Kerala | ಪತ್ತನಂತಿಟ್ಟದಲ್ಲಿ LDFಗೆ ಹಿನ್ನಡೆ: ಮೀಸೆ ಬೋಳಿಸಿ ಕೊಟ್ಟ ಮಾತು ಉಳಿಸಿಕೊಂಡ ಕಾರ್ಯಕರ್ತ!

Photo : x/@chnmharish
ಪತ್ತನಂತಿಟ್ಟ, ಡಿ.14: ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪತ್ತನಂತಿಟ್ಟ ಜಿಲ್ಲೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ (LDF) ಭಾರೀ ಹಿನ್ನಡೆ ಎದುರಾಗಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ರಾಜಕೀಯ ಹಿನ್ನಡೆಯ ಮಧ್ಯೆ, LDF ಕಾರ್ಯಕರ್ತರೊಬ್ಬರು ಕೊಟ್ಟ ಮಾತು ಉಳಿಸಿಕೊಂಡು ಗಮನ ಸೆಳೆದಿದ್ದಾರೆ.
ಚುನಾವಣೆಗೆ ಮುನ್ನ ‘LDF ಪುರಸಭೆಯನ್ನು ಕಳೆದುಕೊಂಡರೆ ನನ್ನ ಮೀಸೆ ಬೋಳಿಸಿಕೊಳ್ಳುತ್ತೇನೆ’ ಎಂದು ಸಾರ್ವಜನಿಕವಾಗಿ ಹೇಳಿದ್ದ ಬಾಬು ವರ್ಗೀಸ್, ಫಲಿತಾಂಶ ಪ್ರಕಟವಾದ ಬಳಿಕ ತಮ್ಮ ಮಾತಿನಂತೆ ಮೀಸೆ ಬೋಳಿಸಿಕೊಂಡರು.
ಪತ್ತನಂತಿಟ್ಟ ಪುರಸಭೆಯನ್ನು LDF ಕಳೆದುಕೊಂಡಿರುವುದು ಸ್ಥಳೀಯ ಮಟ್ಟದಲ್ಲಿ ಎಡಪಕ್ಷಗಳಿಗೆ ತೀವ್ರ ಆಘಾತವಾಗಿ ಪರಿಣಮಿಸಿದೆ. ಪತ್ತನಂತಿಟ್ಟ ಜಿಲ್ಲಾ ಪಂಚಾಯತ್ನ 16 ಸ್ಥಾನಗಳಲ್ಲಿ ಯುಡಿಎಫ್ 12 ಸ್ಥಾನಗಳನ್ನು ಗೆದ್ದು ಬಹುಮತ ಗಳಿಸಿದೆ. ಹಿಂದಿನ ಚುನಾವಣೆಯಲ್ಲಿ 12 ಸ್ಥಾನಗಳನ್ನು ಪಡೆದಿದ್ದ LDF ಈ ಬಾರಿ ಐದು ಸ್ಥಾನಗಳಿಗೆ ಕುಸಿದಿದೆ. ಇದಲ್ಲದೆ, ಯುಡಿಎಫ್ 34 ಗ್ರಾಮ ಪಂಚಾಯತ್ ಗಳು ಮತ್ತು ಏಳು ಬ್ಲಾಕ್ ಪಂಚಾಯತ್ಗಳಲ್ಲಿ ಬಹುಮತ ಪಡೆದಿದೆ. ಪುರಸಭೆ ಚುನಾವಣೆಯಲ್ಲಿಯೂ ಮೂರು ಪುರಸಭೆಗಳಲ್ಲಿ ಜಯ ಗಳಿಸಿದ್ದು, ಅವುಗಳಲ್ಲಿ ಎರಡು ಹಿಂದೆ ಎಡಪಕ್ಷಗಳ ಹಿಡಿತದಲ್ಲಿದ್ದವು.







