ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ಎದುರಿಸಿ: ಬಿಜೆಪಿಗೆ ಸವಾಲೆಸೆದ ಪ್ರಿಯಾಂಕಾ ಗಾಂಧಿ

photo: PTI
ಹೊಸದಿಲ್ಲಿ: “ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲು ಬಿಜೆಪಿಗೆ ನಾನು ಸವಾಲು ಹಾಕುತ್ತೇನೆ. ಬ್ಯಾಲೆಟ್ ಪೇಪರ್ ನಲ್ಲಿ ಸ್ಪರ್ಧಿಸಿದರೆ ಅವರು ಎಂದಿಗೂ ಗೆಲ್ಲಲಾರರು ಎಂಬುದು ಅವರಿಗೆ ತಿಳಿದಿದೆ,” ಎಂದು ಪ್ರಿಯಾಂಕಾ ಗಾಂಧಿ ಅವರು ಬಿಜೆಪಿಗೆ ಸವಾಲೆಸಿದಿದ್ದಾರೆ.
ರಾಮ್ ಲೀಲಾ ಮೈದಾನದಲ್ಲಿ ರವಿವಾರ ನಡೆದ ಕಾಂಗ್ರೆಸ್ ಪಕ್ಷದ ‘ವೋಟ್ ಚೋರ್, ಗಡ್ಡಿ ಛೋಡ್’ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ವಯನಾಡ್ ಸಂಸದೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ಅನುಮಾನ ಹುಟ್ಟಿಸುತ್ತಿದೆ ಎಂದು ಹೇಳಿದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಜನರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲು ಹೇಗೆ ಪಿತೂರಿ ನಡೆಸಿದರು ಎಂಬುದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿದ, “ದೇಶದ ಸಂಸ್ಥೆಗಳನ್ನು ಸರ್ಕಾರದ ಮುಂದೆ ತಲೆ ಬಾಗಿಸಲಾಗುತ್ತಿದೆ. 10 ಸಾವಿರ ರೂ. ಪಾವತಿ ಪ್ರಕರಣದ ಮೇಲೆ ಚುನಾವಣಾ ಆಯೋಗ ಕಣ್ಣು ಮುಚ್ಚಿರುವುದು ಮತ ಕಳ್ಳತನಕ್ಕೆ ಸಾಕ್ಷಿಯಾಗಿದೆ,” ಎಂದು ಹೇಳಿದರು.





