ಮುಸ್ಲಿಂ ಬಾಲಕಿ ಆತ್ಮಹತ್ಯೆ: ಮತ್ತೆ ಮುನ್ನೆಲೆಗೆ ಬಂದ ಗುಜರಾತ್ ನ ವಿವಾದಾತ್ಮಕ “ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆ” ಕುರಿತ ಚರ್ಚೆ

PC : thewire.in
ಹೊಸದಿಲ್ಲಿ: ಆಗಸ್ಟ್ 9ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಮುಸ್ಲಿಂ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಬಳಿಕ ಗುಜರಾತ್ ನ ವಿವಾದಾತ್ಮಕ ‘ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆ' ಕುರಿತು ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಆಗಸ್ಟ್ 9ರಂದು ರಿಫಾತ್ ಎಂಬುವವರ ಸಹೋದರಿ ಸಾನಿಯಾ ಅನ್ಸಾರಿ(15) ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ಮೊದಲು ಆಕೆ ಬರೆದಿಟ್ಟ ಡೆತ್ ನೋಟ್ ಗುಜರಾತ್ ನ ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆ ಕುರಿತು ಚರ್ಚೆಗೆ ಕಾರಣವಾಗಿದೆ.
ಅನ್ಸಾರಿ ಕುಟುಂಬವು ತಮ್ಮದೇ ನೆರೆಹೊರೆಯವರಿಂದ ಮನೆಯೊಂದನ್ನು ಖರೀದಿಸಿದ್ದರು. ಆದರೆ ಆ ಬಳಿಕ ಅವರು ʼಗುಜರಾತ್ ನ ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆಯಡಿ ತಿಂಗಳುಗಳ ಕಾಲ ಕಿರುಕುಳ, ಹಿಂಸೆ ಮತ್ತು ಬೆದರಿಕೆ ಅನುಭವಿಸಿದರು.
ಈ ಕಾಯ್ದೆಯ ಕಾರಣಕ್ಕೆ ಮುಸ್ಲಿಂ ಖರೀದಿದಾರರು ಹಾಗೂ ಹಿಂದೂ ಮಾರಾಟಗಾರರ ನಡುವೆ ಜಟಾಪಟಿ ನಡೆದಿದೆ. ಈ ಜಟಾಪಟಿ ಕಳೆದ ತಿಂಗಳು ದುರಂತವಾಗಿ ಅಂತ್ಯಗೊಂಡಿದೆ. ಮುಸ್ಲಿಂ ಖರೀದಿದಾರರ ಅಪ್ರಾಪ್ತ ಪುತ್ರಿ ಮಾರಾಟಗಾರರ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
40 ವರ್ಷಗಳಷ್ಟು ಹಳೆಯದಾದ ಕಾನೂನು ಮತ್ತು ಹಾಗೂ ಸ್ಥಳೀಯ ಪೊಲೀಸರ ನಿಷ್ಕ್ರಿಯತೆಯನ್ನು ಮುಸ್ಲಿಂ ಖರೀದಿದಾರರ ಕುಟುಂಬ ಆರೋಪಿಸಿದೆ.
ದಾಖಲೆಗಳು ಮತ್ತು ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆ ಕಳೆದ ಒಂದು ವರ್ಷದಿಂದ ನಮ್ಮ ಪಾಲಿಗೆ ಬದುಕು ನರಕ ಯಾತನೆಯಾಗಿ ಮಾರ್ಪಟ್ಟಿದೆ. ನಾವು 15.5 ಲಕ್ಷ ರೂ. ಪಾವತಿಸಿ ಮನೆಯೊಂದನ್ನು ಖರೀದಿಸಿದ್ದೆವು.ನಾವು ಡಿಸೆಂಬರ್ 2024ರ ವೇಳೆಗಾಗಲೇ ಎಲ್ಲ ಬಾಕಿ ಪಾವತಿಗಳನ್ನು ತೀರಿಸಿದ್ದೆವು. ಆದರೆ, ಮನೆಯು ಅಧಿಕೃತ ಹಸ್ತಾಂತರವಾಗುವುದಕ್ಕೂ ಮುನ್ನ, ಹಿಂದೂ ಮಾರಾಟಗಾರರ ಪತಿ ಮೃತಪಟ್ಟರು.
ಶೋಕದ ಅವಧಿ ಮುಗಿದ ನಂತರ ಅವರ ಪುತ್ರ ಮನೆಗೆ ಸ್ಥಳಾಂತರಗೊಂಡರು. ಇದರಿಂದ ಅವರವರ ನಡುವೆಯೇ ಜಗಳ ನಡೆಯತೊಡಗಿತು. ಸದ್ಯ ನಾವು ವಾಸಿಸುತ್ತಿರುವ ಮನೆಯ ಎದುರಿಗಿರುವ ಮನೆಯು ನಮ್ಮ ಪಾಲಿಗೆ ನೋವು, ಬೇಗುದಿ ಹಾಗೂ ಸ್ಥಳೀಯ ಹಿಂದುತ್ವ ಗುಂಪುಗಳಿಂದ ಬಯಸಿರದ ದ್ವೇಷದ ಕೇಂದ್ರ ಬಿಂದುವಾಗಿ ರೂಪಾಂತರಗೊಂಡಿದೆ ಎಂದು ಅನ್ಸಾರಿ ಕುಟುಂಬ ಅಳಲು ತೋಡಿಕೊಂಡಿದೆ.
"ಅವರು ಸಾನಿಯಾಳ ಕೂದಲನ್ನು ಎಳೆದುಕೊಂಡು ಹೋದರು, ಥಳಿಸಿದರು. ಯಾರಾದರೂ ನಮಗೆ ಸಹಾಯ ಮಾಡುತ್ತಾರಾಎಂದು ಕಾಯುತ್ತಲೇ ಅವಳು ಆತ್ಮಹತ್ಯೆ ಮಾಡಿಕೊಂಡಳು", ಎಂದು ರಿಫತ್ ಹೇಳಿದರು.
ಆಗಸ್ಟ್ 7ರಂದು ಸ್ಥಳೀಯ ಬಲಪಂಥೀಯ ವ್ಯಕ್ತಿಗಳ ಗುಂಪು ಅವರ ಮನೆಗೆ ನುಗ್ಗಿ ದಾಳಿ ನಡೆಸಿದರು. ಎರಡು ದಿನಗಳ ನಂತರ ಸಾನಿಯಾ ನಾಲ್ವರು ವ್ಯಕ್ತಿಗಳ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಅವರು ಮನೆ ನೀಡದೆ ತಮ್ಮ ಕುಟುಂಬದ ಹಣವನ್ನು ತೆಗೆದುಕೊಂಡಿದ್ದಾರೆ ಮತ್ತು ತಿಂಗಳುಗಟ್ಟಲೆ ಹಿಂಸಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾರಾಟಗಾರರಾದ ಸುಮನ್ ಸೋನಾವಾಡೆಯನ್ನು ಮನೆಯ ಹಸ್ತಾಂತರದ ಕುರಿತು ಪ್ರಶ್ನಿಸಿದಾಗಲೆಲ್ಲ, ಅವರು ಸಂಪೂರ್ಣ ಮೊತ್ತವನ್ನು ಸ್ವೀಕರಿಸಿದ್ದರೂ, ಅನ್ಸಾರಿ ಕುಟುಂಬಕ್ಕೆ ಸಬೂಬುಗಳನ್ನು ಹೇಳತೊಡಗಿದ್ದಾರೆ. ಅಲ್ಲದೆ, ಸೋನಾವಾಡೆಯ ಪುತ್ರ ದಿನೇಶ್ ನಿಮ್ಮ ಒಪ್ಪಂದವನ್ನು ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆಯಡಿ ಅನೂರ್ಜಿತಗೊಳಿಸುತ್ತೇನೆ ಎಂದು ಅವರಿಗೆ ಬೆದರಿಕೆ ಒಡ್ಡಲು ಪ್ರಾರಂಭಿಸಿದ್ದಾನೆ.
ಈ ಎಲ್ಲ ವ್ಯಾಜ್ಯಕ್ಕೆ ಕೇಂದ್ರಬಿಂದುವಾಗಿರುವುದು 1991ರಲ್ಲಿ ಗುಜರಾತ್ ನಲ್ಲಿ ಜಾರಿಗೆ ಬಂದಿರುವ ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆ. ಈ ಕಾಯ್ದೆಯಡಿ, ಕೋಮು ಸೂಕ್ಷ್ಮತೆಯ ಪ್ರದೇಶಗಳಲ್ಲಿ ಹತಾಶೆಯಿಂದ ಆಸ್ತಿ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಈ ಕಾಯ್ದೆಯ ಅನುಸಾರ, ಪರಸ್ಪರ ವಿರುದ್ಧ ಸಮುದಾಯಗಳ ನಡುವೆ ಆಸ್ತಿ ಮಾರಾಟ ನಡೆಯಬೇಕಿದ್ದರೆ, ಜಿಲ್ಲಾಧಿಕಾರಿಗಳ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇದೀಗ ಈ ಕಾಯ್ದೆಯು ಮುಸ್ಲಿಂ ಕುಟುಂಬಗಳು ಹಿಂದೂ ಬಾಹುಳ್ಯದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವುದನ್ನು ತಡೆಯುವ ಸಾಧನವಾಗಿ ಬಳಕೆಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.
ಸಾನಿಯಾ ಪ್ರಕರಣದಲ್ಲಿ ಈಗಾಗಲೇ ಅವರ ನೆರೆಯವರು ಈ ಕಾಯ್ದೆಯಡಿ ಕ್ರಮ ಕೈಗೊಳ್ಳುವುದಾಗಿ ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದಾರೆ. ಆ ಮೂಲಕ ಒಪ್ಪಂದವನ್ನು ಅನೂರ್ಜಿತಗೊಳಿಸುವುದಾಗಿ ಹೆದರಿಸಿದ್ದಾರೆ. ಇದರಿಂದಾಗಿ ನಾವು ಪೊಲೀಸ್ ಕ್ರಮಕ್ಕೆ ಒತ್ತಾಯ ಹೇರಲು ಹಿಂಜರಿಯುವಂತಾಯಿತು ಎಂದು ಅನ್ಸಾರಿ ಕುಟುಂಬ ಹೇಳುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ಕಲೀಮ್ ಸಿದ್ದಿಕಿ, “ಈ ಕಾಯ್ದೆಯು ದುರ್ಬಲರನ್ನು ರಕ್ಷಿಸುವುದಕ್ಕಿಂತಲೂ, ಅವರು ಆಸ್ತಿ ಖರೀದಿಸದಂತೆ ಮಾಡುವ ಸಾಧನವಾಗಿ ಬದಲಾಗಿದೆ.“ಮುಸ್ಲಿಮರೇ ನಿಮ್ಮ ಬಳಿ ಹಣವಿರಬಹುದು; ಆದರೆ, ನೀವೆಲ್ಲಿ ವಾಸಿಸಬೇಕು ಎಂದು ನೀವು ಆಯ್ಕೆ ಮಾಡಿಕೊಳ್ಳುವಂತಿಲ್ಲ” ಎಂದು ಈ ಕಾಯ್ದೆ ಹೇಳುತ್ತಿದೆ ಎಂದು ಆರೋಪಿಸುತ್ತಾರೆ.
ಗುಜರಾತ್ ನ ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆಯು ಮುಸ್ಲಿಮರನ್ನು ಕೆಲವು ನಿರ್ದಿಷ್ಟ ಸ್ಥಳಗಳಿಗೆ ಸೀಮಿತಗೊಳಿಸುತ್ತದೆ ಹಾಗೂ ಅವರನ್ನು ವ್ಯವಸ್ಥಿತವಾಗಿ ಮೂಲೆಗುಂಪು ಮಾಡುತ್ತದೆ ಎಂದು ಗುಜರಾತ್ ನ ಅಲ್ಪಸಂಖ್ಯಾತ ಸಮನ್ವಯ ಸಮಿತಿ (ಎಂಸಿಸಿ) ಆರೋಪಿಸಿದೆ.
“ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಅವರಿಗೆ ಮುಸ್ಲಿಮರನ್ನು ಹಿಂದೂಗಳಿಂದ ದೂರ ಇಡುವುದು ಬೇಕಿತ್ತು. ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆಯು ಅವರಿಗೆ ಬಹು ದೊಡ್ಡ ಅಸ್ತ್ರವಾಯಿತು. ಅಹಮದಾಬಾದ್ ನಲ್ಲಿ ನಡೆದ ಘಟನೆಯು ಈ ಕಾಯ್ದೆಯ ಒಂದು ಕರಾಳ ಚಿತ್ರಣವಾಗಿದೆ” ಎಂದು ಅಲ್ಪಸಂಖ್ಯಾತರ ಸಮನ್ವಯ ಸಮಿತಿಯ ಸಂಚಾಲಕ ಮಜಾಹಿದ್ ನಫೀಸ್ ವಿಷಾದ ವ್ಯಕ್ತಪಡಿಸಿದ್ದಾರೆ.
ಅನ್ಸಾರಿ ಕುಟುಂಬ ಈಗಲೂ ತಾವು ಖರೀದಿಸಲು ಬಯಸಿದ್ದ ಮನೆಯ ಎದುರಿನ ಮನೆಯಲ್ಲೇ ವಾಸಿಸುತ್ತಿದೆ. ಈ ಹತ್ತು ತಿಂಗಳ ಅವಧಿಯಲ್ಲಿ ಅನ್ಸಾರಿ ಕುಟುಂಬವು 15.5 ಲಕ್ಷ ರೂ., ಅವರ ಘನತೆ, ಕಾನೂನಿನ ಬಗ್ಗೆ ಇದ್ದ ನಂಬಿಕೆ ಹಾಗೂ ತಮ್ಮ ಪುತ್ರಿ ಸಾನಿಯಾಳನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಗುಜರಾತ್ ನ ಪ್ರಕ್ಷುಬ್ಧ ಪ್ರದೇಶಗಳ ಕಾಯ್ದೆ ವ್ಯಾಪಕ ಸಾರ್ವತ್ರಿಕ ಚರ್ಚೆಗೆ ಗುರಿಯಾಗಿದೆ.
ಸೌಜನ್ಯ: thewire.in