ಪ್ರಧಾನಿ ನರೇಂದ್ರ ಮೋದಿಯ ಮಣಿಪುರ ಭೇಟಿ ಕೇವಲ ಪ್ರಹಸನ : ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ | PC : apcc.assam.org
ಹೊಸ ದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯ ಮಣಿಪುರ ಭೇಟಿಯನ್ನು ಮಧ್ಯಂತರ ವಿರಾಮ ಎಂದು ಬಣ್ಣಿಸಿರುವ ಕಾಂಗ್ರೆಸ್, ಈ ಭೇಟಿ ಪ್ರಹಸನವಾಗಿದ್ದು, ರಾಜ್ಯಕ್ಕೆ ಮಾಡುತ್ತಿರುವ ಘೋರ ಅವಮಾನವೆಂದು ಟೀಕಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ತಮಗೆ ತಾವೇ ಅದ್ದೂರಿ ಸ್ವಾಗತ ಏರ್ಪಡಿಸಿಕೊಂಡಿದ್ದಾರೆ ಹಾಗೂ ಮಣಿಪುರದ ಜನತೆ ಈಗಲೂ ಅನುಭವಿಸುತ್ತಿರುವ ನೋವಿಗೆ ಇದು ಕ್ರೂರ ತಿವಿಯುವಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
“ನಿಮ್ಮದೇ ಮಾತಿನಲ್ಲಿ ಹೇಳುವುದಾದರೆ, ಎಲ್ಲಿದೆ ರಾಜಧರ್ಮ?” ಎಂದು ಅವರು ಪ್ರಧಾನಿ ಮೋದಿಯನ್ನು ಕಟುವಾಗಿ ಪ್ರಶ್ನಿಸಿದ್ದಾರೆ.
“ನರೇಂದ್ರ ಮೋದಿಯವರೆ ನಿಮ್ಮ ಮೂರು ಗಂಟೆಯ ಮಣಿಪುರದಲ್ಲಿನ ಮಧ್ಯಂತರ ವಿರಾಮ ಸಹಾನುಭೂತಿಯಲ್ಲ; ಅದೊಂದು ಪ್ರಹಸನ, ಔಪಚಾರಿಕತೆ ಹಾಗೂ ಮನನೊಂದ ರಾಜ್ಯದ ಜನತೆಗೆ ಮಾಡುತ್ತಿರುವ ಘೋರ ಅವಮಾನವಾಗಿದೆ. ಇಂಫಾಲ ಹಾಗೂ ಚೂರಚಂದ್ ಪುರ್ ನಲ್ಲಿ ನೀವು ಆಯೋಜಿಸಿರುವ ರೋಡ್ ಶೋ ಪರಿಹಾರ ಶಿಬಿರಗಳಲ್ಲಿನ ಜನರ ಆಕ್ರಂದನಗಳನ್ನು ಕೇಳುವುದರಿಂದ ತಪ್ಪಿಸಿಕೊಳ್ಳುವ ಹೇಡಿತನವಾಗಿದೆ” ಎಂದು ಹೇಳಿದ್ದಾರೆ.
“864 ದಿನಗಳ ಹಿಂಸಾಚಾರ: 300 ಜನರ ಮೃತ್ಯು, 67,000 ಮಂದಿ ನಿರ್ವಸತಿಗರು, 1,500ಕ್ಕೂ ಹೆಚ್ಚು ಮಂದಿ ಗಾಯಾಳುಗಳು. ಅಂದಿನಿಂದ ನೀವು 46 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದೀರಿ. ಆದರೆ, ನಿಮ್ಮದೇ ಪ್ರಜೆಗಳಿಗೆ ಒಂದೆರಡು ಸಹಾನುಭೂತಿಯ ಮಾತುಗಳನ್ನಾಡಲು ಒಂದೂ ಭೇಟಿ ನೀಡಿರಲಿಲ್ಲ” ಎಂದು ಅವರು ವ್ಯಂಗ್ಯವಾಡಿದ್ದಾರೆ.