ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಬಿಜೆಪಿಯ ಬೆಂಬಲವಿದೆ : ಅಮಿತ್ ಶಾ

ಅಮಿತ್ ಶಾ | PC : PTI
ಹೊಸದಿಲ್ಲಿ, ಸೆ. 17: ಮತದಾರರ ಪಟ್ಟಿಗಳನ್ನು ಶುದ್ಧೀಕರಿಸುವುದಕ್ಕಾಗಿ ಭಾರತೀಯ ಚುನಾವಣಾ ಆಯೋಗ ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯನ್ನು ಬಿಜೆಪಿ ಬೆಂಬಲಿಸುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಬಿಹಾರದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ‘ವೋಟರ್ ಅಧಿಕಾರ ಯಾತ್ರೆ’ಯ ಬಗ್ಗೆ ಕೆಂಡಕಾರಿದ ಅವರು, ನುಸುಳುಕೋರರನ್ನು ರಕ್ಷಿಸಲು ಆ ಪಕ್ಷವು ಈ ಅಭಿಯಾನವನ್ನು ನಡೆಸುತ್ತಿದೆ ಎಂದು ಆರೋಪಿಸಿದರು. ನುಸುಳುಕೋರರ ಸಹಾಯದಿಂದ ಚುನಾವಣೆಗಳನ್ನು ಗೆಲ್ಲಲು ಆ ಪಕ್ಷ ಬಯಸಿದೆ ಎಂದು ಅವರು ಹೇಳಿದರು.
ದಿಲ್ಲಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪಂಚಾಂಗ ಹಾಕುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘‘ರಾಹುಲ್ ಗಾಂಧಿ ನುಸುಳುಕೋರರನ್ನು ರಕ್ಷಿಸಿ ಎಂಬ ಅಭಿಯಾನವನ್ನು ನಡೆಸುತ್ತಿದ್ದಾರೆ. ಇದು ನುಸುಳುಕೋರರನ್ನು ಗುರುತಿಸುವ ಸಮಯ. ಕಾಂಗ್ರೆಸ್ ಪಕ್ಷವು ನುಸುಳುಕೋರರ ನೆರವಿನಿಂದ ಚುನಾವಣೆಯನ್ನು ಗೆಲ್ಲಲು ಬಯಸಿದೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಆರೋಪಿಸಿದರು.