ಪಂಜಾಬ್ ಭೇಟಿಯಲ್ಲಿ ರಾಹುಲ್ ಗಾಂಧಿ ನೀಡಿದ್ದ ಆಶ್ವಾಸನೆಯಂತೆ ಬೈಸಿಕಲ್ ಪಡೆದ ಅಮೃತಸರದ ಬಾಲಕ

ರಾಹುಲ್ ಗಾಂಧಿ | PC ; PTI
ಚಂಡೀಗಢ: ಇತ್ತೀಚೆಗೆ ಪ್ರವಾಹ ಪೀಡಿತ ಪಂಜಾಬ್ ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದಾಗ, ಅವರೆದುರು ನಿಂತು ತನ್ನ ಹಾಳಾಗಿರುವ ಬೈಸಿಕಲ್ ಕುರಿತು ಅಳುತ್ತಾ ಅಳಲು ತೋಡಿಕೊಂಡಿದ್ದ ಅಮೃತಸರದ ಆರು ವರ್ಷದ ಬಾಲಕ ಅಮೃತ್ ಪಾಲ್ ಸಿಂಗ್ ಹೊಸ ಬೈಸಿಕಲ್ ಅನ್ನು ಸ್ವೀಕರಿಸಿದ್ದಾರೆ.
ಈ ಸಂಬಂಧ ಪಂಜಾಬ್ ಕಾಂಗ್ರೆಸ್ ಘಟಕ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಆ ವಿಡಿಯೊದಲ್ಲಿ ಹೊಸ ಬೈಸಿಕಲ್ ಕೊಡಿಸಿದ್ದಕ್ಕೆ ಆ ಬಾಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಡಿಯೊ ಕರೆ ಮಾಡಿ, ಅವರಿಗೆ ಧನ್ಯವಾದ ತಿಳಿಸುತ್ತಿರುವುದು ಅದರಲ್ಲಿ ಕಂಡು ಬಂದಿದೆ.
ಸೆಪ್ಟೆಂಬರ್ 15ರಂದು ಪಂಜಾಬ್ ನ ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾಗ, ಅವರು ಅಮೃತಸರದಲ್ಲಿರುವ ಘೋನೇವಾಲ್ ಗ್ರಾಮದಲ್ಲಿನ ಬಾಲಕ ಅಮೃತ್ ಪಾಲ್ ಸಿಂಗ್ ನಿವಾಸಕ್ಕೂ ಭೇಟಿ ನೀಡಿದ್ದರು. ಈ ವೇಳೆ, ಬಾಲಕನು ಅಳುತ್ತಾ ತನ್ನ ಹಾನಿಗೀಡಾಗಿರುವ ಬೈಸಿಕಲ್ ಕುರಿತು ರಾಹುಲ್ ಗಾಂಧಿ ಬಳಿ ಅಳಲು ತೋಡಿಕೊಂಡಿದ್ದ. ಆತನನ್ನು ತಬ್ಬಿಕೊಂಡಿದ್ದ ರಾಹುಲ್ ಗಾಂಧಿ, ಆತನನ್ನು ಸಮಾಧಾನಗೊಳಿಸಿ, ಆತನಿಗೆ ಹೊಸ ಬೈಸಿಕಲ್ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಅವರು ಅಮೃತ್ ಪಾಲ್ ಸಿಂಗ್ ಗೆ ಹೊಸ ಬೈಸಿಕಲ್ ಕಳಿಸಿ ಕೊಟ್ಟಿದ್ದಾರೆ.
ರಾಹುಲ್ ಗಾಂಧಿಯವರ ಈ ಔದಾರ್ಯಕ್ಕೆ ಅಮೃತ್ ಪಾಲ್ ಸಿಂಗ್ ಅವರ ತಂದೆ ರವಿದಾಸ್ ಸಿಂಗ್ ಕೂಡಾ ಧನ್ಯವಾದ ಸಲ್ಲಿಸಿದ್ದಾರೆ.