ವಿವಾದಕ್ಕೆ ಕಾರಣವಾದ ‘ಲೋಕಾಹ್’ ಚಿತ್ರದ ಸಂಭಾಷಣೆ: ಕ್ಷಮೆ ಕೋರಿದ ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್ | PC: X
ತಿರುವನಂತಪುರಂ: ಇತ್ತೀಚೆಗೆ ಬಿಡುಗಡೆಗೊಂಡ ಡಾಮ್ನಿಕ್ ಅರುಣ್ ನಿರ್ದೇಶಿಸಿರುವ ಮಲೆಯಾಳಂ ಚಲನಚಿತ್ರ ‘ಲೋಕಾಹ್’ ಚಿತ್ರದ ಸಂಭಾಷಣೆಯೊಂದು ವಿವಾದಕ್ಕೆ ಕಾರಣವಾಗಿದ್ದು, ಈ ಸಂಭಾಷಣೆಯಿಂದ ಕರ್ನಾಟಕದ ಜನತೆಯ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದರ ಬೆನ್ನಿಗೇ, ಚಲನಚಿತ್ರದ ನಟ ಹಾಗೂ ನಿರ್ಮಾಪಕ ದುಲ್ಕರ್ ಸಲ್ಮಾನ್ ಕ್ಷಮೆ ಕೋರಿದ್ದಾರೆ.
ಸಂಭಾಷಣೆಯನ್ನು ಕಣ್ತಪ್ಪಿನಿಂದ ಅಳವಡಿಸಲಾಗಿತ್ತೇ ಹೊರತು ಯಾರಿಗೂ ಘಾಸಿಯನ್ನುಂಟು ಮಾಡುವ ಉದ್ದೇಶದಿಂದಲ್ಲ. ಈ ಸಂಭಾಷಣೆಯನ್ನು ಎಷ್ಟು ಶೀಘ್ರ ಸಾಧ್ಯವೊ ಅಷ್ಟು ಶೀಘ್ರ ತೆಗೆದು ಹಾಕಲಾಗುವುದು ಅಥವಾ ಸರಿಪಡಿಸಲಾಗುವುದು ಚಿತ್ರದ ನಿರ್ಮಾಪಕರು ಭರವಸೆ ನೀಡಿದ್ದಾರೆ.
ಈ ವಿವಾದದ ಹೊರತಾಗಿಯೂ ಆಗಸ್ಟ್ 28ರಂದು ದೇಶಾದ್ಯಂತ ತೆರೆಗೆ ಬಂದಿರುವ ‘ಲೋಕಾಹ್: ಚಾಪ್ಟರ್ 1 ಚಂದ್ರ’ ಚಲನಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಮಹಿಳಾ ಸೂಪರ್ ಹೀರೊ ಕತೆಯನ್ನು ಹೊಂದಿರುವ ಈ ಚಲನಚಿತ್ರಕ್ಕೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ 31ರಂದು ಕೇರಳದಾದ್ಯಂತ ಈ ಚಲನಚಿತ್ರವು ಹೆಚ್ಚುವರಿಯಾಗಿ 300 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರಕ್ಕೆ ಸಿನಿಮಾ ಪ್ರೇಮಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.