ದಿಲ್ಲಿ | ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕ ಮೃತ್ಯು : ಮೂವರು ಗಂಭೀರ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಸೆ. 17: ದಿಲ್ಲಿಯ ಅಶೋಕವಿಹಾರ ಎಂಬಲ್ಲಿ ಒಳಚರಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ವಿಷಾನಿಲ ಸೇವಿಸಿ ಒಬ್ಬ ಸ್ವಚ್ಛತಾ ಕಾರ್ಮಿಕ ಮೃತಪಟ್ಟಿದ್ದಾರೆ ಮತ್ತು ಮೂವರು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಚರಂಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ, ಉತ್ತರಪ್ರದೇಶ ನಿವಾಸಿ 40 ವರ್ಷದ ಅರವಿಂದ್ ಎಂಬವರನ್ನು ವಿಷಗಾಳಿ ಸುತ್ತುವರಿಯಿತು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದಾರೆ ಎಂಬುದಾಗಿ ಆಸ್ಪತ್ರೆಯಲ್ಲಿ ಘೋಷಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಮಂಗಳವಾರ ಮಧ್ಯಾಹ್ನ ಅಶೋಕವಿಹಾರ ಎರಡನೇ ಹಂತದ ಸಮೀಪ ಚರಂಡಿ ಸ್ವಚ್ಛಗೊಳಿಸುತ್ತಿದ್ದ ನಾಲ್ವರು ಅದರೊಳಗೆ ಬಿದ್ದರು ಎಂಬ ಮಾಹಿತಿ ಪೊಲೀಸ್ ಸಹಾಯವಾಣಿಗೆ ಬಂತು. ಅವರನ್ನು ಮೇಲೆತ್ತಿ ಆಸ್ಪತ್ರೆಗೆ ಸಾಗಿಸಿದಾಗ ಅರವಿಂದ ಮೃತಪಟ್ಟಿದ್ದರು. ಉತ್ತರಪ್ರದೇಶದ ಸೋನು ಮತ್ತು ನಾರಾಯಣ ಹಾಗೂ ಬಿಹಾರದ ನರೇಶ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.