ಮಾಲೇಗಾಂವ್ ಸ್ಫೋಟ ಪ್ರಕರಣ | ಮೃತರ ಕುಟುಂಬದವರನ್ನು ಸಾಕ್ಷಿಗಳನ್ನಾಗಿ ಮಾಡಲಾಗಿತ್ತೇ?: ವಿವರ ಕೇಳಿದ ಬಾಂಬೆ ಹೈಕೋರ್ಟ್

ಬಾಂಬೆ ಹೈಕೋರ್ಟ್
ಮುಂಬೈ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿರುವ ತೀರ್ಪಿನ ವಿರುದ್ಧ ಸಂತ್ರಸ್ತರ ಕುಟುಂಬದವರು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
“ಸಂತ್ರಸ್ತರ ಕುಟುಂಬದವರನ್ನು ಸಾಕ್ಷಿಗಳನ್ನಾಗಿ ಮಾಡಲಾಗಿತ್ತೇ? ಅವರನ್ನು ವಿಚಾರಣೆಗೆ ಒಳಪಡಿಸಿದ್ದರ ವಿವರಗಳನ್ನು ಸಲ್ಲಿಸಬೇಕು” ಎಂದು ನ್ಯಾಯಪೀಠವು ಮಂಗಳವಾರ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ ಹಾಗೂ ನ್ಯಾಯಮೂರ್ತಿ ಗೌತಮ ಅಂಖಡ ಅವರಿದ್ದ ಪೀಠವು ಈ ವಿಚಾರಣೆ ನಡೆಸಿತು. ಸ್ಫೋಟದಲ್ಲಿ ಮೃತಪಟ್ಟ ಆರು ಜನರ ಕುಟುಂಬದ ಸದಸ್ಯರು ಜಮಿಯಾತ್ ಉಲೇಮಾ ಮಹಾರಾಷ್ಟ್ರ (ಅರ್ಷದ್ ಮದನಿ) ಕಾನೂನು ನೆರವು ಸಮಿತಿ ಮೂಲಕ ಮೇಲ್ಮನವಿ ಸಲ್ಲಿಸಿದ್ದರು.
ನಿಸಾರ್ ಅಹ್ಮದ್ ಎಂಬವರ ಪುತ್ರ ಸ್ಫೋಟದಲ್ಲಿ ಮೃತಪಟ್ಟಿದ್ದರೂ, ವಿಚಾರಣೆ ವೇಳೆ ಅವರನ್ನು ಸಾಕ್ಷಿಯನ್ನಾಗಿ ಮಾಡಲಾಗಿಲ್ಲ ಎಂದು ವಕೀಲರು ಹೈಕೋರ್ಟ್ ಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, “ಮೃತರ ಕುಟುಂಬದವರು ಸಾಕ್ಷಿಗಳಾಗಬೇಕಾಗಿತ್ತು. ಅವರನ್ನು ಸಾಕ್ಷಿಗಳನ್ನಾಗಿ ಮಾಡಲಾಗಿತ್ತೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಮೇಲ್ಮನವಿದಾರರು ಸ್ಪಷ್ಟನೆ ನೀಡಬೇಕು” ಎಂದು ಸೂಚಿಸಿತು.
2008ರ ಸೆಪ್ಟೆಂಬರ್ 29ರಂದು ಮಾಲೇಗಾಂವ್ ನ ಮಸೀದಿಯ ಬಳಿ ನಿಲ್ಲಿಸಿದ್ದ ಬೈಕ್ ನಲ್ಲಿ ಅಳವಡಿಸಿದ್ದ ಸ್ಫೋಟಕ ಸ್ಫೋಟಗೊಂಡಿತ್ತು. ಈ ದಾಳಿಯಲ್ಲಿ ಆರು ಮಂದಿ ಮೃತಪಟ್ಟರೆ, 101 ಮಂದಿ ಗಾಯಗೊಂಡಿದ್ದರು.
ದೀರ್ಘ ವಿಚಾರಣೆಯ ಬಳಿಕ, ಎನ್ಐಎ ವಿಶೇಷ ನ್ಯಾಯಾಲಯವು ಜುಲೈ 31ರಂದು, ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ ಸೇರಿ ಏಳು ಆರೋಪಿಗಳನ್ನು ದೋಷಮುಕ್ತಗೊಳಿಸಿತ್ತು.
ತಪ್ಪಾದ ತನಿಖೆ ಅಥವಾ ತನಿಖೆಯಲ್ಲಿನ ನ್ಯೂನತೆಗಳನ್ನು ಆಧಾರ ಮಾಡಿಕೊಂಡು ಆರೋಪಿಗಳನ್ನು ಖುಲಾಸೆಗೊಳಿಸಲು ಸಾಧ್ಯವಿಲ್ಲ ಎಂದು ಮೇಲ್ಮನವಿದಾರರ ವಾದ ಮಂಡಿಸಿದರು.
ಈ ಸ್ಫೋಟ ಪೂರ್ವನಿಯೋಜಿತ ಸಂಚು ಆಗಿದ್ದು, ನೇರ ಸಾಕ್ಷ್ಯಗಳಿರಲು ಸಾಧ್ಯವಿಲ್ಲ. ವಿಚಾರಣಾ ನ್ಯಾಯಾಲಯವು ಪ್ರಾಸಿಕ್ಯೂಷನ್ ನ ನ್ಯೂನತೆಗಳನ್ನು ಬಳಸಿಕೊಂಡು ಆರೋಪಿಗಳಿಗೆ ಲಾಭವಾಗುವಂತೆ ಮಾಡಿದೆ. ಎನ್ಐಎ ತನಿಖೆ ಕೈಗೆತ್ತಿಕೊಂಡ ಬಳಿಕ ಆರೋಪಿಗಳ ವಿರುದ್ಧದ ಆಪಾದನೆಗಳನ್ನು ದುರ್ಬಲಗೊಳಿಸಲಾಯಿತು ಎಂದು ಅವರು ಉಲ್ಲೇಖಿಸಿದರು.
ಹೈಕೋರ್ಟ್ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.