ಜಾರ್ಖಂಡ್ | ಬಡವರಿಗೆ ಉಚಿತ ಔಷಧಿ ಪೂರೈಸಲು 700 ಮೆಡಿಕಲ್ ಸ್ಟೋರ್ಗಳನ್ನು ಆರಂಭಿಸಲಿರುವ ಸರಕಾರ!

ಸಾಂದರ್ಭಿಕ ಚಿತ್ರ
ರಾಂಚಿ,ಸೆ.17: ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಹೆಜ್ಜೆಯಾಗಿ ಜಾರ್ಖಂಡ್ ಸರಕಾರವು ಬಡವರಿಗೆ ಉಚಿತ ಔಷಧಿಗಳನ್ನು ಒದಗಿಸಲು ರಾಜ್ಯಾದ್ಯಂತ 700 ‘ಅಬುವಾ’ ಮೆಡಿಕಲ್ ಸ್ಟೋರ್ಗಳನ್ನು ಆರಂಭಿಸಲಿದೆ.
ಈ ಯೋಜನೆಯು ದುರ್ಬಲ ವರ್ಗಗಳಿಗೆ ಉಚಿತ ಔಷಧಿಯನ್ನು ಒದಗಿಸುವ ಮತ್ತು ತನ್ಮೂಲಕ ಬಡವರಿಗೆ ಆರೋಗ್ಯ ಸೇವೆಯನ್ನು ದೊರಕಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ ಆರೋಗ್ಯ ಸಚಿವ ಡಾ.ಇರ್ಫಾನ್ ಅನ್ಸಾರಿಯವರು, ಬಡವರಿಗೆ ಉಚಿತ ಔಷಧಿಗಳು ಲಭಿಸುವಂತಾಗಲು ರಾಜ್ಯಾದ್ಯಂತ ಅಬುವಾ ಔಷಧಿ ಅಂಗಡಿಗಳನ್ನು ಆರಂಭಿಸುವಂತೆ ಮುಖ್ಯಮತ್ರಿ ಹೇಮಂತ ಸೊರೇನ್ ನಿರ್ದೇಶನ ನೀಡಿದ್ದಾರೆ. ಮೊದಲ ಹಂತದಲ್ಲಿ 700 ಔಷಧಿ ಅಂಗಡಿಗಳನ್ನು ತೆರೆಯಲಾಗುವುದು. ನಂತರದ ಹಂತದಲ್ಲಿ ಇನ್ನಷ್ಟು ಅಂಗಡಿಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.
ಔಷಧಿಗಳು ಎಲ್ಲರಿಗೂ ತಲುಪಬೇಕು ಮತ್ತು ಯಾವುದೇ ಬಡ ವ್ಯಕ್ತಿ ಚಿಕಿತ್ಸೆಯ ಕೊರತೆಯ ಕಾರಣದಿಂದಾಗಿ ಸಾಯಬಾರದು ಎನ್ನುವುದು ಸರಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಅನ್ಸಾರಿ ತಿಳಿಸಿದರು.