಿನ ಜಂಟಿ ಕಾರ್ಯದರ್ಶಿ ಕೂಡ ತಬ್ಲೀಗಿ ಬಗ್ಗೆ ಉಲ್ಲೇಖಿಸಿದ್ದಾರೆ.
ಕೋವಿಡ್ ಸಮಯದಲ್ಲಿ ಜನರು ಸಾಯುತ್ತಿದ್ದಾಗ, ಮಡಿಲ ಮೀಡಿಯಾ ಅದನ್ನು ಲೆಕ್ಕಿಸಲಿಲ್ಲ. ಎಷ್ಟು ಜನರು ಸಾಯುತ್ತಿದ್ದರು? ಈ ಪ್ರಶ್ನೆಯನ್ನು ಎಂದಿಗೂ ಎತ್ತಲಿಲ್ಲ. ಮಡಿಲ ಮೀಡಿಯಾ ಇಂದಿಗೂ ಅದೇ ಕೆಲಸವನ್ನು ಮಾಡುತ್ತಿದೆ.
ಈಗ ದಿಲ್ಲಿ ಹೈಕೋರ್ಟ್ 3,000 ಪುಟಗಳ ಚಾರ್ಜ್‌ಶೀಟ್ ಅನ್ನು ರದ್ದುಗೊಳಿಸಿ ಇಡೀ ಪ್ರಕರಣವನ್ನು ರದ್ದುಪಡಿಸಿರುವಾಗ, ಮಾಧ್ಯಮ ಗಳು ಚರ್ಚೆ ಮಾಡುವುದಿಲ್ಲ. ಅದು ಕ್ಷಮೆಯಾಚಿಸುವುದಿಲ್ಲ. ಪಶ್ಚಾತ್ತಾಪ ಪಡುವುದಿಲ್ಲ. ಜನರಿಗೆ ನೆನಪಿಲ್ಲ ಎಂದು ಅವುಗಳಿಗೆ ತಿಳಿದಿದೆ.
ಹಾಗಾಗಿ, ಮಡಿಲ ಮೀಡಿಯಾದ ಅಪರಾಧಗಳನ್ನು ಚರ್ಚಿಸುತ್ತಲೇ ಇರುವುದು ಮತ್ತು ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಜಾಗರೂಕರಾಗಿರುವುದು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರ ಈಗಿನ ಜವಾಬ್ದಾರಿಯಾಗಿದೆ.