ಪಾಕ್ ಗುರು ನಾನಕ್ ಗುರುದ್ವಾರ ಭೇಟಿ ಮೇಲಿನ ನಿಷೇಧ ತೆರವುಗೊಳಿಸಿ : ಕೇಂದ್ರ ಸರಕಾರಕ್ಕೆ ಸಿಖ್ ನಾಯಕರಿಂದ ಮನವಿ

PC : ANI
ಹೊಸದಿಲ್ಲಿ, ಸೆ. 17: ಸಿಖ್ ಧರ್ಮದ ಸ್ಥಾಪಕ ಗುರು ನಾನಕ್ರ ಆರಾಧನಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗುವಂತೆ, ಪಾಕಿಸ್ತಾನಕ್ಕೆ ಪ್ರಯಾಣಿಸುವುದನ್ನು ನಿಷೇಧಿಸಿ ಇತ್ತೀಚೆಗೆ ಹೇರಲಾಗಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಸಿಖ್ ಸಮುದಾಯದ ನಾಯಕರು ಬುಧವಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಪಾಕಿಸ್ತಾನದಲ್ಲಿರುವ ಸಿಖ್ ಮಂದಿರಗಳ ಉಸ್ತುವಾರಿ ಹೊತ್ತಿರುವ ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ ಸಮಿತಿಯ ಉಪಾಧ್ಯಕ್ಷ ಮಹೇಶ್ ಸಿಂಗ್ ಈ ಮನವಿ ಮಾಡಿದ್ದಾರೆ.
ಗುರು ನಾನಕ್ರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಹೋಗಲು ಸಿಖ್ಖರಿಗೆ ಅನುಮತಿ ನಿರಾಕರಿಸುವ ನಿರ್ಧಾರವನ್ನು ಕೇಂದ್ರ ಸರಕಾರ ಸೆಪ್ಟಂಬರ್ 12ರಂದು ತೆಗೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ ಭಾರತ ಸರಕಾರವು ಈ ನಿರ್ಧಾರ ತೆಗೆದುಕೊಂಡಿದೆ.
ಎಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಮೇ ತಿಂಗಳಲ್ಲಿ ಪಾಕಿಸ್ತಾನದಲ್ಲಿ ನೆಲೆ ಹೊಂದಿರುವ ಭಯೋತ್ಪಾದಕ ಗುಂಪುಗಳ ಶಿಬಿರಗಳ ಮೇಲೆ ನಡೆಸಿದ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ.
ಸಂಬಂಧ ಹದಗೆಟ್ಟಿರುವ ಹೊರತಾಗಿಯೂ, ಪ್ರಸ್ತುತ ಅಸ್ತಿತ್ವದಲ್ಲಿರುವ ಏರ್ಪಾಡುಗಳ ಅನ್ವಯ, ಪಾಕಿಸ್ತಾನದಲ್ಲಿರುವ ಆರಾಧನಾಲಯಗಳಿಗೆ ಸಿಖ್ ಮತ್ತು ಇತರ ಧರ್ಮೀಯ ಭಾರತೀಯ ಯಾತ್ರಿಕರು ಈಗಲೂ ಪಾಕಿಸ್ತಾನಕ್ಕೆ ಬರಬಹುದಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.