ಕಾಸರಗೋಡು ಕನ್ನಡಿಗರ ಶೈಕ್ಷಣಿಕ, ಉದ್ಯೋಗ ಸಮಸ್ಯೆ ಬಗೆಹರಿಸಲು ಕೇರಳ ಸರಕಾರಕ್ಕೆ ಆಗ್ರಹ

ಮಂಗಳೂರು: ಕಾಸರಗೋಡು ಕನ್ನಡಿಗರ ಶೈಕ್ಷಣಿಕ , ಉದ್ಯೋಗ ಸಂಬಂಧಿತ ಸಮಸ್ಯೆಗಳ ಬಗೆಹರಿಸಲು ಕೇರಳ ಸರಕಾರವನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ನೇತೃತ್ವದ ನಿಯೋಗವು ಆಗ್ರಹಿಸಿದೆ.
ಕೇರಳದ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಮಂಗಳವಾರ(ಸೆ.16) ತಿರುವನಂತಪುರದಲ್ಲಿನ ಸಿಎಂ ಕಚೇರಿಯಲ್ಲಿ ಭೇಟಿಯಾದ ನಿಯೋಗವು ಮನವಿ ಸಲ್ಲಿಸಿ ಕಾಸರಗೋಡು ಕನ್ನಡಿಗರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಆಗ್ರಹಿಸಿದೆ.
ಕರ್ನಾಟಕ ಗಡಿ ಅಭಿವೃದಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ಅರನ್ನೊಳಗೊಂಡ ನಿಯೋಗವು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಕಾಸರಗೋಡು ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ರಾಷ್ಟ್ರೀಯ ಹೆದ್ದಾರಿ, ರೇಲ್ವೆ ಸ್ಟೇಷನ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದಲ್ಲಿ ನಾಮಫಲಕ, ಕೇರಳದ ನೇಮಕಾತಿಗಳಲ್ಲಿ ಭಾಷಾಅಲ್ಪಸಂಖ್ಯಾತರಿಗೆ ನಿಯಮಾನುಸಾರ ಮೀಸಲಾತಿ,ರೇಶನ್‌ಕಾರ್ಡ್, ಮತದಾರರ ಗುರುತಿನ ಚೀಟಿಗಳಲ್ಲಿ ಕನ್ನಡಭಾಷೆ ಅಳವಡಿಕೆ, ಬದಿಯಡ್ಕದ ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಭವನಕ್ಕೆ ರಸ್ತೆ ಸಂಪರ್ಕ ವ್ಯವಸ್ಥೆ , ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಅನುದಾನ,ಕಾಸರಗೋಡು ಜಿಲ್ಲೆಗಳ ಶಾಲೆಗಳಿಗೆ ಕಡ್ಡಾಯವಾಗಿ ಕನ್ನಡ ಶಿಕ್ಷಕರ ನೇಮಕ,ಪ್ರಭಾಕರನ್ ಸಮಿತಿ ವರದಿ ಅನುಷ್ಠಾನ, ಕಾಸರಗೋಡು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.
*ಉದ್ಘಾಟನೆಗೆ ಆಹ್ವಾನ: ಬದಿಯಡ್ಕದ ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಸಾಂಸ್ಕೃತಿಕ ಭವನದ ಉದ್ಘಾಟನೆಗೆ ಕೇರಳದ ಮುಖ್ಯಮಂತ್ರಿಗಳಿಗೆ ಇದೇ ಸಂದರ್ಭದಲ್ಲಿ ಆಹ್ವಾನ ನೀಡಲಾಯಿತು.
ಇದೇ ಸಂದರ್ಭದಲ್ಲಿ ನಿಯೋಗವು ಕೇರಳ ವಿಧಾನಸಭೆಯ ಸ್ಪೀಕರ್ ಶಂಶೀರ್ , ವಿಪಕ್ಷ ನಾಯಕ ವಿ.ಡಿ. ಸತೀಶ್ ಅವರನ್ನು ಭೇಟಿ ಯಾ ಗಿ ಆಹ್ವಾನ ನೀಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.