ಭಕ್ತರು ದೇವಾಲಯಗಳಿಗೆ ಕಾಣಿಕೆ ನೀಡುವುದು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಲ್ಲ: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ದೇವಸ್ಥಾನಗಳಿಗೆ ಭಕ್ತರು ನೀಡುವ ಕಾಣಿಕೆಗಳನ್ನು ಕಲ್ಯಾಣ ಮಂಟಪಗಳ ನಿರ್ಮಾಣಕ್ಕಾಗಿ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.
ದೇಗುಲಗಳಿಗೆ ಕಾಣಿಕೆ ನೀಡುವ ಭಕ್ತರ ಉದ್ದೇಶವೇ ದೇವಾಲಯದ ಅಭಿವೃದ್ಧಿ ಹಾಗೂ ಧಾರ್ಮಿಕ ಸೌಲಭ್ಯಗಳ ಸುಧಾರಣೆ ಎಂಬುದಾಗಿ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಹಾಗೂ ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠವು, “ಭಕ್ತರು ದೇಗುಲಗಳಿಗೆ ಕಾಣಿಕೆ ನೀಡುವಾಗ ಮದುವೆ ಮಂಟಪ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡಗಳನ್ನು ನಿರ್ಮಿಸಬೇಕು ಎಂಬ ಆಲೋಚನೆಯಿಂದ ನೀಡುವುದಿಲ್ಲ. ಈ ಕಾಣಿಕೆ ಸಂಪೂರ್ಣವಾಗಿ ದೇಗುಲದ ಆವರಣದ ಸೌಕರ್ಯ, ಪೂಜೆ-ಪರಂಪರೆ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಾಗಿರಬೇಕು” ಎಂದು ಅಭಿಪ್ರಾಯಪಟ್ಟಿತು.
ತಮಿಳುನಾಡಿನ ಐದು ಪ್ರಮುಖ ದೇವಸ್ಥಾನಗಳ ನಿಧಿಯನ್ನು ಬಳಸಿ ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಸರ್ಕಾರ ಅನುಮತಿ ನೀಡಿದ್ದುದನ್ನು ಮದ್ರಾಸ್ ಹೈಕೋರ್ಟ್ ಮದುರೈ ಪೀಠವು ಆಗಸ್ಟ್ 19ರಂದು ವಜಾಗೊಳಿಸಿತ್ತು. ಸರ್ಕಾರದ ಈ ನಿರ್ಧಾರವು ಧಾರ್ಮಿಕ ಉದ್ದೇಶಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿತ್ತು.
ಅದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಿಚಾರಣೆ ನಡೆಸಿತು. ಮದುರೈ ಪೀಠದ ಆದೇಶಕ್ಕೆ ತಡೆ ನೀಡಲು ಸಲ್ಲಿಸಿದ್ದ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.
“ದೇವಾಲಯದ ಆವರಣದಲ್ಲಿ ನಿರ್ಮಿಸಲಾದ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತದೆ ಎಂದು ಭಾವಿಸಿದರೆ, ಅಲ್ಲಿ ಅಶ್ಲೀಲ ಹಾಡುಗಳು, ಅಸಭ್ಯ ನೃತ್ಯಗಳು ನಡೆದರೆ, ಅದು ದೇವಾಲಯದ ಧಾರ್ಮಿಕ ಸನ್ಮಾನ್ಯತೆಯನ್ನು ಹಾಳು ಮಾಡುವುದಲ್ಲವೇ?” ಎಂದು ವಿಚಾರಣೆ ವೇಳೆ ನ್ಯಾಯಪೀಠವು ತೀವ್ರವಾಗಿ ಪ್ರಶ್ನಿಸಿತು.
ಹೈಕೋರ್ಟ್‌ನ ಅಭಿಪ್ರಾಯವನ್ನು ಮರುಉಲ್ಲೇಖಿಸಿದ ಸುಪ್ರೀಂ, “ದೇವಾಲಯದ ಕಾಣಿಕೆಗಳನ್ನು ಸರ್ಕಾರದ ನಿಧಿಯಂತೆ ಪರಿಗಣಿಸಲಾಗುವುದಿಲ್ಲ. ಇವು ಶುದ್ಧ ಧಾರ್ಮಿಕ ಉದ್ದೇಶಕ್ಕೆ ಮಾತ್ರ ಮೀಸಲಾಗಿರಬೇಕು. ಕಲ್ಯಾಣ ಮಂಟಪ ನಿರ್ಮಿಸಿ ಬಾಡಿಗೆಗೆ ಕೊಡುವುದು ಭಕ್ತರ ಕಾಣಿಕೆಯ ಧಾರ್ಮಿಕ ಉದ್ದೇಶಕ್ಕೆ ವಿರುದ್ಧ” ಎಂದು ಸ್ಪಷ್ಟಪಡಿಸಿತು.
ಈ ಹಂತದಲ್ಲಿ ಯಾವುದೇ ತಡೆಯಾಜ್ಞೆ ನೀಡುವುದಿಲ್ಲವೆಂದು ತಿಳಿಸಿದ ಸುಪ್ರೀಂ, “ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸರ್ಕಾರದ ಅನುಮತಿ ಸರಿಯೇ ತಪ್ಪೇ ಎಂಬುದರ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ” ಎಂದು ಹೇಳಿ, ವಿಚಾರಣೆಯನ್ನು ನವೆಂಬರ್ 19ಕ್ಕೆ ಮುಂದೂಡಿದೆ.