ಗುಜರಾತ್ | 7.3 ಕೋಟಿ ರೂ.ಗಳ ನರೇಗಾ ಹಗರಣ ಬಹಿರಂಗ

ಸಾಂದರ್ಭಿಕ ಚಿತ್ರ | PC : PTI
ಅಹ್ಮದಾಬಾದ್: ಗುಜರಾತಿನಲ್ಲಿ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ(ನರೇಗಾ)ಯ ಅನುಷ್ಠಾನದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಲೇ ಇದೆ. ದಾಹೋಡ್, ಪಂಚಮಹಲ್ ಮತ್ತು ನರ್ಮದಾ ಜಿಲ್ಲೆಗಳಲ್ಲಿ ಭಾರೀ ಅಕ್ರಮಗಳು ಬೆಳಕಿಗೆ ಬಂದ ಬೆನ್ನಲ್ಲೇ ಈಗ ಭರೂಚ್ ಜಿಲ್ಲೆಯೂ ಈ ಪಟ್ಟಿಗೆ ಸೇರಿದ್ದು, ನರೇಗಾ ಯೋಜನೆಯಡಿ ಮತ್ತೊಂದು ಬಹು ಕೋಟಿ ರೂ.ಗಳ ಹಗರಣ ಬಹಿರಂಗಗೊಂಡಿದೆ.
ಭರೂಚ್ ಎ ಡಿವಿಜನ್ ಪೋಲಿಸ್ ಠಾಣೆಯಲ್ಲಿ ಶುಕ್ರವಾರ ದಾಖಲಾಗಿರುವ ಎಫ್ ಐ ಆರ್ ಪ್ರಕಾರ ಅಮೋದ್, ಜಂಬುಸಾರ್ ಮತ್ತು ಹಂಸೋತ್ ತಾಲೂಕುಗಳ 56 ಗ್ರಾಮಗಳಲ್ಲಿ ವಂಚನೆಗಳ ಮೂಲಕ 7.3 ಕೋಟಿ ರೂ.ಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಗುತ್ತಿಗೆದಾರರು ಮತ್ತು ಸರಕಾರಿ ಸಿಬ್ಬಂದಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎಫ್ ಐ ಆರ್ ನಲ್ಲಿ ಮುರಳೀಧರ ಎಂಟರ್ಪ್ರೈಸ್ ಮತ್ತು ಜಲಾರಾಮ್ ಎಂಟರ್ಪ್ರೈಸ್ ಎಂಬ ಎರಡು ಸಂಸ್ಥೆಗಳನ್ನು ಹೆಸರಿಸಲಾಗಿದ್ದು, ಜ.20,2023ರಿಂದ ಈವರೆಗೆ 11 ಗ್ರಾಮಗಳಲ್ಲಿ ರಸ್ತೆ ಕಾಮಗಾರಿಗಳಲ್ಲಿ ಭಾರೀ ಅಕ್ರಮಗಳನ್ನು ಎಸಗಿವೆ ಎಂದು ಆರೋಪಿಸಲಾಗಿದೆ.
ಗುತ್ತಿಗೆದಾರರು ಕಾಮಗಾರಿಯಲ್ಲಿ ಸಾಮಾಗ್ರಿಗಳ ನಿರ್ದಿಷ್ಟ ಗುಣಮಟ್ಟವನ್ನು ಕಾಯ್ದುಕೊಂಡಿರಲಿಲ್ಲ ಎಂದು ಎಫ್ ಐ ಆರ್ ನಲ್ಲಿ ಆರೋಪಿಸಲಾಗಿದ್ದು, ವಂಚನೆಯ ಪ್ರಮಾಣ ಗಮನಾರ್ಹವಾಗಿದೆ. ಬಿಲ್ ಗಳು ನಕಲಿ ಎನ್ನುವುದು ತಿಳಿದಿದ್ದರೂ ಮುರಳೀಧರ ಎಂಟರ್ಪ್ರೈಸಸ್ ಗೆ 13,05,676.51 ಲಕ್ಷ ರೂ. ಮತ್ತು ಜಲಾರಾಮ ಎಂಟರ್ಪ್ರೈಸಸ್ ಗೆ 6,58,898.89 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಎರಡೂ ಮೊತ್ತಗಳನ್ನು ಸಂಸ್ಕರಿಸಿ ನಿಜವಾದ ಮೊತ್ತವೆಂದು ಪಾವತಿಸಲಾಗಿದ್ದು, ಇದರಿಂದಾಗಿ ಗುತ್ತಿಗೆದಾರರು ಒಟ್ಟು 19,64,575.40 ಲಕ್ಷ ರೂ.ಗಳ ಅಕ್ರಮ ಲಾಭಗಳನ್ನು ಗಳಿಸಿದ್ದಾರೆ ಎಂದು ಹೇಳಿದೆ.
ವಂಚನೆ ಖಾಸಗಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸರಕಾರಿ ಸಿಬ್ಬಂದಿಗಳ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿರುವ ಎಫ್ಐಆರ್, ವ್ಯಾಪಕ ಮತ್ತು ಪೂರ್ವಯೋಜಿತ ಸಂಚನ್ನು ಬೆಟ್ಟು ಮಾಡಿದೆ. ಎರಡೂ ಏಜೆನ್ಸಿಗಳಿಗೆ ಸಾಮಗ್ರಿಗಳನ್ನು ಪೂರೈಸಲು ಮಾತ್ರ ಅವಕಾಶ ನೀಡಲಾಗಿದ್ದರೂ ಸರಕಾರಿ ಅಧಿಕಾರಿಗಳು, ಉದ್ಯೋಗಿಗಳು ಮತ್ತು ಗುತ್ತಿಗೆ ಸಿಬ್ಬಂದಿಗಳು ನರೇಗಾದ ಇ-ಗ್ರಾಮ ಪಂಚಾಯತ್ ಶಿಷ್ಟಾಚಾರಗಳನ್ನು ಕಡೆಗಣಿಸಿ ಈ ಏಜೆನ್ಸಿಗಳೊಂದಿಗೆ ಶಾಮೀಲಾಗಿದ್ದರು. ಯಂತ್ರಗಳನ್ನು ಬಳಸಿ ರಸ್ತೆಗಳನ್ನು ನಿರ್ಮಿಸಿದ್ದರು ಮತ್ತು ನಕಲಿ ಕಾಮಗಾರಿಯ ಪ್ರಸ್ತಾವಗಳನ್ನು ಸಲ್ಲಿಸಿದ್ದರು ಎಂದು ಅದು ತಿಳಿಸಿದೆ.
ಇವು ಕೇವಲ ಎರಡು ನಿದರ್ಶನಗಳಾಗಿದ್ದು, ಕೇವಲ 11 ಗ್ರಾಮಗಳಿಗೆ ಸೀಮಿತಗೊಂಡಿದೆ. ಎಫ್ ಐ ಆರ್ ನಲ್ಲಿ ಬಹಿರಂಗವಾಗಿರುವಂತೆ ವಂಚನೆಯ ಪರಿಣಾಮವು ಅಗಾಧವಾಗಿದೆ. ಪಿತೂರಿಯು ಸಾರ್ವಜನಿಕ ಆಸ್ತಿಯ ದುರುಪಯೋಗ,ಮೋಸದ ಪ್ರಸ್ತಾವಗಳ ಸಲ್ಲಿಕೆ,ಹಣದ ದುರ್ಬಳಕೆ ಮತ್ತು ಅಂತಿಮವಾಗಿ ಭರೂಚ್ ಜಿಲ್ಲೆಯ 56 ಗ್ರಾಮಗಳಾದ್ಯಂತ ರಾಜ್ಯದ ಖಜಾನೆಗೆ 7.3 ಕೋಟಿ ರೂ.ಗಳ ನಷ್ಟಕ್ಕೆ ಕಾರಣವಾಗಿದೆ.