ಡೂನ್ ಕಣಿವೆಯಲ್ಲಿ ಮೇಘಸ್ಫೋಟ; ಪ್ರವಾಹದಿಂದ 13 ಮಂದಿ ಮೃತ್ಯು

PC: x.com/IndiaToday
ಡೆಹ್ರಾಡೂನ್/ಮಿಸ್ಸೋರಿ: ಡೂನ್ ಕಣಿವೆ ಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸಿದ ವಿಕೋಪಗಳಲ್ಲೇ ಅತ್ಯಂತ ಭೀಕರ ಎನ್ನಲಾದ ಮೇಘಸ್ಫೋಟ ಮತ್ತು ಪ್ರವಾಹದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಇತರ 16 ಮಂದಿ ನಾಪತ್ತೆಯಾಗಿದ್ದಾರೆ. ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಮತ್ತು ಮಂಗಳವಾರ ಬಿದ್ದ ವ್ಯಾಪಕ ಮಳೆಗೆ ಸೇತುವೆಗಳು ಮತ್ತು ಮಾರುಕಟ್ಟೆಗಳು ಕೊಚ್ಚಿಕೊಂಡು ಹೋಗಿದ್ದು, ಪ್ರಮುಖ ರಸ್ತೆಗಳು ಹಾನಿಗೀಡಾಗಿವೆ.
ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿದ್ದ ವ್ಯಾಪಕ ಮಳೆಯಿಂದ ದಿಢೀರ್ ಪ್ರವಾಹ ಪರಿಸ್ಥಿತಿ ಹಾಗೂ ಭೂಕುಸಿತದ ಪ್ರಕರಣಗಳು ವರದಿಯಾಗಿದ್ದು, ಎರಡು ರಾಜ್ಯಗಳಲ್ಲಿ ಒಂದೇ ದಿನ 18 ಮಂದಿ ಜೀವ ಕಳೆದುಕೊಂಡಿದ್ದಾರೆ.
ಡೆಹ್ರಾಡೂನ್ ಹೊರವಲಯದ ಸಹಸ್ರಧಾರಾ ಮತ್ತು ಮಾಲದೇವತಾ ಪ್ರೆದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದೆ. ಸಹಸ್ರಧಾರಾದಲ್ಲಿ ಕನಿಷ್ಠ 70 ಮಂದಿ ಗ್ರಾಮಸ್ಥರನ್ನು ರಾಜ್ಯ ವಿಪತ್ತು ಸ್ಪಂದನಾ ಪಡೆ ರಕ್ಷಿಸಿದೆ. ಈ ಭಾಗದ ಪ್ರಮುಖ ಮಾರುಕಟ್ಟೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಪ್ರವಾಸಿಗರಿಗಾಗಿ ನಿರ್ಮಿಸಲಾಗಿದ್ದ ಹಲವು ಅಂಗಡಿ ಮಳಿಗೆಗಳು ಮತ್ತು ಅಡುಗೆಮನೆಗಳು ನಾಶವಾಗಿವೆ.
ಸಹಸ್ರಧಾರಾ-ಕಾರ್ಲಿಗಡ್ ರಸ್ತೆಯಲ್ಲಿ ಒಂಬತ್ತಕ್ಕೂ ಹೆಚ್ಚು ಕಡೆಗಳಲ್ಲಿ ಭೂಕುಸಿತದಿಂದಾಗಿ ರಸ್ತೆಗೆ ಹಾನಿಯಾಗಿದ್ದು, ಸಾಂಗ್ ನದಿಯ ಪ್ರವಾಹವು ಮಾಲದೇವತಾ ಪ್ರದೇಶದಲ್ಲಿ ರಸ್ತೆಯನ್ನು ಕೊಚ್ಚಿಕೊಂಡು ಹೋಗಿದೆ. ಈ ಪ್ರದೇಶ ರಾಜ್ಯದ ಇತರೆಡೆಗಳ ಜತೆ ಸಂಪರ್ಕ ಕಡಿದುಕೊಂಡಿದೆ. ಮಂಗಳವಾರ ಬೆಳಿಗ್ಗೆ 8.30ರವರೆಗೆ ಕಳೆದ 24 ಗಂಟೆಗಳಲ್ಲಿ 264 ಮಿಲಿಮೀಟರ್ ಮಳೆಬಿದ್ದಿದ್ದು, ಮಧ್ಯರಾತ್ರಿ ವೇಳೆಗೆ ಮೇಘಸ್ಫೋಟದ ಅನುಭವವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.