ಬೇಹುಗಾರಿಕೆ ಪ್ರಕರಣ: ಐಎಸ್ಐ ಗೆ ಸಿಮ್ ಕಾರ್ಡ್ ಗಳನ್ನು ಪೂರೈಸಿದ್ದ ಆರೋಪಿಯ ಸಹೋದರನನ್ನು ಬಂಧಿಸಿದ ದಿಲ್ಲಿ ಪೊಲೀಸರು

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಬೇಹುಗಾರಿಕೆ ಚಟುವಟಿಕೆಗಳಿಗಾಗಿ ಪಾಕಿಸ್ತಾನದ ಐಎಸ್ಐ ನಿರ್ವಾಹಕರಿಗೆ ಭಾರತೀಯ ಸಿಮ್ ಕಾರ್ಡ್ ಗಳನ್ನು ಪೂರೈಸುವ ಮೂಲಕ ಅವರಿಗೆ ನೆರವು ನೀಡುತ್ತಿದ್ದ ಆರೋಪದ ಮೇಲೆ ಓರ್ವ ವ್ಯಕ್ತಿಯನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೀಗ ದಿಲ್ಲಿ ಪೊಲೀಸರಿಂದ ಬಂಧಿತನಾಗಿರುವ ಆರೋಪಿ ಅಸೀಂ, ಬೇಹುಗಾರಿಕೆ ಚಟುವಟಿಕೆಗಳಿಗಾಗಿ ಪಾಕಿಸ್ತಾನದ ಗುಪ್ತಚರ ನಿರ್ವಾಹಕರಿಗೆ ಭಾರತೀಯ ಮೊಬೈಲ್ ಸಿಮ್ ಕಾರ್ಡ್ ಗಳನ್ನು ಪೂರೈಸಿದ ಆರೋಪದ ಮೇಲೆ ಈ ಮುನ್ನ ದಿಲ್ಲಿ ಪೊಲೀಸರಿಂದ ಬಂಧಿತನಾಗಿದ್ದ ಖಾಸಿಮ್ (34) ಎಂಬ ವ್ಯಕ್ತಿಯ ಸಹೋದರ ಎಂದು ಹೇಳಲಾಗಿದೆ. ಈ ಸಿಮ್ ಕಾರ್ಡ್ ಗಳನ್ನು ಭಾರತೀಯ ಸೇನೆ ಹಾಗೂ ಇನ್ನಿತರ ಸೂಕ್ಷ್ಮ ಸರಕಾರಿ ಸಂಸ್ಥೆಗಳ ಕುರಿತು ಗುಪ್ತಚರ ಮಾಹಿತಿಗಳನ್ನು ಕಲೆ ಹಾಕಲು ಬಳಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ನಾನು ಪಾಕಿಸ್ತಾನಕ್ಕೆ ತೆರಳಿದ್ದಾಗ, ನಿನ್ನ ಸಹೋದರನೂ ಈಗಾಗಲೇ ನಮಗಾಗಿ ಕೆಲಸ ಮಾಡುತ್ತಿದ್ದು, ನೀನೂ ಕೂಡಾ ಹಾಗೆಯೇ ಮಾಡಬೇಕು ಎಂದು ಪಾಕಿಸ್ತಾನ ಗುಪ್ತಚರ ನಿರ್ವಾಹಕರು ನನಗೆ ತಿಳಿಸಿದ್ದರು ಎಂದು ವಿಚಾರಣೆಯ ವೇಳೆ ಆರೋಪಿ ಖಾಸಿಂ ಬಹಿರಂಗಪಡಿಸಿದಾಗ ಅಸೀಂ ಹೆಸರು ಬಯಲಿಗೆ ಬಂದಿತು ಎಂದು ಹೇಳಿವೆ. ಇದರಿಂದಾಗಿ, ಸದ್ಯ ನಡೆಯುತ್ತಿರುವ ಬೇಹುಗಾರಿಕೆ ಪ್ರಕರಣದ ತನಿಖೆಯ ತನಿಖಾಧಿಕಾರಿಗಳು ಅಸೀಂ ಹೆಸರನ್ನೂ ಸೇರ್ಪಡೆ ಮಾಡಿವೆ.
ಆರೋಪಿ ಅಸೀಂನನ್ನು ಬಂಧಿಸಿದ ದಿಲ್ಲಿ ಪೊಲೀಸರು, ಆತನನ್ನು ಪಟಿಯಾಲ ಹೌಸ್ ನ್ಯಾಯಾಲಯದೆದುರು ಹಾಜರುಪಡಿಸಿದರು. ನಂತರ, ನ್ಯಾಯಾಲಯವು ಮತ್ತಷ್ಟು ವಿಚಾರಣೆಗಾಗಿ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದೆ.