ಅದಾನಿ ಸಮೂಹದ ಧಿರೌಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ಅನುಮತಿ ಪ್ರಕ್ರಿಯೆಯಲ್ಲಿ ಅಕ್ರಮ : ಜೈರಾಮ್ ರಮೇಶ್ ಆರೋಪ

ಜೈರಾಮ್ ರಮೇಶ್ | PC : PTI
ಹೊಸದಿಲ್ಲಿ, ಸೆ. 17: ಅದಾನಿ ಸಮೂಹದ ಧಿರೌಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯ ಅನುಮತಿ ಪ್ರಕ್ರಿಯೆಯಲ್ಲಿ ‘‘ಸ್ಪಷ್ಟ ಅಕ್ರಮ’’ಗಳ ಆರೋಪವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಬುಧವಾರ ಮರು ಉಚ್ಚರಿಸಿದ್ದಾರೆ.
ಈ ಯೋಜನೆ ಸಂವಿಧಾನದ ಐದನೇ ಪರಿಚ್ಛೇದದ ಅಡಿಯಲ್ಲಿ ಸಂರಕ್ಷಿಸಲಾದ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಪ್ರತಿಪಾದಿಸಲು ಅವರು ಲೋಕಸಭೆಯಲ್ಲಿ ಕಲ್ಲಿದ್ದಲು ಸಚಿವಾಲಯ 2023ರಲ್ಲಿ ನೀಡಿದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದರು.
ವಾರಗಳ ಹಿಂದೆ ತಾನು ಈ ಆರೋಪ ಮಾಡಿದ್ದೆ. ಆ ಆರೋಪಕ್ಕೆ ಪ್ರತಿಯಾಗಿ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಹೇಳಿಕೆ ನೀಡಿತ್ತು. ತನ್ನ ಹೇಳಿಕೆಯಲ್ಲಿ ಅದು ಸಂವಿಧಾನದ ಐದನೇ ಪರಿಚ್ಛೆದದ ಅಡಿಯಲ್ಲಿ ಬರುವ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಈ ಗಣಿಗಾರಿಕೆ ಪ್ರದೇಶ ಬರುವುದಿಲ್ಲ ಎಂದು ಅದು ಪ್ರತಿಪಾದಿಸಿತ್ತು. ಆದರೆ, ಇದು ತಪ್ಪು ಎಂದು ಅವರು ಹೇಳಿದ್ದಾರೆ.
ಜೈರಾಮ್ ರಮೇಶ್ ಅವರ ಆರೋಪಕ್ಕೆ ಸಂಬಂಧಿಸಿ ಪರಿಸರ ಸಚಿವಾಲಯ ಅಥವಾ ಅದಾನಿ ಸಮೂಹ ತತ್ಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಮೇಶ್ ಅವರ ಕಳೆದ ವಾರದ ಆರೋಪಕ್ಕೆ ಪ್ರತಿಕ್ರಿಯೆಯಾಗಿ ಪರಿಸರ ಸಚಿವಾಲಯ, ‘‘ಹಂತ 1 ಹಾಗೂ ಹಂತ 2- ಎರಡೂ ಹಂತಗಳಲ್ಲಿ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಸಮರ್ಪಕ ರೀತಿಯಲ್ಲಿ ಅನುಮತಿ ನೀಡಿದೆ. ಸಾಂವಿಧಾನಿಕ ಸಂರಕ್ಷಣೆಗಳ ಉಲ್ಲಂಘನೆಗಳಿಗೆ ಸಂಬಂಧಿಸಿದ ಆರೋಪ ತಪ್ಪು ಹಾಗೂ ದಾರಿ ತಪ್ಪಿಸುವಂತದ್ದು’’ ಎಂದು ಹೇಳಿದೆ.
‘‘ಮೊದಾನಿಯ ಧಿರೌಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗೆ ಸೆಪ್ಟಂಬರ್ 12ರಂದು ನೀಡಲಾದ ಅನುಮತಿ ಪ್ರಕ್ರಿಯೆಯಲ್ಲಿ ಸ್ಪಷ್ಟ ಅಕ್ರಮ ನಡೆದಿರುವ ಬಗ್ಗೆ ತಾನು ಧ್ವನಿ ಎತ್ತಿದ್ದೆ. ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಕೂಡಲೇ ಪ್ರತಿಕ್ರಿಯಿಸಿತ್ತು. ಈ ಗಣಿಗಾರಿಕೆ ಪ್ರದೇಶವು ಸಂವಿಧಾನದ ಐದನೇ ಪರಿಚ್ಛೇದದ ಸಂರಕ್ಷಿತ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಇಲ್ಲ; ಅರಣ್ಯ ಹಕ್ಕು ಕಾಯ್ದೆ, 2006ರ ಅಡಿಯಲ್ಲಿ ಅಗತ್ಯದ ಕಾನೂನು ಪ್ರಕ್ರಿಯೆಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಲಾಗಿತ್ತು ಎಂದು ಅದು ಪ್ರತಿಪಾದಿಸಿತ್ತು’’ ಎಂದು ಜೈರಾಮ್ ರಮೇಶ್ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.