ಶಾರ್ಜಾದಲ್ಲಿ ಕೇರಳ ಮೂಲದ ಮಹಿಳೆ, ಒಂದು ವರ್ಷದ ಮಗು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಆತ್ಮಹತ್ಯೆ ಶಂಕೆ
ಪತಿಯ ಕುಟುಂಬಸ್ಥರ ವಿರುದ್ಧ ಕೇರಳದಲ್ಲಿ ಪ್ರಕರಣ ದಾಖಲು

PC : NDTV
ಯುಎಇ: ಕೇರಳ ಮೂಲದ ಒಂದು ವರ್ಷದ ಮಗು ಹಾಗೂ ತಾಯಿಯ ಮೃತದೇಹ ಯುನೈಟೆಡ್ ಅರಬ್ ಎಮಿರೇಟ್ಸ್ ಶಾರ್ಜಾದಲ್ಲಿನ ಅಪಾರ್ಟ್ಮೆಂಟ್ ನಲ್ಲಿ ಪತ್ತೆಯಾಗಿದ್ದು, ಪತಿಯ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಮೃತ ಮಹಿಳೆಯನ್ನು ಕೇರಳದ ಕೊಲ್ಲಂ ಸಮೀಪದ ವಿಪಂಚಿಕಾ ಮ್ಯಾನಿಯನ್ ಎಂದು ಗುರುತಿಸಲಾಗಿದ್ದು, ಪತಿಯಿಂದ ವರದಕ್ಷಿಣೆ ಕಿರುಕುಳ ಇತ್ತು ಎಂದು ಆರೋಪಿಸಲಾಗಿದೆ.
ಜುಲೈ 8 ರಂದು ಘಟನೆ ನಡೆದಿದ್ದು, ಮಗು ಉಸಿರುಗಟ್ಟಿ ಮೃತಪಟ್ಟಿದೆ, ಬಹುಶ ತಾಯಿ ಆತ್ಮಹತ್ಯೆಗೈಯುವ ಮುನ್ನ ಮಗುವನ್ನು ಕೊಂದಿರಬೇಕು ಎಂದು ಅನುಮಾನಿಸಲಾಗಿದೆ.
ʼಖಲೀಜ್ ಟೈಮ್ಸ್ʼ ವರದಿಯ ಪ್ರಕಾರ, ಮಹಿಳೆ ಬರೆದಿದ್ದಾರೆ ಎನ್ನಲಾದ ಮಲಯಾಳಂನಲ್ಲಿರುವ ಕೈಬರಹದ ಟಿಪ್ಪಣಿಯು ಸ್ಥಳದಲ್ಲಿ ಲಭ್ಯವಾಗಿದೆ. ಆತ್ಮಹತ್ಯಾ ಪತ್ರದಲ್ಲಿ, ಮಾನಸಿಕ ಯಾತನೆ ಹಾಗೂ ದೌರ್ಜನ್ಯವನ್ನು ಆರೋಪಿಸಲಾಗಿದೆ.
ಮೃತ ಮಹಿಳೆ ಕುಟುಂಬವು ಆಕೆಯ ಪತಿ ನಿಧೇಶ್ ವಲಿಯಾವೆಟ್ಟಿಲ್ ವಿರುದ್ಧ ಕೇರಳ ಪೊಲೀಸರಿಗೆ ದೂರು ನೀಡಿದ್ದು, ಪತಿ ಮತ್ತು ಅಳಿಯಂದಿರಿಂದ ನಿರಂತರ ವರದಕ್ಷಿಣೆ ಮತ್ತು ಜನಾಂಗೀಯ ನಿಂದನೆಯನ್ನು ಮಹಿಳೆ ಎದುರಿಸುತ್ತಿದ್ದರು ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, ನಿದೀಶ್ ಹಾಗೂ ವಿಪಂಚಿಕಾ 2020 ರಲ್ಲಿ ವಿವಾಹವಾಗಿದ್ದು, ಬಳಿಕ ಶಾರ್ಜಾಗೆ ತೆರಳಿದ್ದರು.
ಗಂಡನ ಕುಟುಂಬಸ್ಥರು ನೀಡಿದ ಕಿರುಕುಳ ಸಹಿಸಲು ಸಾಧ್ಯವಾಗದೆ, ವಿಪಂಚಿಕಾ ಜುಲೈ 8 ರಂದು ಆತ್ಮಹತ್ಯೆಗೆ ಹೆಜ್ಜೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.