ಕೆಲವರನ್ನು ಜೈಲಿಗೆ ಕಳುಹಿಸಿದರೆ ಸಂದೇಶ ರವಾನೆಯಾಗುತ್ತದೆ : ಕೂಳೆ ಸುಡುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ, ಸೆ. 17: ರೈತರು ಬೆಳೆಗಳ ಕೂಳೆ ಸುಡುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸಿದ ಸುಪ್ರೀಂ ಕೋರ್ಟ್, ಕೆಲವರನ್ನು ಜೈಲಿಗೆ ಕಳುಹಿಸಿದರೆ ‘‘ಸರಿಯಾದ ಸಂದೇಶ ರವಾನೆಯಾಗುತ್ತದೆ’’ ಎಂದು ಪಂಜಾಬ್ ಸರಕಾರಕ್ಕೆ ಹೇಳಿದೆ. ರೈತರಿಂದಾಗಿ ಜನರಿಗೆ ಆಹಾರ ಸಿಗುತ್ತದೆ ಎನ್ನುವುದನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಬಿ. ಆರ್. ಗವಾಯಿ ಒಪ್ಪಿಕೊಂಡರಾದರೂ, ಅದರರ್ಥ ನಾವು ಪರಿಸರ ರಕ್ಷಣೆ ಮಾಡಬಾರದು ಎಂದಲ್ಲ ಎಂದರು.
ರೈತರು ಬೆಳೆಗಳ ಕೂಳೆ ಸುಡುವುದರ ಬಗ್ಗೆ ನ್ಯಾಯಾಲಯದ ಸಲಹೆಗಾರ ಅಪರಾಜಿತ ಸಿಂಗ್ ವಾದ ಮಂಡಿಸಿದ ಬಳಿಕ, ಮುಖ್ಯ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
‘‘ಕೆಲವು ಜನರನ್ನು ಜೈಲಿಗೆ ಹಾಕಿದರೆ ಅದು ಸರಿಯಾದ ಸಂದೇಶವನ್ನು ರವಾನಿಸುತ್ತದೆ. ರೈತರ ವಿರುದ್ಧ ಕೆಲವು ದಂಡನಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ನೀವು ಯಾಕೆ ಪರಿಗಣಿಸುತ್ತಿಲ್ಲ? ಪರಿಸರವನ್ನು ರಕ್ಷಿಸುವ ನಿಜವಾದ ಉದ್ದೇಶ ನಿಮಗಿದ್ದರೆ ನೀವು ಯಾಕೆ ಹಿಂಜರಿಯುತ್ತೀರಿ?’’ ಎಂದು ಮುಖ್ಯ ನ್ಯಾಯಾಧೀಶರು ಪಂಜಾಬ್ ರಾಜ್ಯದ ಪರವಾಗಿ ಹಾಜರಾದ ಹಿರಿಯ ವಕೀಲ ರಾಹುಲ್ ಮೆಹ್ರಾರನ್ನು ಪ್ರಶ್ನಿಸಿದರು.
‘‘ನೀವೊಂದು ನಿರ್ಧಾರ ತೆಗೆದುಕೊಳ್ಳಿ. ಇಲ್ಲದಿದ್ದರೆ ನಾವೇ ಒಂದು ಆದೇಶ ನೀಡುತ್ತೇವೆ’’ ಎಂದು ನ್ಯಾ. ಕೆ. ವಿನೋದ್ ಚಂದ್ರನ್ ಅವರನ್ನೂ ಒಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿತು.
ಪಟಾಕಿ ಸುಡುವುದು ಮತ್ತು ಕೂಳೆ ಸುಡುವುದು ಸೇರಿದಂತೆ ದಿಲ್ಲಿ-ರಾಷ್ಟ್ರ ರಾಜಧಾನಿ ವಲಯದ ವಾಯು ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಮಾತುಗಳನ್ನು ಹೇಳಿತು.
ವಾಯುಮಾಲಿನ್ಯ ತಡೆಗೆ 3 ವಾರಗಳಲ್ಲಿ ಯೋಜನೆ ರೂಪಿಸುವಂತೆ ಕೇಂದ್ರ, ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ
ವಾಯು ಮಾಲಿನ್ಯ ಮಟ್ಟ ಏರದಂತೆ ತಡೆಯುವ ಕ್ರಮಗಳನ್ನು ಮೂರು ವಾರಗಳಲ್ಲಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಬುಧವಾರ ವಾಯು ಗುಣಮಟ್ಟ ನಿರ್ವಹಣ ಆಯೋಗ (ಸಿಎಕ್ಯೂಎಮ್), ಕೇಂದ್ರೀಯ ಮಾಲಿನಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ನಿರ್ದೇಶನ ನೀಡಿದೆ.
ಅದೇ ವೇಳೆ, ಮುಖ್ಯ ನ್ಯಾಯಾಧೀಶ ಬಿ.ಆರ್. ಗವಾಯಿ ಮತ್ತು ನ್ಯಾಯಾಧೀಶ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು, ಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿರುವ ಖಾಲಿ ಹುದ್ದೆಗಳಿಗಾಗಿ ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿತು. ಈ ಹುದ್ದೆಗಳನ್ನು ಮೂರು ತಿಂಗಳಲ್ಲಿ ಭರ್ತಿ ಮಾಡುವಂತೆ ಉತ್ತರಪ್ರದೇಶ, ಹರ್ಯಾಣ, ರಾಜಸ್ಥಾನ ಮತ್ತು ಪಂಜಾಬ್ ರಾಜ್ಯಗಳಿಗೆ ಸರ್ವೋಚ್ಛ ನ್ಯಾಯಾಲಯವು ಸೂಚಿಸಿತು.
ಸುಪ್ರೀಂ ಕೋರ್ಟ್ ಇದೇ ನಿರ್ದೇಶನಗಳನ್ನು ಸಿಎಕ್ಯೂಎಮ್ ಮತ್ತು ಸಿಪಿಸಿಬಿಗೂ ನೀಡಿತು.
ವಾಯುಮಾಲಿನ್ಯ ನಿಯಂತ್ರಣ ಮಂಡಳಿಗಳಲ್ಲಿರುವ ಖಾಲಿ ಹುದ್ದೆಗಳನ್ನು ತುಂಬುವುದಕ್ಕೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿತ್ತು.