ಮಹಾರಾಷ್ಟ್ರ | ಭದ್ರತಾ ಪಡೆಗಳಿಂದ ಇಬ್ಬರು ಶಂಕಿತ ಮಹಿಳಾ ನಕ್ಸಲೀಯರ ಹತ್ಯೆ

ಸಾಂದರ್ಭಿಕ ಚಿತ್ರ
ಗಡ್ಚಿರೋಳಿ, ಸೆ. 17: ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆ ಹಾಗೂ ಶಂಕಿತ ನಕ್ಸಲೀಯರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಕನಿಷ್ಠ ಇಬ್ಬರು ಶಂಕಿತ ಮಹಿಳಾ ನಕ್ಸಲೀಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾವೋವಾದಿಗಳ ಗಟ್ಟಾ ಎಲ್ಒಎಸ್ (ಲೋಕಲ್ ಆರ್ಗನೈಸೇಷನ್ ಸ್ಕ್ವಾಡ್)ನ ಕೆಲವು ಸದಸ್ಯರು ಎಟಪಲ್ಲಿ ತಾಲೂಕಿನ ಮೊಡಾಸ್ಕೆ ಗ್ರಾಮದ ಸಮೀಪದ ಕಾಡಿನಲ್ಲಿ ಶಿಬಿರ ಹೂಡಿದ್ದಾರೆ ಎಂದು ಪೊಲೀಸರು ಬುಧವಾರ ಬೆಳಗ್ಗೆ ಮಾಹಿತಿ ಸ್ವೀಕರಿಸಿದ ಬಳಿಕ ಈ ಎನ್ಕೌಂಟರ್ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾಹಿತಿ ಸ್ವೀಕರಿಸಿದ ಕೂಡಲೇ ಗಡ್ಚಿರೋಳಿ ಪೊಲೀಸ್ನ ವಿಶೇಷ ನಕ್ಸಲ್ ನಿಗ್ರಹ ಕಮಾಂಡೊ ಸ್ಕ್ವಾಡ್ ಸಿ-60ಯ 5 ಯೂನಿಟ್ಗಳೊಂದಿಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಶಂಕಿತ ನಕ್ಸಲೀಯರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಇದಕ್ಕೆ ಭದ್ರತಾ ಪಡೆಗಳು ತಕ್ಕ ಪ್ರತ್ಯುತ್ತರ ನೀಡಿತು. ಇದರಿಂದ ಗುಂಡಿನ ಕಾಳಗ ನಡೆಯಿತು.
ಗುಂಡಿನ ಕಾಳಗ ನಿಂತ ಬಳಿಕ ಸ್ಥಳದಲ್ಲಿ ಇಬ್ಬರು ಶಂಕಿತ ಮಹಿಳಾ ನಕ್ಸಲೀಯರ ಮೃತದೇಹಗಳು ಪತ್ತೆಯಾಗಿವೆ. ಅಲ್ಲದೆ, ಎಕೆ 47 ರೈಫಲ್, ಅತ್ಯಾಧುನಿಕ ಪಿಸ್ತೂಲ್, ಸಜೀವ ಸ್ಫೋಟಕ, ದೊಡ್ಡ ಪ್ರಮಾಣದ ನಕ್ಸಲ್ ಸಾಹಿತ್ಯ ಹಾಗೂ ಇತರ ವಸ್ತುಗಳು ಪತ್ತೆಯಾಗಿವೆ.