ಬಿಹಾರದಲ್ಲಿ ಅದಾನಿ ಪವರ್ ಲಿಮಿಟೆಡ್ಗೆ ವರ್ಷಕ್ಕೆ 1ರೂ. ದರದಲ್ಲಿ 1,050 ಎಕರೆ ಭೂಮಿ ಉಡುಗೊರೆ: ಕಾಂಗ್ರೆಸ್ ಆರೋಪ

ಗೌತಮ್ ಅದಾನಿ (Photo: PTI)
ಪಾಟ್ನಾ: ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಪವರ್ ಲಿಮಿಟೆಡ್ಗೆ ಭಾಗಲ್ಪುರ ಜಿಲ್ಲೆಯ ಪಿರ್ಪೈಂತಿ ಗ್ರಾಮದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ವರ್ಷಕ್ಕೆ 1ರೂ. ದರದಲ್ಲಿ 1,050 ಎಕರೆ ಭೂಮಿಯನ್ನು ನೀಡಿದೆ ಎಂದು ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪವನ್ನು ಮಾಡಿದೆ.
ಈ ಕುರಿತು ದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ಅದಾನಿ ಪವರ್ ಲಿಮಿಟೆಡ್ನ ಉಷ್ಣ ಸ್ಥಾವರ ನಿರ್ಮಾಣಕ್ಕಾಗಿ ಭಾಗಲ್ಪುರದ ರೈತರಿಗೆ ತಮ್ಮ ಭೂಮಿಯನ್ನು ಬಿಟ್ಟುಕೊಡುವಂತೆ ಬೆದರಿಕೆ ಹಾಕಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅದೇ ವಿದ್ಯುತ್ ಸ್ಥಾವರಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ ಎಂದು ಖೇರಾ ಆರೋಪಿಸಿದ್ದಾರೆ.
ಮಾವು, ಲಿಚಿ ಮತ್ತು ತೇಗ ಸೇರಿದಂತೆ 10 ಲಕ್ಷ ಮರಗಳು ಮತ್ತು 1,050 ಎಕರೆ ಭೂಮಿಯನ್ನು ವರ್ಷಕ್ಕೆ 1 ರೂ. ದರದಲ್ಲಿ 33 ವರ್ಷಗಳ ಕಾಲ ಅದಾನಿ ಗುಂಪಿಗೆ ಹಸ್ತಾಂತರಿಸಲಾಗಿದೆ. ಮೋದಿ ಅವರು ಬಿಹಾರಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಬಾರದು ಎಂಬ ಕಾರಣಕ್ಕೆ ಅವರನ್ನೆಲ್ಲಾ ಗೃಹಬಂಧನದಲ್ಲಿರಿಸಲಾಗಿದೆ ಪವನ್ ಖೇರಾ ಆರೋಪಿಸಿದ್ದಾರೆ.
1,400 ಕೋಟಿ ಮೊತ್ತದಲ್ಲಿ ಕೈಗೊಂಡಿರುವ 2,400 ಮೆಗಾವಾಟ್ ಯೋಜನೆ ಇದಾಗಿದ್ದು, ಆಯವ್ಯಯ ಮಂಡನೆ ವೇಳೆಯೇ ಇದನ್ನು ಘೋಷಿಸಲಾಗಿತ್ತು. ಆಗ ಸರಕಾರವೇ ಸ್ಥಾವರ ಸ್ಥಾಪಿಸುವುದಾಗಿ ಹೇಳಿತ್ತು. ಆ ಬಳಿಕ ಯೋಜನೆಯಿಂದ ಹಿಂದಕ್ಕೆ ಸರಿದ ಸರಕಾರ ಯೋಜನೆಯನ್ನು ಗೌತಮ್ ಅದಾನಿಗೆ ಹಸ್ತಾಂತರಿಸಿದೆ’ ಎಂದು ಪವನ್ ಖೇರಾ ಆರೋಪಿಸಿದ್ದಾರೆ.
"ಭೂಮಿ, ಮರಗಳು, ಕಲ್ಲಿದ್ದಲು, ಎಲ್ಲವನ್ನೂ ಅದಾನಿ ಸಂಸ್ಥೆಗೆ ನೀಡಲಾಗಿದೆ. ಬಿಹಾರದ ಭೂಮಿ ಮತ್ತು ಸಂಪನ್ಮೂಲಗಳಿಂದ ನಿರ್ಮಿಸಲಾದ ವಿದ್ಯುತ್ ಸ್ಥಾವರವು ರಾಜ್ಯದ ಜನರಿಗೆ ಪ್ರತಿ ಯೂನಿಟ್ಗೆ 6.075 ರೂ. ದರದಲ್ಲಿ ವಿದ್ಯುತ್ ಮಾರಾಟ ಮಾಡುತ್ತದೆ. ಆದರೆ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಸ್ಥಿರ ದರವು 3 ರಿಂದ 5 ರೂ. ಆಗಿದೆ. ಇದು ಬಿಹಾರದ ಜನರ ಮೇಲಿನ ದುಪ್ಪಟ್ಟು ಶೋಷಣೆಯಾಗಿದೆ" ಎಂದು ಪವನ್ ಖೇರಾ ಆರೋಪಿಸಿದ್ದಾರೆ.