ಮಣಿಪುರ | 11 ಬಂಡುಕೋರರ ಬಂಧನ : ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ವಶ

ಸಾಂದರ್ಭಿಕ ಚಿತ್ರ
ಇಂಫಾಲ, ಸೆ. 17: ಮಣಿಪುರದಲ್ಲಿ ಭದ್ರತಾ ಪಡೆಗಳು ಮಂಗಳವಾರ ಐದು ಸ್ಥಳಗಳಲ್ಲಿ ದಾಳಿ ನಡೆಸಿ ನಿಷೇಧಿತ ಭೂಗತ ಗುಂಪುಗಳ 11 ಸದಸ್ಯರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಅಮೆರಿಕ ನಿರ್ಮಿತ ಎ16 ರೈಫಲ್ ಸೇರಿದಂತೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಕಾಂಗ್ಲೇಪಾಕ್ ಕಮ್ಯುನಿಸ್ಟ್ ಪಾರ್ಟಿ (ಪೀಪಲ್ಸ್ ವಾರ್ ಗ್ರೂಪ್)ಯ ಆರು ಸದಸ್ಯರು, ಸೋಶಿಯಲಿಸ್ಟ್ ರೆವಲೂಶನರಿ ಪಾರ್ಟಿ ಕಾಂಗ್ಲೇಪಾಕ್ನ ಒಬ್ಬ ಸದಸ್ಯ, ಯುನೈಟೆಡ್ ಲಿಬರೇಶನ್ ಫ್ರಂಟ್ (ಕೊಯಿರೆಂಗ್ ಬಣ)ನ ಇಬ್ಬರು ಸದಸ್ಯರು ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿಯ ಇಬ್ಬರು ಸದಸ್ಯರು ಸೇರಿದ್ದಾರೆ.
‘‘ಒಂದು ಅಮೆರಿಕ ನಿರ್ಮಿತ ಎಮ್16 ರೈಫಲ್, ಐದು ಇಂಡಿಯನ್ ಸ್ಮಾಲ್ ಆರ್ಮ್ಸ್ ಸಿಸ್ಟಮ್ ರೈಫಲ್ಗಳು, ಮೂರು ಸೆಲ್ಫ್ಲೋಡಿಂಗ್ ರೈಫಲ್ಸ್ (ಎಸ್ಎಲ್ಆರ್)ಗಳು, ಎರಡು 303 ರೈಫಲ್ಗಳು ಮತ್ತು 26 ವಿವಿಧ ಮ್ಯಾಗಝಿನ್ಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘‘ಅವರು ಸುಲಿಗೆಯಲ್ಲಿ ತೊಡಗಿದ್ದರು ಮತ್ತು ತಮಗೆ ಬೇಕಾದವರಿಗೆ ಸಾಲಗಳನ್ನು ನೀಡುವಂತೆ ಬ್ಯಾಂಕ್ ಅಧಿಕಾರಿಗಳನ್ನು ಬೆದರಿಸುತ್ತಿದ್ದರು. ಅವರಿಂದ ಆರು ಲೆಟರ್ಹೆಡ್ಗಳು, ಬ್ಯಾಂಕ್ ಮ್ಯಾನೇಜರ್ಗಳ ಹೆಸರುಗಳನ್ನು ಒಳಗೊಂಡ ಒಂಭತ್ತು ಲಕೋಟೆಗಳು, ಎರಡು ಮೊಹರುಗಳು, ಮೂರು ಆಧಾರ್ ಕಾರ್ಡ್ಗಳು, ಒಂದು ಎಟಿಎಮ್ ಕಾರ್ಡ್, ಮೂರು ಏರ್ಟೆಲ್ ಸಿಮ್ ಕಾರ್ಡ್ಗಳು, ಒಂದು ವಾಹನ ನೋಂದಣಿ ಪ್ರಮಾಣಪತ್ರ ಮತ್ತು ಒಂದು ಮಹೀಂದ್ರ ಬೊಲೇರೊ ವಾಹನವನ್ನೂ ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ’’ ಎಂದು ಅವರು ಹೇಳಿದರು.