ನಟಿ ದಿಶಾ ಪಟಾನಿ ಮನೆಯ ಮೇಲೆ ಗುಂಡಿನ ದಾಳಿ ಪ್ರಕರಣ | ಎನ್ಕೌಂಟರ್ ನಲ್ಲಿ ಇಬ್ಬರು ಆರೋಪಿಗಳು ಮೃತ್ಯು

ನಟಿ ದಿಶಾ ಪಟಾನಿ
ಗಾಝಿಯಾಬಾದ್: ಬಾಲಿವುಡ್ ನಟಿ ದಿಶಾ ಪಟಾನಿ ಅವರ ಬರೇಲಿ ನಿವಾಸದ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳು ಬುಧವಾರ ಬೆಳಿಗ್ಗೆ ಗಾಝಿಯಾಬಾದ್ ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಅಧಿಕೃತವಾಗಿ ತಿಳಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಆರೋಪಿಗಳು ಅಂತರರಾಷ್ಟ್ರೀಯ ಕ್ರಿಮಿನಲ್ ಗ್ಯಾಂಗ್ ಗೆ ಸೇರಿದ್ದವರು ಎನ್ನಲಾಗಿದೆ. ಸಂಘಟಿತ ಅಪರಾಧ ಜಾಲದ ಭಾಗವಾಗಿದ್ದ ಇವರು ಹಲವು ರಾಜ್ಯಗಳಲ್ಲಿ ಗಂಭೀರ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ತನಿಖಾ ಮೂಲಗಳು ಹೇಳಿವೆ.
ಸೆಪ್ಟೆಂಬರ್ 12ರ ಮುಂಜಾನೆ 3:45ರ ಸುಮಾರಿಗೆ ಬರೇಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ದಿಶಾ ಪಟಾನಿ ಅವರ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು.
ಘಟನೆಯ ಬಳಿಕ ಪೊಲೀಸರು ವಿಶೇಷ ದಳವನ್ನು ರಚಿಸಿ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಬುಧವಾರ ಬೆಳಿಗ್ಗೆ ಗಾಝಿಯಾಬಾದ್ ನಲ್ಲಿ ಪೊಲೀಸರು ಬೆನ್ನಟ್ಟಿದಾಗ, ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರೂ ಆರೋಪಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.